ಇಂತಹ ಗೂಂಡಾಗಿರಿ ಈ ಕಾಲದಲ್ಲೂ ಇದೆಯಾ ಎನ್ನುವುದೇ ಆಶ್ಚರ್ಯ. ತಾನು ಮಾಡಿದ್ದೇ ಸರಿ,ತನ್ನ ಹೊರತು ಇತರರು ಹಾಯಾಗಿರಬಾರದು,ನೆಮ್ಮದಿಯಿಂದ ಬದುಕಬಾರದು,ತನ್ನಲ್ಲಿ ಹಣಬಲ- ಜನಬಲ ಇದೆಯೆಂಬ ಅಹಂಕಾರದಿಂದ ಬಡ ಜನರ ಮೇಲೆ, ಬಡ ಕುಟುಂಬಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು ಹಿಂದಿನ ಕಾಲದಲ್ಲಿ ನಡೆಯುತ್ತಿತ್ತು ಎನ್ನುವುದನ್ನು ಕೇಳಿದ್ದೇವೆ. ಆದರೆ ಇಂತಹ ಒಂದು ಗೂಂಡಾಗಿರಿ ನಮ್ಮ ಪಕ್ಕದ ಕಾರ್ಕಳ ತಾಲೂಕಿನಲ್ಲಿ ಈಗಲೂ ನಡೆಯುತ್ತಿದೆ ಎನ್ನುವುದು ಆಶ್ಚರ್ಯ.

ಈ ದಬ್ಬಾಳಿಕೆ, ಅನ್ಯಾಯ,ಗೂಂಡಾಗಿರಿ ನಡೆಯುತ್ತಿರುವುದು ಗೊತ್ತಿದ್ದೂ ಜನಪ್ರತಿನಿಧಿಗಳೆನಿಸಿದವರು,ದಕ್ಷ ಅಧಿಕಾರಿಗಳೆನಿಸಿಕೊಂಡವರು, ಆಡಳಿತ ವ್ಯವಸ್ಥೆ ಕಣ್ಣುಮುಚ್ಚಿ ಕೂತಿರುವುದು ಮತ್ತೊಂದು ಆಶ್ಚರ್ಯ.
ಕಾರ್ಕಳದ ಕುಕ್ಕುಂದೂರಿನಲ್ಲಿ ವಿಶ್ವಕರ್ಮ ಹಾಗೂ ಕುಲಾಲ ಸಮಾಜದ ಎರಡು ಬಡಕುಟುಂಬಗಳು ವಾಸಿಸುತ್ತಿದೆ.ಜಯಂತಿ ಆಚಾರ್ಯ ಮತ್ತು ಗುಲಾಬಿ ಮೂಲ್ಯ ಅವರು ಈ ಮನೆಗಳ ಮುಖ್ಯಸ್ಥರು.
ಆದರೆ ಅಲ್ಲೇ ಪಕ್ಕದಲ್ಲಿರುವ ಜಮೀನ್ದಾರರೊಬ್ಬರಿಗೆ ಈ ಬಡ ಕುಡುಂಬಗಳ ಮೇಲೆ ಅದೇಕೆ ಅಷ್ಟು ಧ್ವೇಷವೋ, ಅದೇಕೆ ಅಷ್ಟೊಂದು ನಿರ್ಲಕ್ಷ್ಯವೋ ಗೊತ್ತಿಲ್ಲ.ನಿರಂತರವಾಗಿ ಅನ್ಯಾಯವೆಸಗುತ್ತಾ ಬಂದಿದ್ದಾರೆ ಎಂದು ಇತ್ತೀಚೆಗೆ ನಡೆಸಿದ ಮಾಧ್ಯಮ ಗೋಷ್ಠಿಯಲ್ಲಿ ತಮ್ಮ ಅಸಹಾಯಕತೆ ತೋರ್ಪಡಿಸಿದ್ದಾರೆ.
