ಐದು ವರ್ಷಗಳ ನಂತರ ಕೊನೆಗೂ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಮೀಸಲಾತಿ ಪ್ರಕಟಗೊಂಡಿದ್ದು ಅನುಕೂಲಕರವಾದ ಮೀಸಲಾತಿ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದ್ದು ನಿರೋಕ್ಷೆಯೇ ಇಲ್ಲದವರು ಆಕಾಂಕ್ಷಿಯಾಗಲು ರೆಡಿಯಾಗಿದ್ದಾರೆ.
ವೈಟ್ ಶರ್ಟ್ ಗಳಿಗೆ ಮತ್ತೊಮ್ಮೆ ಡಿಮಾಂಡ್ ಬಂದಿದೆ.
ಮೂಡುಬಿದಿರೆ ತಾಲೂಕಿನಲ್ಲಿ ಒಟ್ಟು ಎರಡು ಜಿಲ್ಲಾ ಪಂಚಾಯತ್ ಹಾಗೂ ಒಂಭತ್ತು ತಾಲೂಕು ಪಂಚಾಯತ್ ಕ್ಷೇತ್ರಗಳು.
ಹಿಂದೆ ಶಿರ್ತಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರವಿದ್ದದ್ದು ಈಬಾರಿ ಬೆಳುವಾಯಿ ಜಿಲ್ಲಾ ಪಂಚಾಯತ್ ಕ್ಷೇತ್ರವಾಗಿದೆ.ಕಳೆದ ಅವಧಿಯಲ್ಲಿ ಈ ಕ್ಷೇತ್ರದಿಂದ ಬಿಜೆಪಿಯ ಸುಜಾತಾ ಅವರು ಸದಸ್ಯರಾಗಿ ಆಯ್ಕೆಯಾಗಿದ್ದರು.ಅದಕ್ಕೂ ಮುನ್ನ ಕಾಂಗ್ರೆಸ್ ನ ಅಂಬಿಕಾ ಡಿ.ಶೆಟ್ಟಿ ಅವರು ಸದಸ್ಯರಾಗಿದ್ದರು.ಇದೀಗ ಮತ್ತೆ ಮಹಿಳಾ ಮೀಸಲಾತಿ ಪ್ರಕಟವಾಗಿರುವುದರಿಂದ ಮತ್ತೊಮ್ಮೆ ಮಹಿಳೆಯರಿಗೆ ಅವಕಾಶ ಲಭಿಸಿದೆ. ಕಾಂಗ್ರೆಸ್, ಬಿಜೆಪಿಯಿಂದ ಅಭ್ಯರ್ಥಿಗಳ ಹುಡುಕಾಟ ನಡೆಯುತ್ತಿದ್ದು ಕಾಂಗ್ರೆಸ್ ನಿಂದ ಮತ್ತೆ ಅಂಬಿಕಾ ಡಿ.ಶೆಟ್ಟಿ ಹಾಗೂ ಬೆಳುವಾಯಿಯ ಸುರೇಶ್ ಗೋಳಾರ ಅವರ ಪತ್ನಿ ಶುಭಾ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದರೆ ಬಿಜೆಪಿಯಿಂದ ಶಿರ್ತಾಡಿ ಪಂಚಾಯತ್ ಮಾಜಿ ಅಧ್ಯಕ್ಷೆ ಲತಾ ಹೆಗ್ಡೆ ಅವರ ಹೆಸರು ಕೇಳಿ ಬರುತ್ತಿದೆ.
ಪುತ್ತಿಗೆ ಜಿಲ್ಲಾ ಪಂಚಾಯತ್ ಗೆ ಈಬಾರಿ ಹಿಂದುಳಿದ ವರ್ಗ ಎ.ಮೀಸಲಾತಿ ಪ್ರಕಟವಾಗಿರುವುದರಿಂದ ಸ್ಪರ್ಧೆ ಏನಿದ್ದರೂ ಇಬ್ಬರು ಬಿಲ್ಲವ ಸಮುದಾಯದ ಅಭ್ಯರ್ಥಿಗಳ ನಡುವೆಯೇ ಆಗಿದೆ.ಕಾಂಗ್ರೆಸ್ ನಿಂದ ಚಂದ್ರಹಾಸ ಸನಿಲ್ ಹಾಗೂ ಬಿಜೆಪಿಯಿಂದ ರಂಜಿತ್ ಪೂಜಾರಿ ಅವರ ಹೆಸರು ಕೇಳಿ ಬರುತ್ತಿದೆಯಾದರೂ ರಂಜಿತ್ ಪೂಜಾರಿ ಅವರು ‘ತಾನು ಸ್ಪರ್ಧಿಸುವುದಿಲ್ಲ, ಯಾರನ್ನಾದರೂ ಬೆಳೆಸುವ ಜವಾಬ್ದಾರಿ ನನ್ನದು’ ಎಂದಿದ್ದಾರೆ.
