ಹಬ್ಬದ ನಿಮಿತ್ತ ಗೆಳೆಯನ ಮನೆಗೆ ಬಂದಿದ್ದ ಮೂವರು ಯುವಕರು ನೀರುಪಾಲಾದ ದುರಂತ ಘಟನೆಯೊಂದು ವೇಣೂರು ಸಮೀಪ ಬುಧವಾರ ಸಂಭವಿಸಿದೆ.
ಕುಪ್ಪೆಪದವಿನ ವಿಕ್ಟರ್ ಫೆರ್ನಾಂಡಿಸ್ ಅವರ ಮಗ ಲಾರೆನ್ಸ್ ಫೆರ್ನಾಂಡಿಸ್, ಬಂಟ್ವಾಳ ಕಾಡಬೆಟ್ಟುವಿನ ಜೇಮ್ಸ್ ಡಿಸೋಜ ಅವರ ಮಗ ಜಾಯ್ಸನ್ ಡಿಸೋಜ ಹಾಗೂ ಬೆಳ್ತಂಗಡಿ ತಾಲೂಕಿನ ಬಸವನ ಗುಡಿಯ ಸುನಿಲ್ ಸಿ.ಎಸ್ ಅವರ ಮಗ ಸುರಾಜ್ ಸಿ.ಎಸ್. ಎಂಬ ಮೂವರು ಯುವಕರು ದುರಂತ ಅಂತ್ಯಕಂಡವರು.
ಈ ಮೂವರು ಕೂಡಾ ಮಂಗಳೂರು ನೀರ್ ಮಾರ್ಗದ ನ್ಯೂ ಮಂಗಳಾ ಕಾಲೇಜ್ ಆಫ್ ನರ್ಸಿಂಗ್ ನ ವಿದ್ಯಾರ್ಥಿಗಳು.
ವೇಣೂರು ಚರ್ಚ್ ನಲ್ಲಿ ಬುಧವಾರ ಸಾಂತ್ ಮಾರಿ ಹಬ್ಬವಿದ್ದು ತಮ್ಮ ಸಹಪಾಠಿ ಗೆಳೆಯನ ಮನೆಗೆ ಹಬ್ಬದ ಊಟಕ್ಕೆಂದು ಬಂದಿದ್ದರೆನ್ನಲಾಗಿದೆ.ಊಟ ಮುಗಿಸಿ ಪಕ್ಕದ ನದಿಗೆ ಸ್ನಾನಕ್ಕೆಂದು ಹೋಗಿದ್ದಾರೆ.ಅಣೆಕಟ್ಟು ಕಟ್ಟಿದ್ದ ಜಾಗದಲ್ಲಿ ನೀರಿಗಿಳಿದಿದ್ದಾರೆ.ಒಟ್ಟು ಐದು ಮಂದಿ ಸ್ನೇಹಿತರ ತಂಡ ಇತ್ತೆನ್ನಲಾಗಿದ್ದು ನೀರಿಗಿಳಿದಿದ್ದ ಓರ್ವನನ್ನು ಲಾರೆನ್ಸ್ ಫೆರ್ನಾಂಡಿಸ್ ರಕ್ಷಿಸಿದ್ದಾನೆನ್ನಲಾಗಿದ್ದು ಆಬಳಿಕ ಆತನೂ ನೀರುಪಾಲಾಗಿದ್ದಾನೆಂದು ಹೇಳಲಾಗುತ್ತಿದೆ.ಈಜು ಬಾರದೆ ಈ ಮೂವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆನ್ನಲಾಗಿದ್ದು ಅಗ್ನಿ ಶಾಮಕ ಹಾಗೂ ಸ್ಥಳೀಯರ ನೆರವಿನಿಂದ ಮೃತದೇಹಗಳನ್ನು ಮೇಲಕ್ಕೆತ್ತಲಾಗಿದೆ.ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚಿಗೆ ಮಂಗಳೂರು ಸಮೀಪ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟಿದ್ದು ಆ ಬಳಿಕ ವೇಣೂರಿನಲ್ಲಿ ಮತ್ತೊಂದು ದುರಂತ ಸಂಭವಿಸಿದೆ.