ಅದ್ಯಾವನೋ ರಾಜಕೀಯದವನೊಬ್ಬನ ಪ್ರಭಾವ ಬಳಸಿಕೊಂಡು ಆ ಬಡ ಕುಟುಂಬಗಳಿಗೆ ಸಿಗಬೇಕಾದ ಹಕ್ಕುಪತ್ರವನ್ನು ಸಿಗದಂತೆ ಮಾಡಿದ್ದು, ಬಾಡಿಗೆ ಗೂಂಡಾಗಳ ಮೂಲಕ ಬೆದರಿಕೆ ಹಾಕಿಸಿದ್ದು,ಅವರು ಸಣ್ಣ ಜಾಗದಲ್ಲಿ ಮಾಡಿದ ಕೃಷಿಗಳನ್ನು ನಾಶ ಮಾಡಿದ್ದು, ಮಳೆಗಾಲ ಬಂದಾಗ ಈ ಬಡಕುಟುಂಬದ ಮನೆಗಳ ಸುತ್ತ ದೊಡ್ಡ ಗುಂಡಿ ತೆಗೆಸಿ ಅದರಲ್ಲಿ ನೀರು ನಿಲ್ಲುವ ಹಾಗೆ ಮಾಡಿ ಮನೆಗಳನ್ನು ಕೆಡವಿ ಹಾಕುವ ಕೆಲಸಗಳನ್ನು ಮಾಡಿ ಅನ್ಯಾಯವೆಸಗಿದ್ದೇ ಈ ಜಮೀನ್ದಾರನ ಸಾಧನೆ.
ಈಬಗ್ಗೆ ಕುಕ್ಕುಂದೂರು ಪಂಚಾಯತ್, ಪೊಲೀಸ್ ಠಾಣೆ ಅಂತೆಲ್ಲಾ ಕೇಸುಗಳಾಗಿ ಸುದ್ದಿಯಾಗಿತ್ತು.
ಜನಪ್ರತಿನಿಧಿಗಳೆನಿಸಿಕೊಂಡವರು ಅನ್ಯಾಯದ ಪರ ಇರುವಾಗ ಅಧಿಕಾರಿಗಳಿಗೇನು ಮಾಡಲು ಸಾಧ್ಯ?
ಸ್ಥಳಕ್ಕೆ ಭೇಟಿ ನೀಡಿದ್ದಾರಷ್ಟೆ.ಆದರೆ ಆ ದೌರ್ಜನ್ಯ ಮತ್ತೆ ಮುಂದುವರಿದಿದೆ ಎಂದು ಆ ಅಮ್ಮಂದಿರು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಹಾಗಾದರೆ ಬಡವರ ಪರ ಧ್ವನಿ ಎತ್ತುವವರು ಯಾರೂ ಇಲ್ಲವೇ, ಜಮೀನ್ದಾರನ ದಬ್ಬಾಳಿಕೆಗೆ ಕೊನೆ ಇಲ್ಲವೇ, ಈತನ ವಿರುದ್ಧ ಕಾನೂನು ಕ್ರಮ ಕೈಗೊಂಡು ಒಂದು ಸ್ಟ್ರಾಂಗಾದ ಸೆಕ್ಷನ್ ಹಾಕಿ ಕೇಸು ಜಡಿಯಬಾರದೇಕೆ? ಮುಂತಾದ ಪ್ರಶ್ನೆಗಳು ಕೇಳಿ ಬರುತ್ತಿದೆ.
ಇಂದಿನ ಆಧುನಿಕ ಕಾಲದಲ್ಲೂ ಕೂಡಾ ಇಂತಹ ದೌರ್ಜನ್ಯ ಆಗುತ್ತಿದೆ ಎಂದರೆ ಅಲ್ಲಿನ ಸ್ಥಳೀಯಾಡಳಿದ ವೈಫಲ್ಯವೇ ಅದಕ್ಕೆ ನೇರ ಕಾರಣ.
ಬಡ ಕುಟುಂಗಳಿಗೆ ಅನ್ಯಾಯವಾಗುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದ್ದಾರೆಂದರೆ ಅಂತಹ ಅಧಿಕಾರಿಗಳು ಅಲ್ಲಿ ಇರುವ ಅಗತ್ಯವಿದೆಯಾ?
ಕಟ್ಟುನಿಟ್ಟಿನ, ನಿಸ್ಪಕ್ಷಪಾತ ಅಧಿಕಾರಿಗಳು, ದಕ್ಷ ,ಪ್ರಾಮಾಣಿಕ ಅಧಿಕಾರಿಗಳು ಉಡುಪಿ ಜಿಲ್ಲೆಯಲ್ಲಿದ್ದಾರೆ. ಈ ಬಡ ಕುಟುಂಬಗಳಿಗಾಗುತ್ತಿರುವ ಅನ್ಯಾಯವನ್ನು ತಿಳಿದುಕೊಂಡು ಅನ್ಯಾಯವೆಸಗುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಇದೀಗ ತಮ್ಮ ಸಮುದಾಯದ ನಾಯಕರಾದರೂ ನಮ್ಮ ನೆರವಿಗೆ ಬಂದಾರಾ …ಎಂಬ ನಿರೀಕ್ಷೆಯಲ್ಲಿ ಈ ಎರಡು ಕುಟುಂಬಗಳಿದೆ.





