ಬಡ ಜನರ ಸೇವೆಗೆ ಜನಪ್ರತಿನಿಧಿಯಾಗಬೇಕೆಂದೇ ಇಲ್ಲ, ಸಹಾಯ ಮಾಡುವ ಮನಸ್ಸು ಮತ್ತು ಛಲ ಇದ್ದರೆ ಮಾಡಿಕೊಡಬಹುದೆನ್ನುವುದನ್ನು ತೋರಿಸಿಕೊಟ್ಟು ಮಾದರಿಯಾಗಿದ್ದಾರೆ ಶಿರ್ತಾಡಿ ಪಂಚಾಯತ್ ನ ಮಾಜಿ ಸದಸ್ಯ, ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಸಚ್ಚು ಎಂದೇ ಪರಿಚಿತರಾಗಿರುವ ಸತೀಶ್ ಪೂಜಾರಿ.
ಇಲ್ಲಿ ಜಾತಿ,ಪಕ್ಷ, ರಾಜಕೀಯ ಇದ್ಯಾವುದೂ ಗೋಚರಿಸಿಲ್ಲ.ಸಚ್ಚು ಅವರ ಮಾನವೀಯ ಧರ್ಮ ಎಲ್ಲರ ಗಮನಸೆಳೆದಿದೆ.



ಶಿರ್ತಾಡಿ ಅರ್ಜುನಾಪುರ ದೇವಸ್ಥಾನದ ಬಳಿ ಕುಸುಮಾ ಆಚಾರ್ಯ ಎಂಬವರ ಬಡ ಕುಟುಂಬವಿದೆ.ಅಲ್ಲಿರುವುದು ಕುಸುಮಾ ಆಚಾರ್ಯ ,ಅವರ ಮಗ ವಿದ್ಯಾನಂದ ಮತ್ತು ನಾದಿನಿ ವಿಮಲಾ.
ಕಂಬಲ್ದೋಡಿ ಬಳಿಯ ದರ್ಖಾಸು ಮನೆಯ ಸಾಮ್ರಾಯ ಆಚಾರ್ಯ ಎಂಬ ಖ್ಯಾತ ಹೆಸರೊಂದು ಮರೆಯಾದ ಬಳಿಕ ಅವರ ಮಗ ಉಮೇಶ ಆ ಮನೆಯ ಯಜಮಾನನಾಗಿದ್ದ.ಇನ್ನೊಬ್ಬ ಮಗ ಯುವರಾಜ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾತ ಸಣ್ಣ ಪ್ರಾಯದಲ್ಲೇ ಮೃತಪಟ್ಟ. ಉಮೇಶನೂ ಕೆಲ ವರ್ಷಗಳ ಹಿಂದೆ ಮೃತಪಟ್ಟ ಬಳಿಕ ಮನೆಯ ಜವಾಬ್ದಾರಿ ಎಲ್ಲಾ ಆತನ ಪತ್ನಿ ಕುಸುಮಾ ಆಚಾರ್ಯ ಅವರ ಮೇಲೆ ಬಿತ್ತು. ಮಗ ವಿದ್ಯಾನಂದ ಸಣ್ಣವನು, ನಾದಿನಿ ವಿಮಲಾ ಶಿರ್ತಾಡಿ ಆಸುಪಾಸಿನ ಮನೆಗಳಿಗೆ, ಅಂಗಡಿ,ಹೊಟೇಲ್ ಗಳಿಗೆ ಎಂದು ಸಣ್ಣ ಪ್ರಾಯದಲ್ಲೇ ಕೆಲಸಕ್ಕೆ ಹೋಗಿ ಜೀವನಕ್ಕೊಂದು ದಾರಿ ಹುಡುಕಿಕೊಂಡಳು.
