ಕನ್ನಡ ಶಾಲೆಗಳು ಬಾಗಿಲು ಮುಚ್ಚಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಇಲ್ಲೊಂದು ಹೈಟೆಕ್ ಸರಕಾರಿ ಶಾಲೆಯ ಕಟ್ಟಡ ತಲೆಯೆತ್ತಿ ಸುದ್ಧಿಯಾಗಿದೆ.ತಾಲೂಕಿನ ಬೇರೆಲ್ಲೂ ಇರದ ಸುಂದರ ಹಾಗೂ ಸುಸಜ್ಜಿತವಾದ ಸರಕಾರಿ ಶಾಲೆಯ ಕಟ್ಟಡವಿದು. ಬೆದ್ರ ವಲಯದ ಸರಕಾರಿ ಶಾಲೆಗಳ ಪೈಕಿ ಈ ಶಾಲೆ ಹೊಸ ಇತಿಹಾಸ ಬರೆದಿದೆ.
ಇದು ಇರುವೈಲಿನ ದ.ಕ.ಜಿ.ಪಂ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.ನೂರರ ಇತಿಹಾಸ ಹೊಂದಿರುವ ಈ ಶಾಲೆ ಭಾನುವಾರದಂದು ಶತಮಾನೋತ್ಸವ ಆಚರಿಸಿಕೊಂಡಿದೆ.ಈ ಸಂದರ್ಭದಲ್ಲಿ ಸುಸಜ್ಜಿತವಾದ ಕಟ್ಟಡವೊಂದು ಲೋಕಾರ್ಪಣೆಗೊಂಡಿದೆ.


ಈ ಸೂಪರ್ ಕಟ್ಟಡ,ಅದ್ದೂರಿಯ ಕಾರ್ಯಕ್ರಮ, ಅತಿಥಿಗಳನ್ನು, ಹಳೆವಿದ್ಯಾರ್ಥಿಗಳನ್ನು, ದಾನಿಗಳನ್ನು ಸಂಪರ್ಕಿಸಿ ಒಂದು ಯಶಸ್ವಿ ಕಾರ್ಯಕ್ರಮವಾಗಿ ಮೂಡಿಬಂದಿರುವ ಹಿಂದಿದ್ದ ದೊಡ್ಡ ಶಕ್ತಿಯೇ ಮೋಹನ್ ಟಿ.
ಮೋಹನ್ ಅವರು ಮೂಡುಬಿದಿರೆ ಮೆಸ್ಕಾಂ ಕಚೇರಿಯ ಎ.ಇ.ಒ. ದೊಡ್ಡ ಜವಾಬ್ದಾರಿಯ ಹುದ್ದೆ ಅವರದ್ದು.ಆದರೆ ತಾನು ಕಲಿತ ಶಾಲೆಗೆ ಏನಾದರೊಂದು ಕೊಡುಗೆ ನೀಡಬೇಕು, ಮಾದರಿ ಶಾಲೆಯನ್ನಾಗಿ ರೂಪಿಸಬೇಕೆಂಬ ಕಲ್ಪನೆಯಿಂದ ಶತಮಾನೋತ್ಸವ ಸಮಿತಿಯ ಸಾರಥ್ಯದ ಜವಾಬ್ದಾರಿಯನ್ನು ತನ್ನ ಹೆಗಲಿಗೇರಿಸೊಕೊಂಡ ದಿನದಿಂದಲೇ ಸುಸಜ್ಜಿತವಾದ ಕಟ್ಟಡದ ಯೋಜನೆ ಹಾಕಿಕೊಂಡಿದ್ದರು.
ಒಂದು ಕಟ್ಟಡ ನಿರ್ಮಾಣ, ಧನಸಹಾಯ ಸಂಗ್ರಹ ಎನ್ನುವುದು ಸುಲಭದ ಮಾತಲ್ಲ.ಅದಕ್ಕೆ ತಾಳ್ಮೆ, ವಾಕ್ಚಾತುರ್ಯ ಮತ್ತು ಪುರುಸೊತ್ತು ಕೂಡಾ ಬೇಕು.
ಒತ್ತಡದ ಕೆಲಸದ ನಡುವೆಯೂ ಸಮಯ ಸಿಕ್ಕಾಗಲೆಲ್ಲಾ ತನ್ನ ಶಾಲೆಯ ಬಗ್ಗೆ, ಶಾಲೆಯ ಕಟ್ಟಡದ ಬಗ್ಗೆ ವಿಶೇಷ ಆಸಕ್ತಿ ವಹಿಸಿಕೊಂಡ ಮೋಹನ್ ಅವರು ಹಳೆವಿದ್ಯಾರ್ಥಿಗಳನ್ನು ಸಂಪರ್ಕಿಸಿ ಒಂದುಗೂಡಿಸಿದರು, ದಾನಿಗಳನ್ನು ಸಂಪರ್ಕಿಸಿದರು.ಇವರ ಕಾರ್ಯ ಯೋಜನೆಗೆ ಅವರೆಲ್ಲಾ ಸ್ಪಂದಿಸಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್ ಅವರು ವಿವೇಕ ಯೋಜನೆಯಡಿ ಸುಮಾರು 41 ಲಕ್ಷ ರೂ.ಒದಗಿಸಿದ್ದಾರೆ. ಇರುವೈಲಿನವರೇ ಆಗಿದ್ದು,ಅದೇ ಶಾಲೆಯ ಹಳೆವಿದ್ಯಾರ್ಥಿ, ಹೈಕೋರ್ಟ್ ನ್ಯಾಯವಾದಿ ತಾರಾನಾಥ ಪೂಜಾರಿ ಅವರು ದೊಡ್ಡ ಮಟ್ಟಿನ ಸಹಕಾರ ನೀಡಿದ್ದಾರೆ.
ಉಳಿದಂತೆ ದಾನಿಗಳು, ಹಳೆವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ.ಅವರೆಲ್ಲರ ಸಹಕಾರದಿಂದಲೇ ಸುಮಾರು ಒಂದು ಕೋಟಿ ಇಪ್ಪತ್ತೈದು ಲಕ್ಷ ರೂ.ವೆಚ್ಚದಲ್ಲಿ ಈ ಸುಂದರ ಕಟ್ಟಡ ನಿರ್ಮಾಣವಾಗಿದೆ.
ಇದು ಮೂಡುಬಿದಿರೆಯ ಸರಕಾರಿ ಶಾಲೆಗಳ ಪೈಕಿ ಅತಿ ಸುಂದರ,ಸುಸಜ್ಜಿತವಾದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಒಂದು ಉತ್ತಮ ಕಾರ್ಯಯೋಜನೆಯಲ್ಲಿ ಯಶಸ್ಸು ಸಾಧಿಸಿರುವ ಮೋಹನ್ ಅವರು ಹಳೆಯ ಶಾಲೆಗೆ ಹೊಸ’ ಬೆಳಕು’ ನೀಡುವಲ್ಲೂ ಯಶಸ್ಸಾಗಿದ್ದಾರೆ.






