ಮೂಡುಬಿದಿರೆ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಕೃಷಿ ವಲಯದಲ್ಲಿ ಸಿಂಗಲ್ ಸೈಟ್, ಭೂ ಪರಿವರ್ತನೆಯ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ.


ಕಳೆದ ಏಳೆಂಟು ತಿಂಗಳಿಂದ ಜನರಿಗಾಗುತ್ತಿದ್ದ ಈ ಸಮಸ್ಯೆಗೆ ಮೂಡಾ ಸದಸ್ಯರಾದ ಸತೀಶ್ ಭಂಡಾರಿ ಕರಿಂಜೆ ಹಾಗೂ ಶೇಖರ್ ಬೊಳ್ಳಿ,ವಿಶ್ವನಾಥ ಶೆಟ್ಟಿ ಕರಿಂಜೆ,ಆಲ್ವಿನ್ ಮಿನೇಜಸ್ ಕಲ್ಲಬೆಟ್ಟು ಹಾಗೂ ನಿವೃತ್ತ ಶಿಕ್ಷಕ ನಾಗೇಶ್ ಎಸ್.ಅವರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು ಇನ್ನು ಈಭಾಗದ ಜನರು ಸಮಸ್ಯೆಯಿಂದ ಮುಕ್ತರಾಗಿದ್ದಾರೆ.
ಮೂಡುಬಿದಿರೆ ಯೋಜನಾ ಪ್ರಾಧಿಕಾರದ ಮಾಸ್ಟರ್ ಪ್ಲಾನಿನಲ್ಲಿ ಕಲ್ಲಬೆಟ್ಟು, ಕರಿಂಜೆ ಹಾಗೂ ಮಾರೂರು ಗ್ರಾಮದ ಬಹುತೇಕ ಸರ್ವೆ ನಂಬ್ರಗಳು ಕೃಷಿ ವಲಯದಲ್ಲಿದೆ.ಇದರಿಂದಾಗಿ ಮನೆ ಕಟ್ಟಲು ಸಿಂಗಲ್ ಸೈಟಿಗಾಗಲೀ, ಭೂ ಪರಿವರ್ತನೆಯಾಗಲೀ ಆಗುತ್ತಿರಲಿಲ್ಲ.
10 ಸೆನ್ಸ್ ಜಾಗಕ್ಕೂ ಈ ಸಮಸ್ಯೆಯಾಗುತ್ತಿತ್ತು.ಜನರು ಕಚೇರಿ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದರು.
ಜನರ ಈ ಸಮಸ್ಯೆಯನ್ನರಿತ ಮೂಡಾ ಸದಸ್ಯರಾದ ಸತೀಶ್ ಭಂಡಾರಿ,ಶೇಖರ್ ಬೊಳ್ಳಿ,ಭೂಮಿ ಕನ್ಸ್ಟ್ರಕ್ಷನ್ಸ್ ಮಾಲಕ ವಿಶ್ವನಾಥ ಶೆಟ್ಟಿ,ಪುರಸಭಾ ಮಾಜಿ ಸದಸ್ಯ ಆಲ್ವಿನ್ ಮಿನೇಜಸ್ ಹಾಗೂ ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ನಾಗೇಶ್ ಅವರು ಹಲವು ಬಾರಿ ಬೆಂಗಳೂರಿಗೆ ತೆರಳಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಸಮಸ್ಯೆಗಳನ್ನು ವಿವರಿಸಿದ್ದರು.ಅಲ್ಲದೆ ಸಂಬಂಧಪಟ್ಟ ಸಚಿವರು, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಬಿ.ಕೆ.ಹರಿಪ್ರಸಾದ್ ಅವರ ಗಮನಕ್ಕೂ ತಂದಿದ್ದರು.
ಇದೀಗ ಇವರ ನಿರಂತರ ಶ್ರಮಕ್ಕೆ ಪರಿಹಾರ ಸಿಕ್ಕಿದ್ದು ಇನ್ನು ಮುಂದೆ ಸಿಂಗಲ್ ಸೈಟ್,ಭೂ ಪರಿವರ್ತನೆಯಾಗಲಿದೆ.
ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವಲ್ಲಿ ಯಶಸ್ವಿಯಾದ ಈ ತಂಡಕ್ಕೆ ಕಲ್ಲಬೆಟ್ಟು, ಕರಿಂಜೆ,ಮಾರೂರು ಪರಿಸರದ ಜನರು ಕೃತಜ್ಞತೆ ಸಲ್ಲಿಸಿದ್ದಾರೆ.



