ಅದೊಂದು ಕಾಲವಿತ್ತು. ಯಾರು ನಿಂತರೂ-ಕೂತರೂ ಕಾಂಗ್ರೆಸ್ಸೇ ವಿನ್ ಆಗುವುದು ಅಂತ ಹೇಳುತ್ತಿದ್ದ ಕಾಲ. ಈಗ ವಾತಾವರಣ ಹಾಗಿಲ್ಲ. ಆ ಹಿಂದಿನ ವಾತಾವರಣಗಳೆಲ್ಲಾ ಮಯಕ್ಕವಾಗಿದೆ.
ಹತ್ತಿಪ್ಪತ್ತು ವರ್ಷಗಳ ಹಿಂದೆ ಇಲ್ಲಿ ಅಭಯರೊಬ್ಬರೇ ಲೀಡರ್.ಅದ್ಯಾರೂ ಮಾತನಾಡುವಂತಿರಲಿಲ್ಲ.ಅಭಯರೇ ಇಲ್ಲಿನ ಮಟ್ಟಿಗೆ ಹೈಕಮಾಂಡ್.
ಯಾವಾಗ ಮಿಥುನ್ ರೈ ಮತ್ತು ಐವನ್ ಡಿಸೋಜ ಅವರು ಎಂಟರಿಯಾದರೋ ಅಂದಿನಿಂದ ಬೆದ್ರ ಕಾಂಗ್ರೆಸ್ ಮೂರು ತುಂಡುಗಳಾಗಿ ‘ಮನೆಯೊಂದು ಮೂರುಬಾಗಿಲು’ ಎನ್ನುವಂತಾಗಿದೆ.
ಹಾಗಂತ ಮೂವರು ಪ್ರಭಾವಿಗಳೇ. ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳು ಅಧಿಕವಿದೆ. ಭಿನ್ನಮತವಿಲ್ಲದಿದ್ದರೆ ಯಾರು ಅಭ್ಯರ್ಥಿಯಾದರೂ ಸುಲಭದಲ್ಲಿ ಜಯಗಳಿಸಬಹುದಾದ ಕ್ಷೇತ್ರವಿದು.
ಅಭಯರು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಇನ್ನು ಮುಂದೆ ಮಿಥುನ್ ರೈ ಕ್ಯಾಂಡೇಟ್ ಅಂತ ಘೋಷಿಸಿ,ಅವರನ್ನು ಕ್ಷೇತ್ರವಿಡೀ ಸುತ್ತಾಡಿಸಿ ಕೊನೇ ಗಳಿಗೆಯಲ್ಲಿ ಮಿಥುನ್ ರೈಗೆ ಟಿಕೆಟ್ ಸಿಗದೆ ಅಭಯರೇ ಸ್ಪರ್ಧಿಸಿ ಸೋತರಲ್ಲಾ…ಅಂದಿಗೇ ಇಲ್ಲಿನ ಕಾಂಗ್ರೆಸ್ ನ ಗೆಲುವಿಗೆ ಬ್ರೇಕ್ ಬಿದ್ದಿದೆ. ಮತ್ತೆ ಹೇಗೆ ಟ್ರೈ ಮಾಡಿದರೂ ಗೆಲುವು ಸ್ಟಾರ್ಟ್ ಆಗಲೇ ಇಲ್ಲ. ಅದೇ ಸಮಯದಲ್ಲಿ ಐವನ್ ಡಿಸೋಜ ಅವರು ಕೂಡಾ ಬೆದ್ರಕ್ಕೆ ಬಂದು ತಾನು ಕೂಡಾ ಕೈ ಆಕಾಂಕ್ಷಿ ಎಂದು ಆಫೀಸು ತೆರೆದದ್ದು ಕೂಡಾ ಡಿವೈಡ್ ಆಗಲು ಕಾರಣವಾಯಿತು. ಅವರ ಲೆಕ್ಕಾಚಾರ ಸರಿಯಾಗಿಯೇ ಇತ್ತು.ಈ ಕ್ಷೇತ್ರದಲ್ಲಿ ಕ್ರೈಸ್ತ ಮತದಾರರು ಎರಡನೇ ಸ್ಥಾನದಲ್ಲಿದ್ದಾರೆ.ಅಂದರೆ ಜಿಲ್ಲೆಯ ಮಟ್ಟಿಗೆ ಅತ್ಯಂತ ಹೆಚ್ಚು ಕ್ರೈಸ್ತ ಸಮುದಾಯದ ಮತದಾರರಿರುವ ಕ್ಷೇತ್ರವಿದು. ಕ್ರೈಸ್ತರು, ಮುಸಲ್ಮಾನರು ಮತ್ತು ಹಿಂದೂ ಸಮುದಾಯದವರ ಮತಗಳ ಮೂಲಕ ಜಯಗಳಿಸಬಹುದೆಂಬ ಲೆಕ್ಕಾಚಾರ ಅವರದ್ದಾಗಿತ್ತು.ಆದರೆ ಅವರಿಗೆ ಅವಕಾಶ ಸಿಗದೆ ಆಫೀಸ್ ಕ್ಲೋಸ್ ಮಾಡುವಂತಾಗಿತ್ತು.
