ಮೂಡುಬಿದಿರೆ: ಬೆಳುವಾಯಿ ಗ್ರಾಮದ ಆಯರಬೆಟ್ಟುವಿನಲ್ಲಿ ಗೃಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ.ಲಿ. ಸಂಸ್ಥೆಯ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ‘ಸ್ವರ್ಣಧಾಮ’ ವಸತಿ ಬಡಾವಣೆಯ ಮುಖ್ಯದ್ವಾರ ಹಾಗೂ ಮಾದರಿ ಮನೆಯ ಶಂಕುಸ್ಥಾಪನೆ ಕಾರ್ಯಕ್ರಮವು ಅಚ೯ಕರಾದ ಡಾ. ಶ್ರೀನಿವಾಸ ಭಟ್ ಅವರ ಧಾಮಿ೯ಕ ವಿಧಿವಿಧಾನಗಳೊಂದಿಗೆ ಭಾನುವಾರ ನಡೆಯಿತು.
ಹಿರಿಯ ನಾಗರಿಕರಿಗೆ ಸ್ವತಂತ್ರ, ಗೌರವಯುತ ಹಾಗೂ ನೆಮ್ಮದಿಯ ಬದುಕು ಕಲ್ಪಿಸುವ ಉದ್ದೇಶದಿಂದ ನಿಮಾ೯ಣಗೊಳ್ಳುತ್ತಿರುವ ‘ಸ್ವಣ೯ ಧಾಮ’ ಕ್ಕೆ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ವೃದ್ಧಾಶ್ರಮಗಳು ಎಲ್ಲಾ ಕಡೆಗಳಲ್ಲೂ ಇರುತ್ತವೆ. ಅಲ್ಲಿ ಸುಖ, ಸಂತೋಷವಿರುವುದು ಕಡಿಮೆ. ಆದರೆ ವಕೀಲ ಬಾಲಕೃಷ್ಣ ಶರ್ಮ ಅವರು ತಮ್ಮ ನಾಲ್ವರು ಸಹಭಾಗಿಗಳೊಂದಿಗೆ ರೂಪಿಸಿರುವ ‘ಸ್ವರ್ಣಧಾಮ’ ವಸತಿ ಯೋಜನೆಯು ವಿಭಿನ್ನವಾಗಿದೆ ಇಲ್ಲಿ ಹಿರಿಯ ನಾಗರಿಕರಿಗೆ ಪ್ರೀತಿ, ಗೌರವ, ಸಂತಸ, ನೆಮ್ಮದಿ ಹಾಗೂ ಸ್ವತಂತ್ರ ಬದುಕಿನ ಅವಕಾಶವನ್ನು ಕಲ್ಪಿಸಲು ಹೊರಟಿದ್ದಾರೆ.
ಹಿರಿಯರ ಆರೋಗ್ಯ, ಆಹಾರ, ವಸತಿ ಹಾಗೂ ಆಯುಷ್ಯವರ್ಧನೆಗೆ ಪೂರಕವಾದ ಸೌಲಭ್ಯಗಳನ್ನು ಒದಗಿಸುವ ಚಿಂತನೆ ಯೋಜನೆಯಲ್ಲಿರುವುದು ಶ್ಲಾಘನೀಯ ಎಂದರು.
ಗೃಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ.ಲಿ.ಯ ಗೌರವ ಸಲಹೆಗಾರ ನೆರೋಳು ಈಶ್ವರ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರುವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ಮುಖ್ಯ ಅತಿಥಿಯಾಗಿ ಮಾತನಾಡಿ, ಸ್ವರ್ಣಧಾಮದಲ್ಲಿ ಸಮಾನ ವಯೋಮಾನದ ಹಿರಿಯರು ಒಟ್ಟಿಗೆ ವಾಸಿಸುವುದರಿಂದ ತಮ್ಮ ಸುಖ-ದುಃಖಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಒಂದೇ ವಯೋಮಾನದವರ ನಡುವೆ ಪರಸ್ಪರ ಭಾವನೆಗಳು, ಸಮಸ್ಯೆಗಳು ಹಾಗೂ ಅನುಭವಗಳನ್ನು ಹಂಚಿಕೊಳ್ಳುವುದರಿಂದ ಮಾನಸಿಕ ನೆಮ್ಮದಿಯೂ ದೊರೆಯಲಿದೆ ಎಂದ ಅವರು
ಸ್ವರ್ಣಧಾಮದಲ್ಲಿ ಹಿರಿಯ ನಾಗರಿಕರಿಗೆ ನೆಮ್ಮದಿಯ ಜೀವನದ ಜೊತೆಗೆ ಅವರ ಅಂತಿಮ ದಿನಗಳಲ್ಲಿಯೂ ಗೌರವಯುತ ವ್ಯವಸ್ಥೆ ಇರಬೇಕು. ಹಿರಿಯ ಜೀವಗಳು ನಿಧನರಾದ ಸಂದರ್ಭದಲ್ಲಿ ಮಕ್ಕಳು ವಿದೇಶ ಅಥವಾ ದೂರದ ಊರುಗಳಿಂದ ವಿಡಿಯೋ ಕಾಲ್ ಮೂಲಕ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಬದಲು ಖುದ್ದಾಗಿ ಆಗಮಿಸಿ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸುವುದನ್ನು ಕಡ್ಡಾಯಗೊಳಿಸುವ ನಿಯಮ ರೂಪಿಸಬೇಕು ಎಂದು ಸಲಹೆ ನೀಡಿದರು.
