ಮೂಡುಬಿದಿರೆ ಹಂಡೇಲು ಮೈಟ್ ಕಾಲೇಜಿನ ಎದುರು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಮಾಸ್ಟರ್ ಬಸ್ ಢಿಕ್ಕಿ ಹೊಡೆದ ಪರಿಣಾಮ ಆಳ್ವಾಸ್ ಕಾಲೇಜಿನ ಸಿಬ್ಬಂದಿ ಮಹಿಳೆ ಮತ್ತು ಅದೇ ಹೈಸ್ಕೂಲ್ ವಿದ್ಯಾರ್ಥಿನಿಗೆ ಗಂಭೀರ ಗಾಯಗಳಾಗಿದೆ.
ಗಾಯಗೊಂಡವರನ್ನು ಮಿಜಾರು ಸಮೀಪದ ನಿವಾಸಿಗಳಾದ ಸುಮಿತ್ರಾ ಹಾಗೂ ಸಾನ್ವಿ ಎಂದು ಗುರುತಿಸಲಾಗಿದೆ.
ಇಂದು ಬೆಳಿಗ್ಗೆ ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಮಾಸ್ಟರ್ ಬಸ್ಸು ಹಂಡೇಲಿನ ಮೈಟ್ ಕಾಲೇಜಿನ ಎದುರು ಅದೇ ಸಂಸ್ಥೆಯ ಬಸ್ಸನ್ನು ಓವರ್ ಟೇಕ್ ಮಾಡಿದಾಗ ಎದುರಿನಿಂದ ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಢಿಕ್ಕಿಯಾಗಿದೆ.ಮಹಿಳೆ ಮತ್ತು ವಿದ್ಯಾರ್ಥಿನಿ ಗಂಭೀರ ಗಾಯಗೊಂಡಿದ್ದಾರೆ.ಬಸ್ ಚಾಲಕ ಬಸ್ಸನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆನ್ನಲಾಗಿದೆ.


ಇದರಿಂದ ಉದ್ರಿಕ್ತರಾದ ವಿದ್ಯಾರ್ಥಿಗಳು ಸೇರಿ ಪ್ರತಿಭಟನೆ ನಡೆಸಿದ್ದಾರಲ್ಲದೆ ಬಸ್ಸಿನ ಗಾಜುಗಳನ್ನು ಪುಡಿಗೈದಿದ್ದಾರೆ.ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು ಘಟನಾ ಸ್ಥಳಕ್ಕೆ ಎಸಿಪಿ ಶ್ರೀಕಾಂತ್, ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಸಹಿತ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ದೊಡ್ಡ ಸಂಖ್ಯೆಯಲ್ಲಿ ಪೊಲೀಸರೂ ಇದ್ದಾರೆ.