ಅತ್ತ ಮಿಥುನ್ ರೈ ಅವರಿಗೂ ಅವಕಾಶ ಸಿಗದೆ ಅಭಯಚಂದ್ರ ಮತ್ತು ಕಾಂಗ್ರೆಸ್ ಯುಗಾಂತ್ಯವಾಗಲು ಕಾರಣವಾಯಿತು.
ಆ ಬಳಿಕ ನಾವು ಗುರು ಶಿಷ್ಯರು ಅಂತ ರಾಜಿ ಮಾಡಿಕೊಂಡು ಮತ್ತೆ ಪಕ್ಷ ಸಂಘಟನೆಗೆ ತೊಡಗಿಸಿಕೊಂಡು ಮಿಥುನ್ ರೈ ಅವರಿಗೆ ಲೋಕಸಭಾ ಅಭ್ಯರ್ಥಿಯಾಗಲು ಅವಕಾಶ ನೀಡಲಾಯಿತಾದರೂ ಅವರು ಅಲ್ಲಿ ಸೋತರು. ಮತ್ತೊಮ್ಮೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಅವಕಾಶ ನೀಡಲಾಗಿ ಅಲ್ಲೂ ಸೋತರು. ಬಿಜೆಪಿಯ ಉಮಾನಾಥ ಕೋಟ್ಯಾನ್ ಅವರು ಎರಡುಬಾರಿ ಶಾಸಕರಾದರು.
ಒಂದರ್ಥದಲ್ಲಿ ಸರಕಾರದಿಂದ ಹೀಗೂ ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಪಡಿಸಬಹುದೆಂದು ತೋರಿಸಿಕೊಟ್ಟವರೇ ಉಮಾನಾಥ ಕೋಟ್ಯಾನ್.
ಎರಡೆರಡು ಬಾರಿ ಸೋತರೂ ಮಿಥುನ್ ರೈ ಕ್ಷೇತ್ರ ಬಿಡಲಿಲ್ಲ. ಎರಡು ಚುನಾವಣೆಗಳಿಗೆ ಅವರು ಸಾಕಷ್ಟು ಕೋಟಿ ಕಳೆದುಕೊಂಡಿದ್ದಾರೆ.ಆದರೂ ಪಕ್ಷ, ಕಾರ್ಯಕರ್ತರು ಅಂತ ಕ್ಷೇತ್ರ ಸುತ್ತಾಡಿದರು.ಬೆದ್ರದಲ್ಲಿ ಬೇರೆನೇ ಕಚೇರಿ ಮಾಡಿದರು. ಆದರೆ ಕಾಂಗ್ರೆಸ್ ಪಕ್ಷ ಮತ್ತು ಕಾರ್ಯಕರ್ತರು ಈ ಹಿಂದಿನಂತಿಲ್ಲ ಎನ್ನುವುದು ಸತ್ಯ. ಅಲ್ಲದೆ ಯಾರು ನಮ್ಮದೇ ಮತದಾರರು ಎಂದು ಅಲ್ಪಸಂಖ್ಯಾತರಾದ ಕ್ರೈಸ್ತ, ಮುಸಲ್ಮಾನರನ್ನು ಕಾಂಗ್ರೆಸ್ ನಂಬಿತ್ತೋ ಅವರಲ್ಲೀಗ ಹೆಚ್ಚಿನವರು ಕೈ ಪರವಾಗಿಲ್ಲ.
ಯಾಕೆಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ಧರಾಮಯ್ಯರಿಗೋಸ್ಕರ ಅಂತ ಮುಸಲ್ಮಾನರು, ಕ್ರೈಸ್ತರು 98% ಕಾಂಗ್ರೆಸ್ ಬೆಂಬಲಿಸಿದ್ದರು.ಆದರೆ ಚುನಾವಣೆಯಲ್ಲಿ ಸೋತ ಬಳಿಕ ‘ ಇವರು ನಮಗೆ ಓಟೇ ಹಾಕಲಿಲ್ಲ’ ಅಂತ ಹೇಳಲಾಯಿತು. ಅಲ್ಲದೆ ನಾಯಕರೊಬ್ಬರು ‘ ಇವರ ಮತ ಲೆಕ್ಕಕ್ಕಿಲ್ಲ’ ಅಂತ ನೆಗ್ಲೆಕ್ಟ್ ಮಾಡಿ ( ಅಂದರೆ,ಅವರು ಯಾವತ್ತೂ ನಮಗೇ ಓಟು ಹಾಕುವುದು,ಅವರಿಗೆ ಬೇರೆ ದಾರಿ ಇಲ್ಲ ಎನ್ನುವರ್ಥದಲ್ಲಿ) ಹೇಳಿಕೊಂಡರೋ ಅಂದಿನಿಂದ ಇಲ್ಲಿನ ಕಾಂಗ್ರೆಸ್ ಗೆ ಅಲ್ಪಸಂಖ್ಯಾತ ಮತಗಳು ಕ್ಷೀಣಿಸತೊಡಗಿದೆ.ಇತ್ತೀಚೆಗೆ ನಡೆದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣಾ ರಿಸಲ್ಟ್ ಇದಕ್ಕೆ ಬೆಸ್ಟ್ ಎಕ್ಸಾಂಪಲ್.
ಇನ್ನು ಕಾರ್ಯಕರ್ತರೂ ಹಾಗೆ. ಅಭಯರ ಟೈಮಲ್ಲಿ ಯಾರೆಲ್ಲಾ ಲಾಭಮಾಡಿಕೊಂಡಿದ್ದರೋ,ಯಾರೆಲ್ಲಾ ಒಂದಿಡೀ ಪುಟದ ಸ್ಥಾನಮಾನಗಳನ್ನು ಪಡೆದುಕೊಂಡಿದ್ದರೋ ಅವರ್ಯಾರೂ ಈಗ ಪಕ್ಷದಲ್ಲಿ ಕಾಣಿಸುತ್ತಿಲ್ಲ. ಪಕ್ಷಕ್ಕಾಗಿ ಬ್ಯಾನರ್ ಕಟ್ಟಿ ಹಗಲಿಡೀ ದುಡಿದ ಅದೆಷ್ಟೋ ಹಿರಿಯ ಕಾರ್ಯಕರ್ತರನ್ನು ಮೂಲೆಗುಂಪು ಮಾಡಲಾಗಿದೆ.
ಹೀಗೆ ಮೂಲೆಗುಂಪಾದ ಹಿರಿಯರ ಮಕ್ಕಳೆಲ್ಲಾ ಬಿಜೆಪಿ.ಇನ್ನು ಹೆಚ್ಚಿನ ಹಿರಿಯರು ಕೂಡಾ ಮಕ್ಕಳ ಹಾದಿ ಹಿಡಿದವರೇ.
ಅವಕಾಶ ಸಿಕ್ಕವರಿಗೇ ಮತ್ತೆ ಮತ್ತೆ ಅವಕಾಶ ಸಿಗುತ್ತಿದೆ ಎಂಬ ಆರೋಪವಿದೆ.ಹಾಗಾಗಿ ಪ್ರಾಮಾಣಿಕ ಕಾರ್ಯಕರ್ತರು ಕೂಡಾ ದೂರ ಉಳಿವಂತಾಗಿದೆ.
ಇಲ್ಲಿ ಅಭಯ ಬಳಗ , ಮಿಥುನ್ ಬಳಗ ಮತ್ತು ಐವನ್ ಬಳಗ ಅಂತ ಮೂರು ಗುಂಪುಗಳಿದೆ.ಒಂದೇ ಪಕ್ಷ, ಮೂರು ಗುಂಪು.ಈ ಪೈಕಿ ಯಾರಿಗೆ ಒಂದು ಸ್ಥಾನಮಾನ ಸಿಕ್ಕರೂ ಉಳಿದವರಿಗೆ ಸಮಾಧಾನವಿಲ್ಲ.ಒಂಥರಾ ‘ ಒರಿಯನ್ ತೂಂಡ ಒರಿಯಗಾಪುಜಿ’ ಎಂಬಂತೆ !
