ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿರುವ ಎಕ್ಸೆಲ್ ಪಿಯು ಕಾಲೇಜಿನ ಮಾನ್ಯತೆಯೇ ರದ್ದಾಗಿದೆ ಎನ್ನುವ ಸುದ್ದಿಯೊಂದು ಇಂದು ಬಾರೀ ಸದ್ದು ಮಾಡಿತ್ತು. ಗ್ರೂಪ್ ನಿಂದ ಗ್ರೂಪ್ ಗಳಿಗೆ, ವಾಟ್ಸಾಪಿನಿಂದ ವಾಟ್ಸಾಪಿಗೆ ಹರಡಿ ಒಂದಿಷ್ಟು ಗೊಂದಲಕ್ಕೂ ಕಾರಣವಾಗಿತ್ತು.
ಆದರೆ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಜೈನ್ ಅವರು ದಾಖಲೆ ಸಮೇತ ಸ್ಪಷ್ಟೀಕರಣ ನೀಡಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.



‘ ಎಕ್ಸೆಲ್ ಕಾಲೇಜಿಗೆ 2021 ರಲ್ಲಿ ಸರಕಾರದಿಂದ ಮಾನ್ಯತೆ ಸಿಕ್ಕಿದ್ದು ಅದರ ನೋಂದಣಿ ಸಂಖ್ಯೆ SS0351 ಆಗಿದೆ.ಅದೇ ಸಂಖ್ಯೆಗನುಗುಣವಾಗಿ ನಾವು ವಿದ್ಯಾರ್ಥಿಗಳನ್ನು ದಾಖಲು ಮಾಡುತ್ತಾ ಬಂದಿದ್ದೇವೆ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನಾವು ಮತ್ತೆ ಎರಡು ಕಾಲೇಜಿಗೆ ಅವಕಾಶ ಕೇಳಿರುವುದು ಹೌದು, ಸರಕಾರ ಮತ್ತು ಸಂಬಂಧಪಟ್ಟ ಇಲಾಖೆಯವರು ಅದೇ ಸಂಖ್ಯೆಯಡಿ ಮುಂದುವರಿಸಿಕೊಂಡು ಹೋಗಿ ಎಂದು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಹೊಸ ಕಾಲೇಜಿಗಾಗಿ ನಾವು ಹಾಕಿದ್ದ ಅರ್ಜಿಯನ್ನು ಕ್ಯಾನ್ಸಲ್ ಮಾಡಿ ಎಂದು ನಾವೇ ಮನವಿ ಮಾಡಿದ್ದೆವು, ಅದು ಸಹಜವಾಗಿಯೇ ಕ್ಯಾನ್ಸಲ್ ಆಗಿದೆ, ಅದನ್ನೇ ಎಕ್ಸೆಲ್ ಕಾಲೇಜಿನ ಮಾನ್ಯತೆ ರದ್ದಾಗಿದೆ ಎಂದು ಬಿಂಬಿಸಿ ಸುಳ್ಳು ಸುದ್ದಿ ಹರಡಲಾಗಿದೆ”ಎಂದು ದಾಖಲೆಗಳ ಸಮೇತ ಸ್ಪಷ್ಟೀಕರಣ ನೀಡಿರುವ ಅವರು ಯಾವುದೇ ಗಾಳಿಸುದ್ದಿಗಳಿಗೆ, ಗೊಂದಲಗಳಿಗೆ ಕಿವಿಗೊಡಬೇಡಿ” ಎಂದು ಮನವಿ ಮಾಡಿದ್ದಾರೆ.
ಕಳೆದ ಐದು ವರ್ಷಗಳಿಂದ ಎಕ್ಸೆಲ್ ಕಾಲೇಜಿನಲ್ಲಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿದ್ದು ಪ್ರತೀ ವರ್ಷ ಉತ್ತಮ ಫಲಿತಾಂಶ ಕೂಡಾ ಬರುತ್ತಿದೆ.ಇದೆಲ್ಲವನ್ನು ಕಂಡು ಸಹಿಸಿಕೊಳ್ಳಲಾಗದವರು ಈ ರೀತಿಯ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ವಿದ್ಯಾರ್ಥಿಗಳು,ಪೋಷಕರು ಎಂತೂ ತಲೆಬಿಸಿಮಾಡಿಕೊಳ್ಳುವ ಅಗತ್ಯವಿಲ್ಲ. ಅದೇ ರೀತಿ ಸಂಬಂಧವೇ ಇಲ್ಲದವರು ಕೂಡಾ ಮೈ ಕೈ ಪರಚಿಕೊಳ್ಳುವ ಅಗತ್ಯವೇ ಇಲ್ಲ!






