ಮೊನ್ನೆ ಅಂದರೆ ಸೋಮವಾರ ಸಂಜೆ ಅಳಿಯೂರಿನಲ್ಲೊಂದು ಅಪಘಾತ ಸಂಭವಿಸುತ್ತದೆ.ಅದು ಬೈಕ್ ಮತ್ತು ಆಕ್ಟಿವಾ ಮುಖಾಮುಖಿ ಢಿಕ್ಕಿ.
ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅದರಲ್ಲೋರ್ವನ ಸ್ಥಿತಿ ಗಂಭೀರವಾಗಿದೆ.ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಆತನಿಗಿನ್ನೂ ಎಚ್ಚರ ಬಂದಿಲ್ಲ.
ಗಾಯಗೊಂಡು ಆಸ್ಪತ್ರೆ ಸೇರಿದವರಿಬ್ಬರೂ ಆಸುಪಾಸಿನ ಗ್ರಾಮದವರು. ಒಬ್ಬ ಭಾಸ್ಕರ. ಇನ್ನೊಬ್ಬ ಚೇತನ್.
ಭಾಸ್ಕರ ಮರೋಡಿ ಪರಿಸರದವನಾದರೆ ಚೇತನ್ ಶಿರ್ತಾಡಿ ಸಮೀಪದ ಮಕ್ಕಿಯವನು.ಇಬ್ಬರದ್ದೂ ಬಡ ಕುಟುಂಬ. ಚೇತನ್ ಆಳ್ವಾಸ್ ಬಸ್ಸಿನ ಚಾಲಕನಾದರೆ ಭಾಸ್ಕರ ಸಣ್ಣಪುಟ್ಟ ಕೆಲಸ ಮಾಡುತ್ತಾ ಹೆಂಡತಿ ಮಗು ಮತ್ತು ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದವನಿಂದು ಆಸ್ಪತ್ರೆಯ ಬೆಡ್ಡಲ್ಲಿ ಏನಾಗಿದೆ ಎನ್ನುವ ಅರಿವೇ ಇಲ್ಲದೆ ಅಸಹಾಯಕನಾಗಿ ಮಲಗಿದ್ದಾನೆ.

ಅದೊಂದು ಭೀಕರ ಅಪಘಾತ. ಭಾಸ್ಕರನ ಪತ್ನಿ ಮನೆ ಇರುವುದು ಕೆಲ್ಲಪುತ್ತಿಗೆ ಸಮೀಪದಲ್ಲಿ. ಒಂದು ಮಗುವಿದೆ.ಎರಡನೇ ಮಗುವಿಗಾಗಿ ಗರ್ಭಿಣಿಯಾಗಿದ್ದ ಪತ್ನಿಗೆ ಹೆರಿಗೆ ನೋವು ಉಂಟಾಗಿದೆ ಎಂಬ ಕರೆ ಬಂದಾಗ ತನ್ನ ಆಕ್ಟಿವಾ ಸ್ಟಾರ್ಟ್ ಮಾಡಿಕೊಂಡು ಕೆಲ್ಲಪುತ್ತಿಗೆಯತ್ತ ಹೊರಟಿದ್ದಾನೆ.ಅಳಿಯೂರು ತಲುಪಿದಾಗ ಎದುರಿನಿಂದ ಬಂದ ಬೈಕು ಮತ್ತು ಈತನ ಆಕ್ಟಿವಾ ಪರಸ್ಪರ ಢಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಸ್ಥಳೀಯ ಯುವಕರು ಕೂಡಲೇ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ.
ಅದೇ ದಾರಿಯಲ್ಲಿ ಬರುತ್ತಿದ್ದ ಮೂಡುಬಿದಿರೆಯ ಕೌನ್ಸಿಲರ್ ರಾಜೇಶ್ ನಾಯ್ಕ್ ಮತ್ತು ಶೆಟ್ಟಿ ಬಾರ್ ಮಾಲಕ ಮನೋಹರ ಶೆಟ್ಟಿ ಅವರು ತಮ್ಮ ವಾಹನದಲ್ಲಿ ಅವರನ್ನು ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚೇತನ್ ಕೊಂಚಮಟ್ಟಿಗೆ ಚೇತರಿಸಿಕೊಂಡಿದ್ದು ಭಾಸ್ಕರ ಇನ್ನೂ ಎಚ್ಚರಗೊಂಡಿಲ್ಲ.
ಆತನದ್ದು ಬಡ ಕುಟುಂಬ. ಕ್ರಿಕೆಟ್ ಆಟ ಇದ್ದಾಗಲೆಲ್ಲಾ ಮೈದಾನದತ್ತ ಬರುತ್ತಿದ್ದ ಯುವಕ ಸಾಧು ಸ್ವಭಾವದವನು.ಆ ಪರಿಸರದಲ್ಲೆಲ್ಲಾ ಒಳ್ಳೆಯ ಹುಡುಗ ಎಂಬ ಹೆಸರುಗಳಿಸಿದ್ದವನು.
ತಲೆಗೆ ಗಂಭೀರವಾದ ಗಾಯಗಳಾಗಿರುವುದರಿಂದ ಜೀವನ್ಮರಣದ ಸ್ಥಿತಿಯಲ್ಲಿದ್ದಾನೆ.ಅಸಹಾಯಕ ಕುಟುಂಬವದು.ದೊಡ್ಡ ಮಟ್ಟಿನ ಹಣ ಬೇಕಾಗುವುದರಿಂದ ಆ ಬಡ ಕುಟುಂಬಕ್ಕದು ಒಟ್ಟುಗೂಡಿಸಲು ಅಸಾಧ್ಯ.ಹಾಗಾಗಿ ಅವರೆಲ್ಲಾ ಸಹೃದಯ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ನಿಮ್ಮೆಲ್ಲರ ಒಂದೊಂದು ರೂಪಾಯಿ ಕೂಡಾ ಆ ಬಡವನ ಜೀವ ಉಳಿಸಬಲ್ಲದು. ಆತ ಬದುಕಿ ಬರಲಿ ಎನ್ನುವ ಪ್ರಾರ್ಥನೆಯೊಂದಿಗೆ ಕೈಲಾದ ಸಹಾಯ ಮಾಡಿ ಎಂಬ ಮನವಿ ನಮ್ಮದು.
ಸಹಾಯ ಮಾಡಲಿಚ್ಚಿಸುವವರು ಇಲ್ಲಿ ಕೊಟ್ಟಿರುವ ಖಾತೆ ಸಂಖ್ಯೆಗೆ ಕಳುಹಿಸಿ ಸಹಕರಿಸಿ.