ಕಾಂಗ್ರೆಸ್ಸಲ್ಲೇ ಇದ್ದು ಬಿಜೆಪಿ ಪರವಾಗಿರುವವರು,ಬಿಜೆಪಿಯ ಸಿದ್ಧಾಂತ ಬೆಂಬಲಿಸುವವರು ಇದ್ದಾರೆ. ‘ನಮ ಅಣ್ಣಗೋಸ್ಕರ’ ಅಂತ ಹೇಳಿಕೊಂಡು ಕಾಂಗ್ರೆಸಲ್ಲಿ ಪಾರ್ಟೈಮ್ ಆಗಿರುವವರೂ ಇದ್ದಾರೆ.ಇಲ್ಲಿ ಅಣ್ಣ ಎಂದರೆ ಮಿಥುನ್ ರೈ.
ಮಿಥುನ್ ರೈಗೋಸ್ಕರ ಕಾಂಗ್ರೆಸ್ ಅಂತ ಹೇಳುವವರು,ಅಧಿಕಾರ ಇರುವಾಗ ಮತ್ತು ಓಟಿನ ಟೈಮಲ್ಲಿ ಒಂದಿಷ್ಟು ತೆರೆಮರೆಯಲ್ಲಿ ಕೆಲಸ ಮಾಡುತ್ತೇವೆಂದು ಲಾಭ ಪಡೆಯುವವರೂ ಇದ್ದಾರೆ. ಹೀಗಾಗಿ ಇಲ್ಲಿ ಯಾರು ಕಾಂಗ್ರೆಸ್, ಯಾರು ಬಿಜೆಪಿ ಎನ್ನುವುದೇ ಅರ್ಥವಾಗುತ್ತಿಲ್ಲ.
ಕೆಲವು ಬಿಜೆಪಿಯವರ ಪರ ಕಾಂಗ್ರೆಸ್ ನಾಯಕರ ಕಾಲ್ ಹೋಗುತ್ತದೆ, ಬಿಜೆಪಿಯವರ ಕೆಲಸ ಕಾಂಗ್ರೆಸ್ ಲೋಕಲ್ ನಾಯಕರಿಂದಾಗುತ್ತದೆ,ಅದೆಷ್ಟೋ ವರ್ಷಗಳಿಂದ ಆಗದ 94 ಸಿ, 94 ಸಿಸಿ ಕೆಲಸಗಳು ಕೈ ನಾಯಕರಿಂದಾಗಿ ಬಿಜೆಪಿಯವರಿಗಾಗುತ್ತದೆ, ಈ ಸಮಸ್ಯೆ ಪರಿಹಾರವಾಗದೆ ಅದೆಷ್ಟೋ ವರ್ಷಗಳಿಂದ ಅಲೆದಾಡುವ, ಕಾಂಗ್ರೆಸ್ ಗಾಗಿ ನಿಷ್ಠುರ ಮಾಡಿಕೊಂಡು, ಜೀವಮಾನವಿಡೀ ಕೈ ಕೈ ಕೈ ಎಂದು ಜೀವಬಿಡುವ ನೈಜ ಕಾಂಗ್ರೆಸಿಗರಿನ್ನೂ ರಡ್ಡರೆ, ಐನ್ ಸೆನ್ಸ್ ಗಾಗಿ ಇನ್ನೂ ಅಲೆದಾಡುತ್ತಿದ್ದಾರೆ.ಅಂತವರನ್ನು ಮೂಸುವವರಿಲ್ಲ.
ಅಧಿಕಾರಿಗಳಲ್ಲೂ ಯಾರು ಕಾಂಗ್ರೆಸ್ ,ಯಾರು ಬಿಜೆಪಿ ಎನ್ನುವ ಗೊಂದಲವಿದೆ.
ಅಧಿಕಾರ ಸಿಕ್ಕಾಗ ಯಾರಾದರೂ ಒಂದು ಉದ್ಯೋಗ, ವ್ಯವಹಾರ ಮಾಡಲು ಹೊರಟರೆ ಅದಕ್ಕೆ ಕಿನ್ಕುವವರು ಈ ಕಾಂಗ್ರೆಸ್ ಎಂಬ ಮನೆಯೊಳಗೇ ಇದ್ದಾರೆ.
