ಸೋಮವಾರ ಬೀಸಿದ ಬಾರೀ ಗಾಳಿಗೆ ಇರುವೈಲಿನ ಮನೆಯೊಂದರ ಮೇಲೆ ವಿದ್ಯುತ್ ತಂತಿಗಳು ಬಿದ್ದಿತ್ತು. ಈ ಘಟನೆ ಸಂಭವಿಸಿ ಎರಡು ದಿನಗಳು ಕಳೆದರೂ ಮೆಸ್ಕಾಂ ಅಧಿಕಾರಿಗಳು ಈ ಮನೆಗೆ ಭೇಟಿ ನೀಡದಿರುವುದರಿಂದ ಈ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇರುವೈಲಿನ ಪರಾರಿಯ ರಮೇಶ್ ಪ್ರಭು ಎಂಬವರ ಮನೆಯ ಮೇಲೆ ವಿದ್ಯುತ್ ಕಂಬ ಮತ್ತು ತಂತಿಗಳು ಬಿದ್ದು ಹಾನಿಯಾಗಿತ್ತು.
ಈಬಗ್ಗೆ ಕೂಡಲೇ ಮೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತಾದರೂ ಇನ್ನೂ ಕೂಡಾ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ, ಬಡವನ ಮನೆ ಎಂದು ಕಡೆಗಣಿಸುತ್ತಿದ್ದಾರೆ, ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಯಿಂದ ಇರುವೈಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಸ್ಪಂದನೆ ಸಿಗದಿದ್ದಲ್ಲಿ ಇರುವೈಲು ಪರಿಸರದ ಜನರು ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆಗೆ ಸಜ್ಜಾಗಿದ್ದಾರೆ ಎಂದು ಆ ಭಾಗದ ಮುಖಂಡ, ಕೆಡಿಪಿ ಸದಸ್ಯ ಪ್ರವೀಣ್ ಪೂಜಾರಿ ಅವರು ತಿಳಿಸಿದ್ದಾರೆ.
ಕಳೆದ ವರ್ಷ ಇದೇ ಪರಿಸರದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಮತ್ತೆ ಈಬಾರಿ ಅಪಾಯ ಸಂಭವಿಸುವ ಮುನ್ನ ಅಧಿಕಾರಿಗಳು ತಮ್ಮ ನಿರ್ಲಕ್ಷ್ಯವನ್ನು ಬದಿಗಿರಿಸಿ ಜನರ ಪ್ರಾಣವನ್ನು ಕಾಪಾಡುವ ಕೆಲಸಕ್ಕೆ ಮುಂದಾಗಬೇಕಿದೆ.





