ಮೂಡುಬಿದಿರೆಯ ದೇವಾಡಿಗರ ಸುಧಾರಕ ಸಂಘದ ಆಡಳಿತಕ್ಕೊಳಪಟ್ಟಿರುವ ಗೌರಿಕೆರೆಯ ಶ್ರೀ ರಾಮ ಮಂದಿರದಲ್ಲಿ ಸಪರಿವಾರ ಶ್ರೀ ರಾಮ ದೇವರ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮೇ.6 ರಿಂದ 10 ರವರೆಗೆ ನಡೆಯಲಿದೆ ಎಂದು ದೇವಾಡಿಗರ ಸುಧಾರಕ ಸಂಘದ ಅಧ್ಯಕ್ಷರಾದ ಪುರಂದರ ದೇವಾಡಿಗ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಮ್ಮದೇ ಸಂಸ್ಥೆಯ ಆಡಳಿತಕ್ಕೊಳಪಟ್ಟಿರುವ ಶ್ರೀ ರಾಮ ಮಂದಿರವು ಕಾಲಕಾಲಕ್ಕೆ ಜೀರ್ಣೋದ್ಧಾರ ಹೊಂದಿ 2014 ರಲ್ಲಿ ನೂತನ ಗರ್ಭಗುಡಿ ಸಹಿತ ಶ್ರೀ ರಾಮ ದೇವರ ಮತ್ತು ಪರಿವಾರ ದೇವರುಗಳ ಪಂಚಲೋಹದ ವಿಗ್ರಹವನ್ನು ಪ್ರತಿಷ್ಠಾಪಿಸಿ ಬ್ರಹ್ಮಕಲಶೋತ್ಸವವನ್ನು ನೆವೇರಿಸಲಾಗಿದ್ದು ಇದೀಗ 12 ವರ್ಷಗಳ ಬಳಿಕ ಮತ್ತೊಮ್ಮೆ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ ಎಂದ ಅವರು ಶ್ರೀ ರಾಮ ಮಂದಿರದಲ್ಲಿ ನಡೆಯುತ್ತಿರುವ ಉತ್ಸವಗಳು, ಪೂಜೆ,ಭಜನೆ ಹಾಗೂ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ದೇವಾಡಿಗರ ಸುಧಾರಕ ಸಂಘವು 1944 ರಲ್ಲಿ ಸ್ಥಾಪಿಸಲ್ಪಟ್ಟು 1959 ರಲ್ಲಿ ನೋಂದಣಿಗೊಂಡಿರುತ್ತದೆ, ಕಳೆದ 80 ವರ್ಷಗಳಿಂದ ಸಮಾಜದ ಹಿತ ರಕ್ಷಣೆಯನ್ನು ಹೊತ್ತು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಸಂಘವು ಸ್ವಂತ ನಿವೇಶನ,ಸುಮಾರು 500 ಜನರು ಕುಳಿತುಕೊಳ್ಳಬಹುದಾದ ಸುಸಜ್ಜಿತ ಸೀತಾರಾಮ ಕಲ್ಯಾಣ ಮಂಟಪ,ವಿಶಾಲವಾದ ಭೋಜನ ಗೃಹ ಹಾಗೂ ಸಮಾಜ ಭವನವನ್ನು ಹೊಂದಿದೆ, ಅವಿಭಜಿತ ದ.ಕ.ಜಿಲ್ಲೆಯಲ್ಲಿರುವ ದೇವಾಡಿಗರ ಸಂಘಗಳಲ್ಲಿ ಅಗ್ರಸ್ಥಾನದಲ್ಲಿರುವ ಸಂಸ್ಥೆಗಳಲ್ಲಿ ನಮ್ಮ ಸಂಸ್ಥೆಯೂ ಒಂದಾಗಿದೆ ಎಂದರು.
ಸಂಘವು 80 ನೇ ವರ್ಷದ ಅಮೃತಮಹೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸಮುದಾಯ ಭವನ ಉದ್ಘಾಟನೆ ಕೂಡಾ ಈ ಸಂದರ್ಭದಲ್ಲಿ ನಡೆಯಲಿದೆ ಎಂದವರು ಮಾಹಿತಿ ನೀಡಿದರು.
ಮೇ.5 ರಂದು ಸಂಜೆ 4 ರಿಂದ ಸ್ವರಾಜ್ಯ ಮೈದಾನದಿಂದ ಹೊರಡುವ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು ಚೌಟರ ಅರಮನೆಯ ಕುಲದೀಪ್ ಎಂ.ಅವರು ಚಾಲನೆ ನೀಡಲಿದ್ದಾರೆ.
ಪ್ರತಿದಿನ ಸಂಜೆ 5 ರಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮೇ.8 ರಂದು ಬೆಳಿಗ್ಗೆ 9-51 ಕ್ಕೆ ಶ್ರೀ ರಾಮ ದೇವರಿಗೆ 108 ಕಲಶ ಸಹಿತ ಬ್ರಹ್ಮ ಕಲಶಾಭಿಷೇಕ ಹಾಗೂ ಪರಿವಾರ ಶ್ರೀ ರಕ್ತೇಶ್ವರಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿಗೆ ಕಲಶಾಭಿಷೇಕ ನಡೆಯಲಿದೆ ಎಂದರು.
ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ರತ್ನಾಕರ ಸಿ.ಮೊಯ್ಲಿ, ಕಾರ್ಯಾಧ್ಯಕ್ಷರಾದ ವಿಶ್ವನಾಥ ಪಿ.ದೇವಾಡಿಗ, ಖಜಾಂಚಿ ಯಶೋಧರ ದೇವಾಡಿಗ,ಸೋಮನಾಥ ಮೊಯ್ಲಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