ಗೃಹಲಕ್ಷ್ಮೀ ಹೌಸಿಂಗ್ ಸೊಲ್ಯೂಷನ್ಸ್ ಪ್ರೈ.ಲಿ.ಯ ಅಧ್ಯಕ್ಷ, ವಕೀಲ ಬಾಲಕೃಷ್ಣ ಶರ್ಮ ನೆರೋಳು ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು 12 ವರ್ಷಗಳ ಹಿಂದೆ ಸ್ವರ್ಣಭೂಮಿ ಪ್ರಾಪರ್ಟೀಸ್ ಪಾಲುದಾರರಾಗಿ 10 ಎಕರೆ ಭೂಮಿಯನ್ನು ಖರೀದಿಸಲಾಗಿತ್ತು. ಆರಂಭದಲ್ಲಿ ಲೇಔಟ್ ನಿರ್ಮಿಸುವ ಉದ್ದೇಶವಿದ್ದರೂ ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಬಳಿಕ ಹಿರಿಯ ನಾಗರಿಕರ ವಸತಿ ಧಾಮ ನಿರ್ಮಿಸುವ ಆಲೋಚನೆ ಮೂಡಿದ್ದು, ಪಾಲುದಾರರ ಚರ್ಚೆಯ ಬಳಿಕ ಸ್ವರ್ಣಧಾಮ ಯೋಜನೆ ರೂಪಿಸಲಾಯಿತು ಎಂದು ತಿಳಿಸಿದರು.
ಇಂದಿನ ದಿನಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳುವುದರಿಂದ ಅನೇಕ ಹಿರಿಯರು ಒಂಟಿಯಾಗಿ ಜೀವನ ನಡೆಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳು ಎದುರಾದಾಗ ಅಡುಗೆ, ಮನೆ ನಿರ್ವಹಣೆ ಹಾಗೂ ಆರೈಕೆಗೆ ಸಹಾಯಕರ ಅಗತ್ಯವಿರುತ್ತದೆ. ನಗರ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಇಂತಹ ಸೌಲಭ್ಯಗಳನ್ನು ಹೊಂದುವುದು ದುಬಾರಿಯಾಗಿರುವುದರಿಂದ ಎಲ್ಲ ವ್ಯವಸ್ಥೆಗಳನ್ನು ಒಂದೇ ಆವರಣದಲ್ಲಿ ಒದಗಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದರು.
10 ಎಕರೆ ಪ್ರದೇಶದಲ್ಲಿ ಒಟ್ಟು 108 ಸ್ವತಂತ್ರ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಮನೆಗಳ ಮಧ್ಯಭಾಗದಲ್ಲಿ ಸುಸಜ್ಜಿತ ಕ್ಲಬ್ಹೌಸ್ ಇರಲಿದೆ. ಇಲ್ಲಿ ಸಾಮಾನ್ಯ ಅಡುಗೆಮನೆ, ಭೋಜನಾಲಯ, ವೈದ್ಯರ ಕ್ಲಿನಿಕ್, ಲಾಂಡ್ರಿ, ದಿನಬಳಕೆಯ ವಸ್ತುಗಳಿಗಾಗಿ ಡಿಪಾರ್ಟ್ಮೆಂಟಲ್ ಸ್ಟೋರ್, ಆಯುರ್ವೇದ ಸ್ಪಾ, ಓದುವ ಕೋಣೆ, ಒಳಾಂಗಣ ಮತ್ತು ಹೊರಾಂಗಣ ಆಟಗಳು ಹಾಗೂ ಧ್ಯಾನ ಮಂದಿರದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮನೆ ಖರೀದಿಸುವವರಿಗೆ ಕ್ಲಬ್ಹೌಸ್ ಸದಸ್ಯತ್ವವೂ ದೊರೆಯಲಿದೆ.