ಮಗ ವಿದ್ಯಾನಂದ ವಿದ್ಯಾಭ್ಯಾಸ ಮುಂದುವರಿಸಲಾಗದೆ ಹೊಟೇಲ್ ಸೇರಿಕೊಂಡ.ಕುಸುಮಾ ಅವರ ತಾಯಿ ಕೆಲಕಾಲ ಈ ಮನೆಗೆ ಬಂದು ವಾಸವಾದರು.ಆದರೆ ಅವರು ಅದೇ ಮನೆಯಲ್ಲಿ ತೀರಿಕೊಂಡಿದ್ದಾರೆನ್ನುವುದು ಗೊತ್ತಾದದ್ದು ಮೂರು ದಿವಸಗಳ ಬಳಿಕ.ಆ ಸಂದರ್ಭದಲ್ಲೂ ಆಕೆಯ ಅಂತ್ಯಕ್ರಿಯೆಗೆ ನೆರವಾಗಿದ್ದು ಕೂಡಾ ಇದೇ ಸಚ್ಚು. ಮನೆಯಲ್ಲಿ ಯಾರೂ ಇಲ್ಲದೆ ಏಕಾಂಗಿಯಾಗಿದ್ದ ಕುಸುಮಾ ಮಂಕಾಗುತ್ತಾ ಹೋದಳು.
ಅದು ಹಳೆಯದಾದ ಮನೆ.ಯಾವ ಸೌಕರ್ಯಗಳೂ ಇಲ್ಲದೆ ಆ ಒಂದು ಮಳೆಗಾಲದಲ್ಲಿ ಬಿದ್ದು ಹೋಯಿತು.
ಆದರೂ ಈ ಕುಟುಂಬ ಅದೇ ಮನೆಯಲ್ಲಿ ವಾಸವಾಗಿತ್ತು.ಇವರ ಅಸಹಾಯಕತೆ, ಮಳೆಗಾಲದಲ್ಲಿ ವಾಸವಾಗಲು ಅಸಾಧ್ಯವಾದಾಗ ಕಳೆದ ಎರಡು ವರ್ಷಗಳ ಮಳೆಗಾಲದಲ್ಲಿ ಪಂಚಾಯತ್ ನವರು ಇವರನ್ನು ಗಂಜಿಕೇಂದ್ರಕ್ಕೆ ಶಿಫ್ಟ್ ಮಾಡಿದರು. ಮಳೆಗಾಲ ಕಳೆದ ಕೂಡಲೇ ಮತ್ತೆ ಅದೇ ಬಿದ್ದು ಹೋಗಿ ಅಲ್ಪ ಸ್ವಲ್ಪ ಉಳಿದ ಮನೆಗೆ ಬಂದು ವಾಸವಿದ್ದರು.
ಈ ಬಡ ಕುಟುಂಬದ ಅಸಹಾಯಕತೆಯನ್ನು ಅದೇ ಪರಿಸರದ ಸತೀಶ್ ಪೂಜಾರಿ ಗಮನಿಸುತ್ತಲೇ ಇದ್ದರು.ಈ ಕುಟುಂಬಕ್ಕೊಂದೇನಾದರೂ ಆಶ್ರಯ ಮಾಡಿಕೊಡಬೇಕೆಂಬ ಕಲ್ಪನೆ ಅವರ ಮನಸ್ಸಿನಲ್ಲಿತ್ತು.
ನೆರೆ ಪರಿಹಾರದಲ್ಲಿ ಆ ಮನೆಗೆ ಒಂದು ಲಕ್ಷದ ಇಪ್ಪತ್ತು ಸಾವಿರ ರೂ.ನ್ನು ಮಂಜೂರುಗೊಳಿಸುವಲ್ಲಿ ಯಶಸ್ವಿಯಾದರು.
ಆ ಮನೆಗೆ ಹೋಗಲು ಸರಿಯಾದ ದಾರಿ ಇರಲಿಲ್ಲ.ಅಲ್ಲಿಗೊಂದು ದಾರಿ ಸಿಗಬೇಕಾದರೆ ಅದು ಖಾಸಗಿ ಜಾಗವಾಗಿತ್ತು.ಜಾಗದ ಮಾಲಕರಾದ ಕಂಬಲ್ದೋಡಿ ಜಿನ್ನಮ್ಮ ಬಾಬು ಪೂಜಾರಿ ಕುಟುಂಬದ ಮಬವೊಲಿಸಿದರು.ಅವರು ಕೂಡಾ ಈ ಬಡ ಕುಟುಂಬದ ಮೇಲೆ ಕರುಣೆ ತೋರಿ ಜಾಗ ಬಿಟ್ಟು ಕೊಟ್ಟಿರುವುದರಿಂದ ಮನೆಗೊಂದು ದಾರಿಯಾಯಿತು.
