ಜಿಲ್ಲಾ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಕಟವಾದ ಮೀಸಲಾತಿ ಕರಡು ಆಗಿದ್ದರೂ ಅದೇ ಮೀಸಲಾತಿ ಅಧಿಕೃತವಾಗಿ ಪ್ರಕಟಗೊಳ್ಳಬಹುದೆಂಬ ನಿರೀಕ್ಷೆ ಹೆಚ್ಚಿನವರದ್ದು.
ಒಂದುವೇಳೆ ಈಗಾಗಲೇ ಪ್ರಕಟಗೊಂಡ ಮೀಸಲಾತಿ ಅಧಿಕೃತವಾಗಿ ಬಂದರೆ ಚುನಾವಣೆಗಿಂತ ಅಭ್ಯರ್ಥಿಗಳ ಆಯ್ಕೆಯೇ ಕುತೂಹಲ ಕೆರಳಿಸಲಿದೆ.ಇದಕ್ಕೆ ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರ ಈಗಾಗಲೇ ಸಜ್ಜಾದಂತಿದೆ.
ಕಾಂಗ್ರೆಸ್ ನಿಂದ ಈ ಹಿಂದಿನ ಅಭ್ಯರ್ಥಿ ಚಂದ್ರಹಾಸ ಸನಿಲ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆಯಾದರೂ ಇರುವೈಲಿನ ಕುಮಾರ್ ಪೂಜಾರಿ ಹಾಗೂ ಪುತ್ತಿಗೆಯ ಮುರಳೀಧರ ಕೋಟ್ಯಾನ್ ಅವರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಕಾಣಿಸುತ್ತಿದೆ. ಬಿಜೆಪಿಯಿಂದ ಯಾವ ಹೆಸರೂ ಈವರೆಗೆ ಕೇಳಿಬರುತ್ತಿಲ್ಲ. ಕಾಂಗ್ರೆಸ್ ನ ಅಭ್ಯರ್ಥಿ ಆಯ್ಕೆಯ ನಂತರವೇ ಬಿಜೆಪಿಯಿಂದ ಫೈಟ್ ನೀಡಬಲ್ಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ತೀರ್ಮಾನಿಸಿದಂತಿದ್ದು ಈಗ ಮೌನವಹಿಸಿದೆ.
ರಂಜಿತ್ ಪೂಜಾರಿ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತಾದರೂ ಅವರು ಸ್ಪರ್ಧೆಗೆ ಆಸಕ್ತಿ ತೋರುತ್ತಿಲ್ಲ.ಯಾರನ್ನಾದರೂ ಬೆಳೆಸೋಣ ಎಂಬ ಅವರ ಹೇಳಿಕೆಯ ಅರ್ಥ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿದೆ.
ಚಂದ್ರಹಾಸ ಸನಿಲ್ ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲು ಕಂಡವರು. ಹೊಸಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ, ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಪಕ್ಷದ ಬೇರೆ ಬೇರೆ ಜವಾಬ್ದಾರಿಗಳನ್ನು ನಿರ್ವಹಿಸಿದವರು. ಪ್ರಸ್ತುತ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾಗಿದ್ದು ಕ್ಷೇತ್ರದಲ್ಲಿ ಪರಿಚಿತರಾಗಿದ್ದಾರೆ.
ಅವರು ಕರೆಕ್ಟಾಗಿ ಮನಸ್ಸು ಮಾಡುತ್ತಿದ್ದರೆ ಇಂದು ಎಮ್.ಎಲ್.ಎ.ಅಭ್ಯರ್ಥಿಯಾಗಿ ಮುಂಚೂಣಿಯಲ್ಲಿರಬೇಕಿತ್ತು.ಆದರೆ ಆ ಅವಕಾಶ ಅವರಿಗೆ ಸದ್ಯಕ್ಕಿರುವಂತಿಲ್ಲ.
ಕುಮಾರ್ ಪೂಜಾರಿ ಇರುವೈಲಿನವರಾಗಿದ್ದು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ,ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ, ಪಕ್ಷದ ವಿವಿಧ ಜವಾಬ್ದಾರಿಗಳ ಸೇವೆ ಸಲ್ಲಿಸಿದವರು.ಬಿಲ್ಲವ ಸಂಘದ ಅಧ್ಯಕ್ಷರಾಗಿ ಸದಾ ಲವಲವಿಕೆಯಿಂದ ಕಾರ್ಯನಿರ್ವಹಿಸುತ್ತಿರುವ ಕುಮಾರ್ ಪೂಜಾರಿ ಅವರು ಇರುವೈಲಿನ ಲೋಕಲ್ ಹೀರೋ.
ಮುರಳೀಧರ ಕೋಟ್ಯಾನ್ ಅವರು ಪುತ್ತಿಗೆ ಪಂಚಾಯತ್ ಸದಸ್ಯರಾಗಿ,ವಿವಿಧ ಸಂಘ ಸಂಸ್ಥೆಗಳಲ್ಲಿ ಸದಾ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಾ ಜನಪ್ರಿಯರಾಗಿದ್ದಾರೆ. ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಪುತ್ತಿಗೆಯವರಿಗೇ ಅವಕಾಶ ಸಿಗಬೇಕೆನ್ನುವುದು ಅವರ ಬೆಂಬಲಿಗರ ಬೇಡಿಕೆ.
ಮೀಸಲಾತಿ ಅಧಿಕೃತವಾಗುವ ಮುನ್ನವೇ ಈ ಮೂವರು ಪ್ರಬಲ ಆಕಾಂಕ್ಷಿಗಳಾಗಿದ್ದು ಯಾರಿಗೆ ಅವಕಾಶ ಸಿಗುತ್ತದೆ ಎನ್ನುವುದು ಪ್ರಶ್ನೆ.
ಆದರೆ ಕಾಂಗ್ರೆಸ್ ನಿಂದ ಯಾರು? ಎಂಬ ಪ್ರಶ್ನೆಗೆ ಸದ್ಯಕ್ಕೆ ಕಾಂಗ್ರೆಸಿಗರಲ್ಲಿ ಉತ್ತರವಿದೆ.ಆ ಹೆಸರು ಕಾಂಗ್ರೆಸಿಗರಿಗೂ ಗೊತ್ತಿದೆ, ಬಿಜೆಪಿಗೂ ತಿಳಿದಿದೆ.