ಇತ್ತೀಚೆಗೆ ಕಂದಾಯ ಅಧಿಕಾರಿಯೊಬ್ಬರ ವರ್ಗಾವಣೆ ವಿಚಾರದಲ್ಲೂ ಒಂದೇ ಪಕ್ಷದ ಎರಡು ತಂಡಗಳ ನಡುವೆ ಒಂದಿಷ್ಟು ಪ್ರಭಾವ ರಾಜಕೀಯ ನಡೆದಿದೆ.
ಈಗ ಹೊಸ ವಿಚಾರ ಏನೆಂದರೆ ಮಿಥುನ್ ರೈ ಬೆದ್ರಕ್ಕೆ ಬರುತ್ತಿಲ್ಲ, ಅವರು ಬಾರದೆ ತಿಂಗಳು ಮೂರಾಗಿದೆ, ಯಾವ ಕಾರ್ಯಕ್ರಮಗಳಿಗೂ ಅವರು ಬರುತ್ತಿಲ್ಲ ಎನ್ನುವುದು.
ಒಂದರ್ಥದಲ್ಲಿ ಮಿಥುನ್ ಅವರು ಕಿನ್ನಿಗೋಳಿಯ ರಿಸಲ್ಟ್ ನಂತರ ಬರುತ್ತಿಲ್ಲ ನಿಜ.ಆದರೆ ಅವರು ಬಾರದಿರುವುದಕ್ಕೂ, ಆ ರಿಸಲ್ಟ್ ಗೂ ಸಂಬಂಧವಿದೆಯಾ ಗೊತ್ತಿಲ್ಲ.
ಸಾಕಷ್ಟು ಖರ್ಚು ಮಾಡಿ ಸೋಲುವುದೇ ಆದರೆ ತನಗಿನ್ನೇಕೆ ಪಾಲಿಟಿಕ್ಸ್ ? ಅಂತ ಯೋಚಿಸಿದ್ದಾರಾ, ಬೆದ್ರದ ಸಹವಾಸವೇ ಬೇಡ ಅಂತ ದೂರ ಉಳಿದಿದ್ದಾರಾ ? ಗೊತ್ತಿಲ್ಲ.
ಇದರಿಂದಾಗಿ ಇರುವ ಕಾರ್ಯಕರ್ತರಲ್ಲೂ ಗೊಂದಲ ಶುರುವಾಗಿದೆ.ಅಭಯರಲ್ಲಿ ಹೇಳಿಕೊಳ್ಳೋಣ ಅಂದರೆ ಅವರು ಪೂರ್ಣ ಜವಾಬ್ದಾರಿಯನ್ನು ಮಿಥುನ್ ಅವರಿಗೆ ನೀಡಿಯಾಗಿದೆ.ಮಿಥುನ್ ರೈ ಅವರಲ್ಲಿ ಹೋಗೋಣವೆಂದರೆ ಅವರು ಬರುತ್ತಿಲ್ಲ, ಸಿಗುತ್ತಿಲ್ಲ.
ಹೀಗಾಗಿ ಸಾಮಾನ್ಯ ಕಾರ್ಯಕರ್ತರ,ಮತದಾರರ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಯಾರಲ್ಲಿ ? ಎಂಬ ಪ್ರಶ್ನೆಯೆದ್ದಿದೆ.
ಈಗ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದರೂ ತಮ್ಮ ಕೆಲಸವಾಗದಿದ್ದರೆ ನಾವು ಇದರಲ್ಲಿ ಇದ್ದರೇನು,ಇಲ್ಲದಿದ್ದರೇನು ಎಂದು ಮತ್ತೂ ಕೆಲವು ಕಾಂಗ್ರೆಸಿಗರು ಕೈ ಗೆ ಬೈ ಮಾಡಲು ಸಿದ್ದರಾಗಿದ್ದಾರೆ.
ಶೀಘ್ರದಲ್ಲೇ ಪಂಚಾಯತ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳು ಬರುತ್ತಿದೆ.ಅದಕ್ಕಿಂತ ಮುಂಚಿತವಾಗಿ ಒಡೆದ ಮನೆಯನ್ನು ಮತ್ತೆ ಒಂದು ಮಾಡದಿದ್ದರೆ, ಸಮಸ್ಯೆಗಳಿಗೆ ಪರಿಹಾರ ಒದಗಿಸದಿದ್ದಲ್ಲಿ ಮತ್ತು ಯಾರಾದರೂ ಒಬ್ಬ ‘ ನಾನೇ ನಾಯಕ’ ಅಂತ ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಎಲ್ಲೂ ಅಧಿಕಾರಕ್ಕೇರಲು ಕಷ್ಟವಿದೆ.




