ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಭಾರತೀಯ ಕಿಸಾನ್ ಸಂಘ ಹಾಗೂ ರೈತ ಪರ ಹೋರಾಟಗಾರ, ವಕೀಲರಾದ ಶಾಂತಿಪ್ರಸಾದ್ ಹೆಗ್ಡೆಯವರ ನೇತೃತ್ವದಲ್ಲಿ ಮೂಡುಬಿದಿರೆಯಲ್ಲಿಂದು ನಡೆದ ರೈತರ ಪ್ರತಿಭಟನಾ ಜಾಥಾದಲ್ಲಿ ಹಸು ಹಾಗೂ ಹಾಲಿನೊಂದಿಗೆ ಬಂದ ರೈತರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಪುರಸಭಾ ಕಚೇರಿ ಪಕ್ಕದ ಶ್ಯಾಮಿಲಿ ಎನ್ಕ್ಲೇವ್ ಕಟ್ಟಡದ ಬಳಿಯಿಂದ ತಹಶೀಲ್ದಾರ್ ಕಚೇರಿವರೆಗೆ ಜಾಥಾದಲ್ಲಿ ಸಾಗಿದ ರೈತರು ಸರಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕೂಲಿಯಾಳುಗಳ ಸಮಸ್ಯೆಯಿಂದ ಹೈನುಗಾರಿಕೆ ನಡೆಸುವುದು ಕಷ್ಟವಾಗಿದೆ,ಅಲ್ಲದೆ ಸರಕಾರ ಈಗ ನೀಡುತ್ತಿರುವ ಹಾಲಿನ ದರವು ಹೈನುಗಾರರನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿದೆ, ಹಾಲಿನ ದರವನ್ನು ಹೆಚ್ಚಿಸಬೇಕು, ಪ್ರತಿ ಲೀಟರ್ ಹಾಲಿಗೆ 15 ರೂ.ಪ್ರೋತ್ಸಾಹಧನ ನೀಡಬೇಕೆಂದು ಆಗ್ರಹಿಸಿದರು.
ರೈತ ಮುಖಂಡ, ಹೋರಾಟಗಾರ ಶಾಂತಿಪ್ರಸಾದ್ ಹೆಗ್ಡೆಯವರು ಮಾತನಾಡಿ ” ಹೊಸಕಾಯ್ದೆಗಳ ತಿದ್ದುಪಡಿಯಿಂದಾಗಿ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷಕ್ಕಿಂತಲೂ ಅಧಿಕ ಅಕ್ರಮ ಸಕ್ರಮ ಅರ್ಜಿಗಳನ್ನು ವಜಾಗೊಳಿಸಲಾಗಿದೆ, ಕುಮ್ಕಿ ಜಾಗದಲ್ಲಿ ಕೃಷಿ ಮಾಡುವವರಿಗೂ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದ ಅವರು ನಾಡಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಮುಂದಿನ ಆಗಸ್ಟ್ ತಿಂಗಳಲ್ಲಿ ಪ್ರತೀ ಗ್ರಾಮ ಪಂಚಾಯತಿಗಳ ಎದುರು ಸಾವಿರಾರು ರೈತರನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರಲ್ಲದೆ ದೇವಸ್ಥಾನದ ಹೆಸರಿನಲ್ಲಿ ಕೆಲವು ಮರಗಳ್ಳರು ಹೆದ್ದಾರಿ ಬದಿಯ ತೇಗದ ಮರ, ಹೆಬ್ಬಲಸು, ಹಲಸು ಸೇರಿದಂತೆ ಹಲವಾರು ಮರಗಳನ್ನು ಬೇರೆಕಡೆಗೆ ಸಾಗಿಸಿರುವುದೂ ಗಮನಕ್ಕೆ ಬಂದಿದೆ ” ಎಂದರು.
ರೈತ ಮುಖಂಡರಾದ ವಲೇರಿಯನ್ ಕುಟಿನ್ಹೊ,ಪ್ರವೀಣ್ ಭಂಡಾರಿ, ವಸಂತ ಭಟ್, ಜಾಯ್ಲಸ್ ಡಿಸೋಜ, ರಾಧಾಕೃಷ್ಣ ಶೆಟ್ಟಿ, ವೆಂಕಟೇಶ ಕೋಟ್ಯಾನ್, ನೇಮಿರಾಜ ಶೆಟ್ಟಿ, ಮುನಿರಾಜ್ ಹೆಗ್ಡೆ, ಭರತ್ ಜೈನ್, ರಮಾನಂದ ಪಣಪಿಲ ಮತ್ತಿತರರು ಭಾಗವಹಿಸಿದ್ದರು.
ಅಶ್ವಥ್ ಪಣಪಿಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






