ಬನ್ನಡ್ಕ ಪರಿಸರದಲ್ಲಿ ರಸ್ತೆ ಅಗಲೀಕರಣ, ಹೆದ್ದಾರಿಯಾದ ಬಳಿಕ ಹಲವು ಅಪಘಾತಗಳು ಸಂಭವಿಸಿದೆ. ಮೂರ್ನಾಲ್ಕು ಜೀವಗಳ ಬಲಿಯಾಗಿದೆ. ಒಂದೇ ಪರಿಸರದ ಅಂತರದಲ್ಲಿ ಹಲವು ಅಪಘಾತಗಳು ಸಂಭವಿಸಿ ರಸ್ತೆಗೆ ಚೆಲ್ಲಿದ ರಕ್ತಗಳಿಗೆ ಲೆಕ್ಕವಿಲ್ಲ. ಈ ಪರಿಸರದ ರಸ್ತೆಯ ಹೆಸರು ಕೇಳಿದೊಡನೆ ಜನರಲ್ಲೀಗ ಭಯಭೀತಿ ನಿರ್ಮಾಣವಾಗುತ್ತಿದೆ.ವಾಹನ ಸವಾರರಂತೂ ಸಂಜೆಯ ನಂತರ ಈ ರಸ್ತೆಯಲ್ಲಿ ಹೋಗಲು ಹಿಂಜರಿಯುತ್ತಿದ್ದಾರೆ.ಬೇರೆ ದಾರಿಗಳಿದೆಯಾದರೂ ಅದು ಸುತ್ತುಬಳಸಿ ಹೋಗಬೇಕು.
ಈಗ ಹಿಂದಿನಂತಿಲ್ಲ. ಹೆದ್ದಾರಿಯಾದ ನಂತರ ಅಲಂಗಾರು ದಾಟಿದ ಬಳಿಕ ಯಾವ ಊರೆಂದೇ ಅರಿತುಕೊಳ್ಳಲು ಕಷ್ಟವಾಗುತ್ತಿದೆ. ಕಾರ್ಕಳದಿಂದ ಮೂಡುಬಿದಿರೆಗೆ ಬರುವಾಗಲೂ ಕೆಲವೊಂದು ಪರಿಸರಗಳು ನಮಗೆ ಕಾಣಸಿಗುತ್ತಿಲ್ಲ.ಅಂದರೆ ಮೂರ್ನಾಲ್ಕು ವರ್ಷಗಳ ಹಿಂದೆ ಈ ರಸ್ತೆಯಲ್ಲಿ ಸಂಚರಿಸಿದ ಅನುಭವಗಳಾಗುತ್ತಿಲ್ಲ. ಅಭಿವೃದ್ಧಿಯಾದಂತೇ ಹಳೆಯ ಅನುಭವಗಳು, ಕೆಲವೊಂದು ರಸ್ತೆಗಳು, ಕೆಲವೊಂದು ಪರಿಸರಗಳು ಮಾಯಕ್ಕವಾಗಿದೆ.
ಅಲಂಗಾರು- ಬೆಳುವಾಯಿ ನಡುವೆ ಬನ್ನಡ್ಕ ಸಿಗುತ್ತದೆ. ಈ ಪರಿಸರದಲ್ಲಿ ಹಿಂದಿನಿಂದಲೂ ಕೆಲವು ಕಾರಣಿಕ ಕ್ಷೇತ್ರಗಳಿವೆ. ರಸ್ತೆಯ ಬದಿಯಲ್ಲೇ ಕೆಲವು ದೈವೀಶಕ್ತಿಗಳು ನೆಲೆನಿಂತ ಗ್ರಾಮವಿದು.
ಇದೇ ಪರಿಸರದಲ್ಲಿ ಎಸ್.ಕೆ.ಎಫ್.ಎಂಬ ವಿಶ್ವದಾದ್ಯಂತ ಹೆಸರಿನ ಸಂಸ್ಥೆಯಿದೆ.ಬನ್ನಡ್ಕ ಕ್ಷೇತ್ರವಿದೆ.ರಾಘವೇಂದ್ರ ಮಂದಿರವಿದೆ. ಬೆಳುವಾಯಿ ಪಂಚಾಯತ್, ಪಡುಮಾರ್ನಾಡು ಪಂಚಾಯತ್ ಗಳಿವೆ.ಮದುವೆ ಹಾಲ್ ಗಳಿವೆ. ಶಾಲೆಗಳಿದೆ.ಸರಕಾರಿ ಪದವಿ ಕಾಲೇಜು ಕೂಡಾ ಇದೇ ಪರಿಸರದಲ್ಲಿದೆ.
ಈ ಪ್ರದೇಶಕ್ಕೆ ತುಂಬಾ ಮಂದಿ ಉದ್ಯೋಗಿಗಳು, ಕಾರ್ಮಿಕರು, ವಿದ್ಯಾರ್ಥಿಗಳು ಅಂತ ಪ್ರತಿನಿತ್ಯ ಬಂದು ಹೋಗುತ್ತಾರೆ.
