ಪಡುಕೊಣಾಜೆಯ ವಸಂತಿ ಪೂಜಾರಿ ಮತ್ತವರ ಮಗಳು ಸ್ನೇಹಾ .ಇಬ್ಬರೇ ಇರುವ ಬಡ ಕುಟುಂಬ. ಸೋರುತ್ತಿದ್ದ ಮನೆ, ಬೆಳಕಿಲ್ಲದ ಮನೆ,ಯಾವ ಸೌಕರ್ಯಗಳೂ ಇಲ್ಲದ ಆ ಮನೆಯಲ್ಲಿ ಹೆಣ್ಣೊಬ್ಬಳು ಕಷ್ಟಪಟ್ಟು ಕಲಿಯುತ್ತಿದ್ದಳು.ಹಿಂದೊಮ್ಮೆ ಇದೇ ಮನೆಗೆ ಚಿರತೆದಾಳಿ ನಡೆದಿತ್ತು.
ವಸಂತಿ ಪೂಜಾರಿಯವರೇ ದುಡಿದ ಹಣದಿಂದ ತಾಯಿ ಮಗಳಿಬ್ಬರ ಜೀವನ ಸಾಗಬೇಕಿತ್ತು.ಇಂತಹ ಅಸಹಾಯಕ ಬಡ ಕುಟುಂಬದ ಬಗ್ಗೆ ಮಾಹಿತಿ ತಿಳಿದ ಉಡುಪಿಯ ಸಮಾನ ಮನಸ್ಕರ ತಂಡವು ಅವರಿಗೊಂದು ಸುಂದರವಾದ ಮನೆ ನಿರ್ಮಿಸಿ ಹಸ್ತಾಂತರಿಸಿದೆ.
ಶನಿವಾರ ಸಂಜೆ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷರೂ,ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ನ ಕಾರ್ಯದರ್ಶಿ ಸುದರ್ಶನ ಎಂ.ಅವರು ಮನೆಯೊಡತಿಗೆ ಕೀ ಹಸ್ತಾಂತರಿಸಿ ಶುಭ ಹಾರೈಸಿದರು.



ಸಮಾನ ಮನಸ್ಕರ ತಂಡದ ಶಶಿಧರ ಪುರೋಹಿತ, ಮೂಡುಬಿದಿರೆಯ ಪುರಂದರ ಪುರೋಹಿತ, ದಯಾನಂದ ಆಚಾರ್ಯ, ರಾಜೇಶ್ ಸುವರ್ಣ, ಶೇಖರ್,ಮಾಧವ ಆಚಾರ್ಯ, ಸುರೇಂದ್ರ ಸುವರ್ಣ ಶಿರ್ತಾಡಿ ಸಹಿತ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಮಾನ ಮನಸ್ಕರ ತಂಡವು ಬಡ ಕುಟುಂಬಗಳಿಗೆ ಕಟ್ಟಿಕೊಟ್ಟ 43 ನೇ ಮನೆ ಇದಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸುದರ್ಶನ ಎಂ.ಅವರು ‘ 43 ಮನೆಗಳನ್ನು ಕಟ್ಟಿಕೊಡುವುದೆಂದರೆ ಸುಲಭದ ವಿಷಯವಲ್ಲ, ಸಮಾಜ, ಬಡಜನರ ಬಗ್ಗೆ ನೈಜವಾದ ಕಾಳಜಿ ಉಳ್ಳವರಿಗೆ ಮಾತ್ರ ಇಂತಹ ಸೇವೆ ಮಾಡಲು ಸಾಧ್ಯ,ಬಡ ಕುಟುಂಬದ ಬದುಕಿಗೆ ಹೊಸ ಬೆಳಕು ತೋರಿದ ಈ ಮಾನವೀಯ ಸೇವೆ ದೇವರು ಮೆಚ್ಚುವ ಶ್ರೇಷ್ಠ ಸೇವೆಯಾಗಿದೆ,ತಮ್ಮ ಸಾಮಾಜಿಕ ಸೇವೆ ಮುಂದುವರಿಯಲಿ’ ಎಂದು ಹಾರೈಸಿದರು.
ಮನೆಯ ವಸಂತಿ ಪೂಜಾರಿ ಹಾಗೂ ಸ್ನೇಹಾ ಅವರು ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಡಾ|ಪ್ರತಿಮಾ ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.