ಇಲ್ಲಿ ಕಲ್ಲಮುಂಡ್ಕೂರಿನ ಕೇಶವ ಪೂಜಾರಿ ಅವರೇ ಸಮರ್ಥ ಅಭ್ಯರ್ಥಿಯಾಗುತ್ತಿದ್ದರು.ಆದರೆ ಇತ್ತೀಚೆಗೆ ನಡೆದ ಕಲ್ಲಮುಂಡ್ಕೂರು ಸೊಸೈಟಿ ಅಧ್ಯಕ್ಷರ ಆಯ್ಕೆ ವೇಳೆ ಅವರು ಪಕ್ಷವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದ್ದು ಒಂದು ಒಳ್ಳೆಯ ಅವಕಾಶವನ್ನು ಕಳೆದುಕೊಂಡಿದ್ದಾರೆನ್ನುವ ಮಾತುಗಳು ಕೇಳಿ ಬರುತ್ತಿದೆ.
ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದವರು ಬಿಜೆಪಿಯ ಸುಚರಿತ ಶೆಟ್ಟಿ. ಅದಕ್ಕೂ ಮುನ್ನ ಅವರ ಪತ್ನಿ ಸುನೀತಾ ಶೆಟ್ಟಿ ಸದಸ್ಯರಾಗಿದ್ದರು.
ಈಬಾರಿ ಕಾಂಗ್ರೆಸ್ ನಿಂದ ಚಂದ್ರಹಾಸ ಸನಿಲ್ ಅವರೇ ಅಭ್ಯರ್ಥಿ ಎನ್ನುವುದು ಹೆಚ್ಚಿನ ಜನರಲ್ಲಿ ಕೇಳಿ ಬರುತ್ತಿರುವ ಮಾತು. ಬಿಜೆಪಿಯಿಂದ ಕಣಕ್ಕಿಳಿಸಲಾಗುವ ಬಿಲ್ಲವ ಸಮುದಾಯದ ಅಭ್ಯರ್ಥಿ ಯಾರೆನ್ನುವುದೇ ಪ್ರಶ್ನೆ.
ತಾಲೂಕು ಪಂಚಾಯತ್ ಕ್ಷೇತ್ರಗಳು ಒಂಭತ್ತು. ನವರಾತ್ರಿಯ ಸಂದರ್ಭದಲ್ಲೇ ಮೀಸಲಾತಿ ಪ್ರಕಟವಾಗಿರುವುದರಿಂದ ನವಸ್ಥಾನಗಳ ಅಭ್ಯರ್ಥಿಗಳು ಯಾರ್ಯಾರು ಎನ್ನುವ ಕುತೂಹಲ ಇದೆ.
ಬೆಳುವಾಯಿ ಗೆ ಅನುಸೂಚಿತ ಪಂಗಡ ಮಹಿಳೆ, ನೆಲ್ಲಿಕಾರಿಗೆ ಹಿಂದುಳಿದ ವರ್ಗ ಎ, ಪುತ್ತಿಗೆಗೆ ಸಾಮಾನ್ಯ ಮಹಿಳೆ, ತೆಂಕಮಿಜಾರಿಗೆ ಸಾಮಾನ್ಯ ಮಹಿಳೆ, ತೋಡಾರಿಗೆ ಹಿಂದುಳಿದ ವರ್ಗ ಎ,ವಾಲ್ಪಾಡಿಗೆ ಅನುಸೂಚಿತ ಜಾತಿ ಮಹಿಳೆ, ಕಡಂದಲೆಗೆ ಸಾಮಾನ್ಯ,ಪಡುಮಾರ್ನಾಡಿಗೆ ಸಾಮಾನ್ಯ ಹಾಗೂ ಕಲ್ಲಮುಂಡ್ಕೂರಿಗೆ ಸಾಮಾನ್ಯ ಮೀಸಲಾತಿ ಪ್ರಕಟಗೊಂಡಿದೆ.
ಈ ಪೈಕಿ ಪಡುಮಾರ್ನಾಡು ತಾ.ಪಂ.ಕ್ಷೇತ್ರದಲ್ಲಿ ಮಾಜಿ ಸದಸ್ಯ ಕಾಂಗ್ರೆಸ್ ನ ಪ್ರಶಾಂತ್ ಅಮೀನ್ ಮತ್ಲ್ ಮಾರ್ ಅವರಿಗೆ ಮತ್ತೊಮ್ಮೆ ಅವಕಾಶ ಸಿಗಲಿದ್ದು ಬಿಜೆಪಿಯಿಂದ ಸೂರಜ್ ಜೈನ್ ಅವರ ಹೆಸರು ಚಾಲ್ತಿಯಲ್ಲಿದೆ.