ನೆರೆ ಪರಿಹಾರದಿಂದ ಸಿಕ್ಕ ಒಂದು ಲಕ್ಷದ ಇಪ್ಪತ್ತು ಸಾವಿರವನ್ನು ಹಾಗೇ ಜೋಪಾನವಾಗಿ ಇಟ್ಟುಕೊಳ್ಳಲು ಹೇಳಿ ಉಳಿದ ಖರ್ಚಿಗೆ ಕೆಲವು ದಾನಿಗಳನ್ನು ಹುಡುಕಿದರು ಸಚ್ಚು.
ಶಿರ್ತಾಡಿಯ ಭುವನಜ್ಯೋತಿ ಶಾಲೆಯವರು, ಶಿರ್ತಾಡಿ ಬ್ರಹ್ಮದ ಸತೀಶ್ ಶೆಟ್ಟಿ,ಕೋಂಕೆ ನಾರಾಯಣ ಶೆಟ್ಟಿ,ಶಿರ್ತಾಡಿ ಪಂಚಾಯತ್ ಅಧ್ಯಕ್ಷರಾಗಿದ್ದ ಆಗ್ನೆಸ್ ಅವರು ಸಚ್ಚು ಅವರ ಈ ಮಾನವೀಯ ಸೇವೆಗೆ ಸ್ಪಂದಿಸಿ ಸಹಕಾರ ನೀಡಿದ್ದಾರೆ.
ಕೆಲವು ದಾನಿಗಳು ಸಹಕರಿಸಿದ್ದಾರೆ, ಇನ್ನು ಕೆಲವರು ಭರವಸೆ ನೀಡಿದ್ದಾರೆ.ಆದರೆ ಈ ವರ್ಷದ ಮಳೆಗಾಲಕ್ಕೆ ಮುನ್ನ ಆ ಸೂರು ಪೂರ್ಣಗೊಳ್ಳಲೇಬೇಕು, ಈ ವರ್ಷದ ಮಳೆಗಾಲದಲ್ಲಿ ಆ ಕುಟುಂಬ ಹೊಸಮನೆಯಲ್ಲಿ ವಾಸವಾಗಲೇಬೇಕೆಂಬ ನಿಟ್ಟಿನಲ್ಲಿ ಮನೆ ಕೆಲಸಕ್ಕಿಳಿದ ಸಚ್ಚು ಅದನ್ನು ಪೂರ್ಷಗೊಳಿಸಿ ಆ ಬಡ ಕುಟುಂಬದ ಬದುಕಿಗೆ ಹೊಸಬೆಳಕು ತೋರಿಸಿದ್ದಾರೆ.
ಇನ್ನೂ ಕೆಲವು ವ್ಯವಸ್ಥೆಗಳಾಗಬೇಕಿದೆ.ಕೆಲವು ವಸ್ತುಗಳು ಆ ಮನೆ ಸೇರಬೇಕಿದೆ.ಅದೇನೆಲ್ಲಾ ಆಗಬೇಕೆನ್ನುವುದನ್ನು ದಾನಿಗಳಿದ್ದರೆ ನೇರವಾಗಿ ಭೇಟಿ ಕೊಟ್ಟು ಪರಿಶೀಲಿಸಬಹುದು ಅಥವಾ ಸಚ್ಚು ( 9845617518) ಅವರನ್ನು ಸಂಪರ್ಕಿಸಬಹುದು.
ಸಚ್ಚು ಅವರ ಈ ಮಾನವೀಯ ಸೇವೆಗೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿದೆ.ಅವರಿಗೊಂದು ದೊಡ್ಡ ಸಲಾಂ.
– ಅಶ್ರಫ್ ವಾಲ್ಪಾಡಿ






