ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡ್ಡೋಡಿ ಪರಿಸರದಲ್ಲಿ ಕಳೆದ ಹಲವು ಸಮಯಗಳಿಂದ ಕೆಲವು ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರ ಕೃಪೆಯಿಂದ ನಡೆಯುತ್ತಿದ್ದ ಅಕ್ರಮ ಕಲ್ಲು ಕೋರೆಗಳಿಗೆ ಮಂಗಳವಾರ ಬೆಳಿಗ್ಗೆ ಉಪಲೋಕಾಯುಕ್ತ ಜಸ್ಟಿಸ್ ವೀರಪ್ಪ ಅವರು ಅಧಿಕಾರಿಗಳೊಂದಿಗೆ ದಾಳಿ ನಡೆಸಿದ್ದು ಗಣಿ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಕ್ರಮ ಕಲ್ಲು ಕಳ್ಳರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ನಿಡ್ಡೋಡಿ ಪರಿಸರದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ,ಇಲ್ಲಿನ ಮರಳು ಮಿಶ್ರಿತ ಮಣ್ಣನ್ನು ಆಂಧ್ರಪ್ರದೇಶಕ್ಕೆ ಸಾಗಿಸಲಾಗುತ್ತಿದೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಉಪಲೋಕಾಯುಕ್ತರು ದಾಳಿ ನಡೆಸಿದ್ದರು.
ಈ ದಾಳಿಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಣಿ ಇಲಾಖೆಯ ಜಿಲ್ಲಾ ಉಪವನಿರ್ದೇಶಕಿ ಕೃಷ್ಣವೇಣಿ ಹಾಗೂ ಇತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ‘ಇಷ್ಟು ದೊಡ್ಡ ಮಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ನೀವು ಎಲ್ಲಿದ್ದಿರಿ? ಏನು ಕೇಸು ಮಾಡಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.ಉಪಲೋಕಾಯುಕ್ತರ ಗರಂ ಗೆ ತಬ್ಬಿಬ್ಬಾದ ಅಧಿಕಾರಿಗಳು ಕೇಸ್ ಮಾಡ್ತೇವೆ ಸರ್ ಎಂದುತ್ತರಿಸಿದರೂ ಅದಕ್ಕೆ ಸಮಾಧಾನಗೊಳ್ಳದ ಅವರು ಎಲ್ಲರ ಮೇಲೂ ಕೇಸ್ ಹಾಕ್ಬೇಕು,ಯಂತ್ರೋಪಕರಣಗಳನ್ನು ಪೊಲೀಸರು ವಶಪಡಿಸಿಕೊಳ್ಳಬೇಕೆಂದು ಸೂಚಿಸಿದರೆನ್ನಲಾಗಿದೆ.

ಅಷ್ಟಕ್ಕೂ ಮಣ್ಣು ದಂಧೆ ಯಾರದ್ದು ?
ಕಲ್ಲಮುಂಡ್ಕೂರು, ನಿಡ್ಡೋಡಿ, ಬಂಗೇರಪದವು ಮುಂತಾದ ಪ್ರದೇಶಗಳಲ್ಲಿ ಕಳೆದ ಹಲವು ಸಮಯಗಳಿಂದ ಕೆಂಪು ಕಲ್ಲಿನ ಕೋರೆಗಳು ಯಾವುದೇ ಸಮಸ್ಯೆ ಇಲ್ಲದೆ ಆರಾಮ್ ಸೆ ನಡೆಯುತ್ತಿತ್ತು.ಕೆಲವು ಬಾರಿ ಗಣಿ ಇಲಾಖೆಯ ವಾಹನಗಳು ಬಂದು ರೈಡ್ ಮಾಡಿತ್ತು.ಆದರೂ ಅಲ್ಲಿ ಅಕ್ರಮ ಮುಂದುವರಿಯುತ್ತಲೇ ಇತ್ತು.ಈ ಬಗ್ಗೆ ಸಾರ್ವಜನಿಕರು ಲೋಕಾಯುಕ್ತರಿಗೆ ದೂರು ನೀಡಿದ್ದರು.
ಇಲ್ಲೊಂದು ದೊಡ್ಡ ಮಟ್ಟದ ಮಣ್ಣು ದಂಧೆ ನಡೆಯುತ್ತಿದ್ದು ಅದಕ್ಕೆ ಕೆಲ ರಾಜಕೀಯ ಮುಖಂಡರ ಕೃಪೆ ಇದೆ ಎಂದು ಹೇಳಲಾಗುತ್ತಿದೆ.ಮುಂದಿನ ದಿನಗಳಲ್ಲಿ ಅಲ್ಲಿನ ಸಮಗ್ರ ಮಾಹಿತಿ ಹೊರಬರಲಿದೆ.