ರೈತರು ಬೆಳೆದ ಕೃಷಿ ಮತ್ತು ಹೈನುಗಾರಿಕೆ ಉತ್ಪನ್ನಗಳಿಗೆ ಮೌಲ್ಯಾಧಾರಿತ ಬೆಲೆಯನ್ನು ನಿಗದಿಗೊಳಿಸಬೇಕು, ಕೃಷಿ ಮಾಡಿದವನೇ ಕೃಷಿ ಭೂಮಿಯ ಒಡೆಯನೆಂದು ಘೋಷಿಸಬೇಕು,ಕುಮ್ಕಿ ಆಸ್ತಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಮೇ.29 ರಂದು ಬೆಳಿಗ್ಗೆ 10 ಗಂಟೆಗೆ ಮೂಡುಬಿದಿರೆ ಶ್ಯಾಮಿಲಿ ಎನ್ಕ್ಲೇವ್ ಕಟ್ಟಡ ಬಳಿಯಿಂದ ತಹಶೀಲ್ದಾರ್ ಕಚೇರಿವರೆಗೆ ರೈತರ ಬೃಹತ್ ಪ್ರತಿಭಟನಾ ಜಾಥಾ ನಡೆಯಲಿದೆ ಎಂದು ತಾಲೂಕು ಕಿಸಾನ್ ಪ್ರಮುಖರು ಹಾಗೂ ಪ್ರಗತಿಪರ ಕೃಷಿಕರಾದ ಜಾಯ್ಲಸ್ ಡಿಸೋಜ ತಾಕೊಡೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರೈತ ವಿರೋಧಿ ನೀತಿಯಿಂದಾಗಿ ರೈತರ ಬದುಕು ಅತ್ಯಂತ ನಿಕೃಷ್ಟವಾದ ಸ್ಥಿತಿಗೆ ತಲುಪಿದೆ, ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ನಡೆಸುವುದು ಕಷ್ಟದಾಯಕವಾಗಿದೆ,ಕೂಲಿಯಾಳುಗಳ ಸಮಸ್ಯೆ,ಬೆಲೆಗಳು ಗಗನಕ್ಕೇರಿರುವ ಸಂದರ್ಭದಲ್ಲಿ ರೈತರಿಗೆ ಲೀಟರ್ ಹಾಲಿಗೆ ಸಿಗುತ್ತಿರುವಿದು ಸರಕಾರದ ಪ್ರೋತ್ಸಾಹ ಧನ ಸೇರಿ ಕೇವಲ 42ರೂ, ಒಂದು ಲೀ.ಹಾಲಿಗೆ ಕನಿಷ್ಠ 100 ರೂ.ವೆಚ್ಚ ತಗಲುತ್ತದೆ, ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಪ್ರತಿ ಲೀಟರ್ ಹಾಲಿಗೆ 65 ರೂ.ಹಾಗೂ ಪ್ರತಿ ಲೀಟರ್ ಹಾಲಿಗೆ 15 ರೂ.ಪ್ರೋತ್ಸಾಹಧನ ನೀಡಬೇಕೆನ್ನುವುದು ರೈತರ ಬೇಡಿಕೆಯಾಗಿದೆ ಎಂದರು.
ಅಕ್ರಮ ಸಕ್ರಮ ಕಾಯ್ದೆಗೆ ರಾಜ್ಯ ಸರಕಾರ ತಂದಿರುವ ಹಲವಾರು ತಿದ್ದುಪಡಿಗಳಿಂದಾಗಿ ಕೃಷಿಕರಿಗೆ ಕೃಷಿ ಮಾಡಿದ ಆಸ್ತಿಯನ್ನು ಅವರಿಗೆ ಮಂಜೂರುಗೊಳಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ,ಪುರಸಭಾ ವ್ಯಾಪ್ತಿಯ ಗಡಿಯಿಂದ ಟವರ್ ಲೊಕೇಷನ್ ಪ್ರಕಾರ 3 ಕಿ.ಮೀ.ವ್ಯಾಪ್ತಿವರೆಗೆ ಅಕ್ರಮ ಸಕ್ರಮದಡಿಯಲ್ಲಿ ಯಾವುದೇ ಆಸ್ತಿ ಮಂಜೂರು ಮಾಡುವಂತಿಲ್ಲವೆಂಬ ಕಾಯ್ದೆಗೆ ತಿದ್ದುಪಡಿಯಾಗಬೇಕೆಂದು ಅವರು ರೈತರ ಪರವಾಗಿ ಆಗ್ರಹಿಸಿದ್ದಾರೆ.
ಪ್ರಕೃತಿ ವಿಕೋಪದಿಂದ ಅಡಿಕೆ ಮರ ನಾಶವಾದಾಗ ಒಂದು ಮರಕ್ಕೆ 20 ಸಾವಿರ, ತೆಂಗಿನ ಮರಕ್ಕೆ, ರಬ್ಬರ್ ಗಿಡಕ್ಕೆ 25 ಸಾವಿರದಂತೆ ಹಾಗೂ ಇತರ ಕೃಷಿ ನಾಶವಾದಾಗ ವೈಜ್ಞಾನಿಕ ಮಾದರಿಯಲ್ಲಿ ಪರಿಹಾರ ನೀಡುವ ಬಗ್ಗೆ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಬೇಕು, ಕುಮ್ಕಿ ಆಸ್ತಿಯಲ್ಲೂ ಸರಕಾರ ತಿದ್ದುಪಡಿ ಬಂದಿರುವುದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ,ಕುಮ್ಕಿ ಆಸ್ತಿಗೂ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿದ ಅವರು ಕೃಷಿ ಮಾಡಿದವನೇ ಕೃಷಿ ಭೂಮಿಯ ಒಡೆಯನೆಂದು ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಎಲ್ಲಾ ಆಗ್ರಹಗಳೊಂದಿಗೆ 29 ರಂದು ನಡೆಯುವ ಪ್ರತಿಭಟನಾ ಜಾಥಾವನ್ನು ಉದ್ದೇಶಿಸಿ ವಕೀಲರು ಹಾಗೂ ರೈತ ಹೋರಾಟಗಾರರಾದ ಶಾಂತಿಪ್ರಸಾದ್ ಹೆಗ್ಡೆಯವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆಂದು ಅವರು ತಿಳಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಂಡಾರಿ, ತಾಲೂಕು ಕಾರ್ಯದರ್ಶಿ ವಸಂತ್ ಭಟ್ ಪಯ್ಯಾಡಿ, ಭಾ.ಕಿ.ಸಂ.ಮಾರ್ಪಾಡಿ ಗ್ರಾಮ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಭಾ.ಕಿ.ಸಂ.ಕಡಂದಲೆಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಟ್ಯಾನ್ ಹಾಗೂ ಭಾ.ಕಿ.ಸಂ.ತೆಂಕಮಿಜಾರಿನ ಪ್ರಮುಖರಾದ ನೇಮಿರಾಜ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.