ಇಲ್ಲೊಂದು ಸಮಸ್ಯೆ ಕಾಣಲು ಪ್ರಾರಂಭವಾದದ್ದೇ ಹೆದ್ದಾರಿಯಾದ ನಂತರ. ಮೊದಲಿಗೆ ಬೈಕ್ ಸವಾರರೊಬ್ಬರು ಅಪಘಾತದಲ್ಲಿ ಮೃತಪಟ್ಟರು. ಬಳಿಕ ವಿದ್ಯಾರ್ಥಿಯೊಬ್ಬ ಮೃತಪಟ್ಟ.ಮೊನ್ನೆಮೊನ್ನೆ ರಿಕ್ಷಾ ಚಾಲಕರೊಬ್ಬರು ಮೃತಪಟ್ಟರು.ಆಬಳಿಕ ಬಸ್ ಪಲ್ಟಿಯಾಗಿ ಹಲವು ಮಂದಿ ಗಾಯಗೊಂಡು ಸ್ಕೂಟರ್ ಸವಾರೆಯೊಬ್ಬರು ಮೃತಪಟ್ಟರು. ಕಂಟಿನ್ಯೂ ಆಗಿ ಮೂರು ದಿವಸಗಳಲ್ಲಿ ಇದೇ ಪರಿಸರದಲ್ಲಿ ವಾಹನಗಳ ಅಪಘಾತ ಸಂಭವಿಸಿದೆ.
ಹೆದ್ದಾರಿ ಕಾಮಗಾರಿ ಆರಂಭವಾಗುವಾಗಲೇ ಅಲಂಗಾರು, ಸ್ಥಳೀಯ ಪರಿಸರದ ಜನರು ತಕರಾರು ಎಬ್ಬಿಸಿ ಪ್ರತಿಭಟಿಸಿದ್ದರು.
ಕೆಲವರು ಕಾಮಗಾರಿ ಸರಿಯಾಗಿ ನಡೆದಿಲ್ಲ,ಅವೈಜ್ಞಾನಿಕವಾಗಿ ನಡೆದಿದೆ ಎಂದು ಆರೋಪಿಸಿದ್ದರು. ಕಾಮಗಾರಿ ವೈಜ್ಞಾನಿಕವಾಗಿ ನಡೆದಿದೆಯೋ,ಅವೈಜ್ಞಾನಿಕವಾಗಿ ನಡೆದಿದೆಯೋ ಗೊತ್ತಿಲ್ಲ. ಆದರೆ ಈ ರಸ್ತೆಯಾಗಿ ಹೋಗಬೇಕಾದರೆ ಅದ್ಯಾಕೋ ಕನ್ಫ್ಯೂಷನ್ ಆಗುತ್ತಿದೆ,ಡೈವರ್ಷನ್ ಸರಿಯಾಗಿ ಇರದ ಕಾರಣ ವಾಹನ ಸವಾರರಲ್ಲಿ ಗೊಂದಲ ಉಂಟಾಗುತ್ತದೆ ಎಂದು ಅದೇ ಪರಿಸರದ ಜನರು ಹೇಳುತ್ತಾರೆ.
ದೈವದ ಕಲ್ಲಿಗೆ ಹಾನಿ ???
ಈ ಪರಿಸರದಲ್ಲಿ ಕಾರಣಿಕ ದೈವವೊಂದರ ಕಲ್ಲಿಗೆ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಹಾನಿಯಾಗಿತ್ತೆಂದೂ, ಆ ದೈವ ಮುನಿಸಿಕೊಂಡಿರುವುದರಿಂದ ಈ ರೀತಿಯ ಅಪಘಾತಗಳು ಅಪಗಪಾಗ ಸಂಭವಿಸುತ್ತಿದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ.
ಜನರ ಬಾಯಲ್ಲೂ ಇದೇ ಮಾತುಗಳು ಹೆಚ್ಚು ಚಲಾವಣೆಯಲ್ಲಿದೆ. ಒಂದುವೇಳೆ ಅದು ಹೌದೆಂದಾದರೆ ಅದಕ್ಕೆ ಸಂಬಂಧಪಟ್ಟವರು, ಗ್ರಾಮಸ್ಥರು ಸೇರಿಕೊಂಡು ಪರಿಹಾರ ಕಲ್ಪಿಸಿ ಇನ್ನಷ್ಟು ರಕ್ತ ಸುರಿಯುವುದನ್ನು ತಪ್ಪಿಸಬೇಕಿದೆ.
ಮಳೆಯ ಪರಿಣಾಮ ರಸ್ತೆ ಸ್ಕಿಡ್ ಆಗುವುದರಿಂದ ಅಪಘಾತಗಳು ಸಂಭವಿಸುತ್ತದೆ, ಡೈವರ್ಷನ್ ಗೊಂದಲದಿಂದ ಅಪಘಾತಗಳು ಸಂಭವಿಸುತ್ತಿದೆ ಎಂದು ಹೇಳುವವರೂ ಇದ್ದಾರೆ. ಆದರೆ ಹೆಚ್ಚಿನ ಜನರ ಬಾಯಲ್ಲಿ ದೈವದ ಮಾತೇ ಕೇಳಿ ಬರುತ್ತಿದೆ.