ಕಲ್ಲಮುಂಡ್ಕೂರು ಕ್ಷೇತ್ರದಿಂದ ಸ್ಪರ್ಧಿಸಲು ಉದ್ಯಮಿ, ನಾಲ್ಕು ದಶಕಗಳ ಕಾಂಗ್ರೆಸ್ ಕಾರ್ಯಕರ್ತ ಜೋಕಿಮ್ ಕೊರೆಯಾ ಅವರು ಉತ್ಸುಕರಾಗಿದ್ದು ಬಿಜೆಪಿಯಿಂದ ಸುಂದರ ಪೂಜಾರಿಯವರ ಹೆಸರು ಕೇಳಿ ಬರುತ್ತಿದೆ.ಈ ಭಾಗದಲ್ಲಿ ರಂಗನಟ ಸತೀಶ್ ಅಮೀನ್ ಅವರದ್ದು ದೊಡ್ಡ ಹೆಸರು.ರಾಜಕೀಯದಲ್ಲಿ ಒಮ್ಮೆಗೆ ಅಡಿಮೇಲ್ ಮಾಡುವ ತಾಕತ್ತು ಅವರಿಗಿದೆ.ಹಾಗಾಗಿ ಎರಡೂ ಪಕ್ಷಗಳು ಅವರನ್ನು ದೂರ ಮಾಡುವಂತಿಲ್ಲ. ಈ ಹಿಂದೆ ಇಲ್ಲಿ ಸದಸ್ಯರಾಗಿದ್ದವರು ಕಾಂಗ್ರೆಸ್ ನ ಸುಕುಮಾರ್ ಸನಿಲ್. ಅವರು ಕೂಡಾ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ‘ ಕಿಡ್ನಾಪ್ ‘ ಆಗಿರುವುದರಿಂದ ಒಂದಿಷ್ಟು ಗೊಂದಲ ಸೃಷ್ಟಿಯಾಗಿತ್ತು.ಹಾಗಾಗಿ ಅವರಿಗೆ ಮತ್ತೆ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಅವಕಾಶ ಸಿಗುವುದು ಡೌಟ್.
ನೆಲ್ಲಿಕಾರು ಕ್ಷೇತ್ರ ಕೂಡಾ ಕುತೂಹಲದ ಕ್ಷೇತ್ರವಾಗಲಿದೆ.ಕಾಂಗ್ರೆಸ್ ಎಂದಾಕ್ಷಣ ಈ ಭಾಗದಲ್ಲಿ ಕೇಳಿ ಬರುವ ಹೆಸರುಗಳೆಂದರೆ ಹರೀಶ್ ಆಚಾರ್ಯ ಹಾಗೂ ಶಶಿಧರ ಎಂ.ಅವರದ್ದು. ಬಿಜೆಪಿಯಿಂದ ಬೋರುಗುಡ್ಡೆಯ ರಮೇಶ್ ಪೂಜಾರಿ ಹಾಗೂ ಉದಯ ಪೂಜಾರಿ ಅವರ ಹೆಸರುಗಳು ಚಾಲ್ತಿಯಲ್ಲಿದೆ.
ಕಡಂದಲೆ ಕ್ಷೇತ್ರದಿಂದ ಸುಚರಿತ ಶೆಟ್ಟಿ ಅವರಿಗೆ ಸ್ಪರ್ಧಿಸಲು ಅವಕಾಶವಿದೆ.ಆದರೆ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದವರು ಮತ್ತೆ ತಾಲೂಕು ಪಂಚಾಯತ್ ಗೆ ಸ್ಪರ್ಧಿಸುತ್ತಾರಾ ಅನ್ನೋದೇ ಪ್ರಶ್ನೆ.
ಜಿಲ್ಲಾ ಪಂಚಾಯತ್ ಕ್ಷೇತ್ರಗಳೆರಡೂ ಎರಡೂ ಪಕ್ಷಗಳಿಗೂ ಪ್ರತಿಷ್ಠೆಯ ಕಣಗಳಾಗಿದೆ.ಎರಡೂ ಕಡೆ ನೇರ ಸ್ಪರ್ಧೆ ನಡೆಯಲಿದೆ.
ತಾಲೂಕು ಪಂಚಾಯತ್ ನ ಒಂಭತ್ತು ಸ್ಥಾನಗಳ ಪೈಕಿ ಗೆದ್ದು ಬರುವ ನಾಲ್ಕು ಲೇಡೀಸ್ ಹಾಗೂ ಐವರು ಜಂಟಲ್ ಮ್ಯಾನ್ ಗಳು ಯಾರೆನ್ನುವುದೇ ಕುತೂಹಲ.












