ಸದ್ಯಕ್ಕೆ ತುಳುನಾಡಿನಾದ್ಯಂತ ಬರೀ ದಸ್ಕತ್ ಸಿನಿಮಾದ ಸುದ್ದಿಯೇ ಚಾಲ್ತಿಯಲ್ಲಿದೆ. ತನ್ನ ವಿಭಿನ್ನ ಕಥೆ, ಛಾಯಾಗ್ರಹಣ, ಮ್ಯೂಸಿಕ್ ಹೊಂದಿರುವ ನ್ಯಾಚುರಲ್ ಶೈಲಿಯಲ್ಲಿ ಸಿನಿ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಪ್ರೇಕ್ಷಕರು ಹೇಳುವಂತೆ ಸಿನಿಮಾದಲ್ಲಿ ದೀಕ್ಷಿತ್ ಅಂಡಿಂಜೆಯವರ ಪಾತ್ರ ನೋಡಿಯೇ ತೀರಬೇಕು. ಸಿನಿಮಾ ವೀಕ್ಷಿಸಿದ ಹೆಚ್ಚಿನ ವೀಕ್ಷಕರು ಸಿನಿಮಾ ಮುಗಿದು ಹೊರಬರುವ ಸಮಯ ಶೇಖರನನ್ನು ಕಾಣಬಯಸುವುದು ದೀಕ್ಷಿತ್ ಅವರು ಪಾತ್ರಕ್ಕೆ ತುಂಬಿದ ಜೀವಂತಿಕೆಯನ್ನು ಗುರುತಿಸುತ್ತದೆ. ಪಾತ್ರದ ತಯಾರಿಗಾಗಿ ಬಹಳಷ್ಟು ಶ್ರಮ ಪಟ್ಟಿರುವುದು ಅವರ ಮಾತಿನಂತೆ ತೆರೆಯ ಮೇಲೆ ಕಾಣಿಸುತ್ತದೆ. ಶೇಖರನ ಪಾತ್ರಕ್ಕೆ ಬೇಕಾದಂತೆ ಸ್ವಲ್ಪ ಮೈಬಣ್ಣ ಕಪ್ಪಾಗಿಸಲು ಚಿತ್ರೀಕರಣಕ್ಕೂ ವಾರದ ಮೊದಲೇ ಬಿಸಿಲಿನಲ್ಲಿ ಮಲಗಿ ಮೈಬಣ್ಣ ಕಪ್ಪಾಗಿಸಿದ್ದರು. ತೂಕ ಹೆಚ್ಚಿಸಿ ಪಾತ್ರಕ್ಕೆ ಬೇಕಾದಂತೆ ಜೀವನಶೈಲಿ- ಮಾತಿನ ಶೈಲಿ ಬದಲಾಯಿಸಿಕೊಂಡು, ಎಲೆ ಅಡಿಕೆ ತಿನ್ನಲು ಆರಂಭಿಸಿ ಹಲ್ಲಿನ ಬಣ್ಣ ಕೆಂಪುಗೊಂಡಿದ್ದು ಆ ಪಾತ್ರದ ಮೇಲೆ ನಡೆಸಿದ ತಯಾರಿ ಮೆಚ್ಚುವಂತೆ ಮಾಡುತ್ತದೆ. ಇಂತಹ ತಯಾರಿ ಒಬ್ಬ ನಟನಲ್ಲಿ ಇರಬೇಕಾದ ಮುಖ್ಯ ಲಕ್ಷಣ. ಶೇಖರನ ಪಾತ್ರ ನಮ್ಮೊಳಗಿನ ಪ್ರತಿರೋಧದ ದನಿಯಂತೆ ತೆರೆಯ ಮೇಲೆ ಕಂಡು ದೀಕ್ಷಿತ್ ನೂರಕ್ಕೆ ನೂರು ನ್ಯಾಯ ಒದಗಿಸಿದ್ದಾರೆ. ದೀಕ್ಷಿತ್ ಪೂಜಾರಿ ಅಂಡಿಂಜೆ ಚಿತ್ರರಂಗಕ್ಕೆ ಹೊಸ ನಾಯಕ ನಟನ ಜೊತೆಗೆ ಒಬ್ಬ ಅದ್ಭುತ ನಟನಾಗಿ ಸ್ಥಾನ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ.


ಚಿತ್ರತಂಡ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದೆ ಎನ್ನುವುದು ತೆರೆಯ ಮೇಲೆ ಕಾಣಿಸುತ್ತದೆ. ಇಂತಹ ಇನ್ನಷ್ಟು ಪ್ರಯತ್ನಗಳು ಮುಂದುವರಿದರೆ ಬೇರೆ ಬೇರೆ ವಿಭಾಗಳ ಸಿನಿಮಾಗಳನ್ನು ಅನುಭವಿಸಬಹುದು ಸಿನಿ ಪ್ರೇಕ್ಷಕರು.
