ಇದು ಬೆದ್ರದ ತಾಲೂಕು ಆಡಳಿತ ಸೌಧದಲ್ಲಿ ಇಂದು ಹೊರಬಿದ್ದ ಸತ್ಯ. ಪಾಪ, ಕೋಟ್ಯಾನ್ ಅವರು ಮೂಡುಬಿದಿರೆಯಲ್ಲಿ ಒಂದು ಸುಂದರವಾದ ತಾಲೂಕು ಆಡಳಿತ ಸೌಧವನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಹಿಂದಿನವರೆಲ್ಲಾ ಪ್ರಯತ್ನ ಪಟ್ಟಿದ್ದರು.ಆದರೆ ಉಮಾನಾಥ ಕೋಟ್ಯಾನ್ ಅವರು ಶಾಸಕರಾಗಿ ಆಯ್ಕೆಯಾದ ಮೊದಲ ಅವಧಿಯಲ್ಲೇ ಅದನ್ನು ಲೋಕಾರ್ಪಣೆಗೊಳಿಸಿದ್ದರು.ಅದು ಬೆದ್ರಕ್ಕೆ ಕೊಟ್ಟ ಅತ್ಯಂತ ದೊಡ್ಡ ಕೊಡುಗೆ.
ಕರೆಂಟ್ ಹೋದರೆ ಇರಲಿ ಅಂತ ಉದ್ಘಾಟನೆಯ ಸಂದರ್ಭದಲ್ಲಿ ಒಂದು ಪೊಸಾ ಜನರೇಟರನ್ನೂ ಕೊಡಿಸಿದ್ದರು.ಅಪರೂಪಕ್ಕೊಮ್ಮೆ ಕರೆಂಟ್ ಹೋದಾಗ ಅದು ಪ್ರಯೋಜನಕ್ಕೆ ಬಂದಿದೆ.
ಇವತ್ತು ಮಂಗಳವಾರ. ಬೆದ್ರದಲ್ಲಿ ಕರೆಂಟ್ ಇರುವುದಿಲ್ಲ ಅಂತ ಹೆಚ್ಚಿನವರಿಗೆ ಗೊತ್ತಿದೆ.ಅದೂ ಅಲ್ಲದೆ ಎಸ್.ಐ.ಆರ್ ಬಗ್ಗೆ ಇವತ್ತು ಮೀಟಿಂಗ್ ಇಟ್ಟುಕೊಳ್ಳಲಾಗಿದೆ. ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ತಾಲೂಕು ಸೌಧಕ್ಕೆ ಬೇರೆ ಬೇರೆ ಕೆಲಸಗಳಿಗೆ ಜನರು ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ- ಇವತ್ತೂ ಬಂದಿದ್ದಾರೆ. ಆದರೆ ,ಬಂದವರಿಗೆಲ್ಲಾ ಒಂದೇ ಉತ್ತರ- ಕರೆಂಟಿಲ್ಲ…!
ಕರೆಂಟ್ ಹೋದರೇನಾಯ್ತು..ಜನರೇಟರ್ ಸ್ಟಾರ್ಟ್ ಮಾಡುವ ಎಂದು ಅದರ ಪಕ್ಕಕ್ಕೆ ಹೋದರೆ ಅದು ಸ್ಟಾರ್ಟೇ ಆಗುವುದಿಲ್ಲ..
ಅದಕ್ಕೆ ಏನಾದರೂ ಕುಡಿಯಲು ಕೊಟ್ಟರೆ ಅಲ್ವಾ ….ಅದು ಜೀವ ಇದೆ ಅಂತ ತೋರಿಸುವುದು?
ವಿಷಯ ಏನೆಂದರೆ ಅದಕ್ಕೆ ಡೀಸೆಲ್ಲೇ ಹಾಕಲಾಗಿಲ್ಲ.ಡೀಸೆಲ್ ಇಲ್ಲದೆ ಸ್ಟಾರ್ಟ್ ಆಗುತ್ತಾ ?
ಇದನ್ನೆಲ್ಲಾ ಜವಾಬ್ದಾರಿಯುತ ಸ್ಥಾನದಲ್ಲಿ ಕೂತವರು ಮರೆತಂತಿದ್ದಾರೆ. ಬಂದ ಜನರೆಲ್ಲಾ ವಾಪಾಸು ಹೋಗುವ ಸ್ಥಿತಿ ನಿರ್ಮಾಣವಾಗಿತ್ತು.
ಕರೆಂಟ್ ಇಲ್ಲದೆ ಮಹಿಳೆಯರಿಬ್ಬರು ಲಿಫ್ಟಲ್ಲಿ ಸಿಕ್ಕಾಕಿಕೊಂಡ ಪ್ರಸಂಗವೂ ನಡೆದಿದೆ.
ಅಷ್ಟೊಂದು ಖರ್ಚು ಮಾಡಿ ಸುಂದರವಾದ ಬಿಲ್ಡಿಂಗ್ ನಿರ್ಮಾಣ ಮಾಡಿ ಅಲ್ಲಿನ ಜನರೇಟರ್ ವ್ಯವಸ್ಥೆ ಸರಿ ಇಲ್ಲದಿದ್ದರೆ ಹೇಗೆ? ಜನರಿಗೆ ಸೇವೆ ನೀಡಬೇಕಾದ ಅಧಿಕಾರಿಗಳು ಕನಿಷ್ಠ ಡೀಸೆಲ್ ಹಾಕಲು ಮರೆತರೆ ಹೇಗೆ ? ಜನರು ಸೇವೆಯಿಂದ ವಂಚಿತರಾಗಲು ಇಲ್ಲಿನ ಅಧಿಕಾರಿವರ್ಗದವರೇ ಕಾರಣವೆಂದು ತಾ.ಪಂ.ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ ಅವರು ಆರೋಪಿಸಿದ್ದಾರೆ.
ಅಲ್ಲದೆ ಕಟ್ಟಡದ ಸುತ್ತ ಇರುವ ಕಸಕಡ್ಡಿಗಳು, ಶುಚಿತ್ವ ಇಲ್ಲದೆ ಗಲೀಜು ಕಾಣಲೂ ಇಲ್ಲಿನ ಅಧಿಕಾರಿಗಳೇ ಕಾರಣವೆಂದವರು ಆಪಾದಿಸಿದ್ದಾರೆ.






