ಮೂಡುಬಿದಿರೆ:ಭಗವಂತನ ಕೆಲಸಗಳಿಗೆ ಇಂತದ್ದೆ ಮುಹೂರ್ತ ಸೂಕ್ತ ಎಂದು ಗಣಿತ ಲೆಕ್ಕದಂತೆ ದಿನ ನಿಗದಿಪಡಿಸುವುದಕ್ಕಿಂತಲೂ ಪರಿಶುದ್ಧ ಭಕ್ತಿಯಿಂದ ದೇವರನ್ನು ಆರಾಧಿಸುವುದು ಮುಖ್ಯ ಎಂದು ಆಳ್ವಾಸ್ ಕಾಲೇಜಿನ ಸಂಸ್ಕೃತ ಉಪನ್ಯಾಸಕ ವಿನಾಯಕ ಭಟ್ ಗಾಳಿಮನೆ ಹೇಳಿದರು.
ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಲ್ಲಬೆಟ್ಟು ವತಿಯಿಂದ ಕಲ್ಲಬೆಟ್ಟು ವಟವೃಕ್ಷದ ಬಳಿ ಗುರುವಾರ ನಡೆದ ೫೭ ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಹೃದಯವನ್ನು ನೋಡುವ ಭಾವವೆ ದೇವ ಎಂದು ನಾವು ನಂಬಿಕೊAಡು ಬಂದವರು. ಮನೆಯೆಂಬ ಪಾಠ ಶಾಲೆಯಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವ ಕೆಲಸ ಮೊದಲು ಆಗಬೇಕು. ನಾವು ಧರಿಸುವ ಬಟ್ಟೆ, ತೊಡುವ ಬಳೆ, ಸರಗಳ ಔಚಿತ್ಯ ಮಕ್ಕಳಿಗೆ ಗೊತ್ತಾಗಬೇಕು. ಸಾರ್ವಜನಿಕ ಸತ್ಯನಾರಾಯಣ ಪೂಜೆಯು ನಮ್ಮ ಆರಾಧನೆ, ಪರಂಪರೆಯ ಮಹತ್ವವನ್ನು ತಿಳಿಸಿಕೊಡುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಡುಬಿದಿರೆ ಪುರಸಭೆ ಮುಖ್ಯಾಧಿಕಾರಿ ಜಯಶ್ರೀ ಕೇಶವ ಧಾರ್ಮಿಕ ಆಚರಣೆಗಳಿಂದ ಜನರಲ್ಲಿ ಆಧ್ಯಾತ್ಮಿಕ ಚಿಂತನೆಗಳು ಬೆಳೆಯುತ್ತದೆ. ಸಾಮರಸ್ಯದ ಬದುಕಿಗೆ ಪ್ರೇರಣೆಯಾಗುವುದು ಎಂದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಹಾಗೂ ಸಾರ್ವಜನಿಕ ಪೂಜಾ ಸಮಿತಿಯ ಹಿರಿಯ ಸದಸ್ಯ ನೋಣಯ್ಯ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಹೊಸಂಗಡಿ ಅರಮನೆಯ ಸುಕುಮಾರ ಶೆಟ್ಟಿ, ಸಮಿತಿ ಖಜಾಂಜಿ ಸುಂದರ ಶೆಟ್ಟಿ ಉಪಸ್ಥಿತರಿದ್ದರು.
ಸಾರ್ವಜನಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ರಮೇಶ್ಚಂದ್ರ ವರದಿ ವಾಚಿಸಿದರು. ಪ್ರದೀಪ್ ರೈ ನಿರೂಪಿಸಿದರು. ದಿಲೀಪ್ ಕುಮಾರ್ ಶೆಟ್ಟಿ ಅವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಪಾಪಣ್ಣ ವಿಜಯ ಗುಣಸುಂದರಿ’ ತುಳು ಯಕ್ಷಗಾನ ಪ್ರದರ್ಶನಗೊಂಡಿತು.