ಅಗತ್ಯವಿರುವವರಿಗೆ ಮನೆಗೆಲಸದ ಸಹಾಯಕರು, ಹೌಸ್ಕೀಪಿಂಗ್ ಹಾಗೂ ನರ್ಸಿಂಗ್ ಸೌಲಭ್ಯ ಒದಗಿಸಲಾಗುವುದು. ವಾರಕ್ಕೆ ಎರಡು ಬಾರಿ ವೈದ್ಯರಿಂದ ಆರೋಗ್ಯ ತಪಾಸಣೆ, ಉದ್ಯಾನವನ, ವಾಕಿಂಗ್ ಟ್ರ್ಯಾಕ್ ಹಾಗೂ 24 ಗಂಟೆಗಳ ಭದ್ರತೆಯ ವ್ಯವಸ್ಥೆಯೂ ಇರಲಿದೆ. ಇಡೀ ಪ್ರದೇಶಕ್ಕೆ ಕಂಪೌಂಡ್ ವಾಲ್ ನಿರ್ಮಿಸಲಾಗಿದ್ದು, ಹಿರಿಯರು ಸುಲಭವಾಗಿ ಓಡಾಡಲು ಅನುಕೂಲವಾಗುವಂತೆ ಭೂಮಿಯನ್ನು ಸಮತಟ್ಟು ಮಾಡಿ ಅಭಿವೃದ್ಧಿಪಡಿಸಲಾಗಿದೆ ಎಂದು ವಿವರಿಸಿದರು.
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸುಮಾರು 20 ವರ್ಷಗಳ ಅನುಭವ ಹೊಂದಿರುವ ಪಾಲುದಾರರು, ಮನೆ ನಿರ್ಮಾಣ ಆರಂಭಿಸುವ ಮೊದಲೇ ಗ್ರಾಹಕರ ವಿಶ್ವಾಸದಿಂದ 30 ಮನೆಗಳು ಬುಕ್ಕಿಂಗ್ ಆಗಿರುವುದು ಯೋಜನೆಗೆ ದೊರೆತ ಬೆಂಬಲಕ್ಕೆ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮುಂದಿನ ಒಂದು ಅಥವಾ ಒಂದೂವರೆ ವರ್ಷದಲ್ಲಿ ಉಳಿದ ಮನೆಗಳ ಮಾರಾಟ ಹಾಗೂ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಯೋಜನೆಯನ್ನು ಗ್ರಾಹಕರಿಗೆ ಹಸ್ತಾಂತರಿಸುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಯೋಜನೆಗೆ ಸಹಕಾರ ನೀಡಿರುವ ನಾಲ್ವರು ಪಾಲುದಾರರು ಹಾಗೂ ಈಗಾಗಲೇ ಮನೆಗಳನ್ನು ಬುಕ್ ಮಾಡಿರುವ 30 ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದ ರು.
ಬೆಳುವಾಯಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್, ಬೆಳುವಾಯಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ರಾಘು ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು. ಯೋಜನೆಯ ಪಾಲುದಾರರಾದ ಎ.ಸಿ. ಶೆಟ್ಟಿ, ಪ್ರವೀಣ್ ಶೆಟ್ಟಿ, ರಮೇಶ್ ಪ್ರಭು, ಬಾಲಕೃಷ್ಣ ಶರ್ಮ ಅವರ ತಾಯಿ ಕೃಷ್ಣ ಕುಮಾರಿ, ಪತ್ನಿ ಭಾಗ್ಯ ಶರ್ಮ ಹಾಗೂ ಪುತ್ರ ಭವೇಶ ಉಪಸ್ಥಿತರಿದ್ದರು.
ಅಭಿಷೇಕ್ ಕನಪಾ೯ಡಿ ವಂದೇ ಮಾತರಂ ಗೀತೆ ಹಾಡಿದರು. ನಟರಾಜ್ ಕಾರ್ಯಕ್ರಮ ನಿರೂಪಿಸಿದರು. ಪಾಲುದಾರರಲ್ಲಿ ಓವ೯ರಾಗಿರುವ ಅರಂತಾಡಿಗುತ್ತು ಚಂದ್ರಹಾಸ ಶೆಟ್ಟಿ ವಂದಿಸಿದರು.



