Latest News

ಬೆದ್ರದಲ್ಲಿ ಗವರ್ನ್ಮೆಂಟ್ ಡಾಕ್ಟ್ರಿಲ್ಲ, ತಾಲೂಕಿಗಿದು ಶೇಮ್! *ಪುರಸಭಾಧಿವೇಶನದಲ್ಲಿ ಸದಸ್ಯರ ಆರೋಪ

Picture of Namma Bedra

Namma Bedra

Bureau Report

ಮೂಡುಬಿದಿರೆ ತಾಲೂಕು ಕೇಂದ್ರವಾದರೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೂರ್ಣಕಾಲಿಕ ಡಾಕ್ಟ್ರಿಲ್ಲ.ದಂತ ವೈದ್ಯರೇ ಸದ್ಯಕ್ಕೆ ಮೈನ್.ಅವರಿಂದ ಎಲ್ಲವೂ ಸಾಧ್ಯವಿಲ್ಲ.ಬಡ ಜನರಿಗೆ ಸೇವೆ ಒದಗಿಸಬೇಕಾದ ಈ ಗವರ್ನಮೆಂಟ್ ಆಸ್ಪತ್ರೆಯಲ್ಲಿ ಪೂರ್ಣಕಾಲಿಕ ವೈದ್ಯರಿಲ್ಲದಿರುವುದು ನಮಗೆ ಶೇಮ್, ಈಬಗ್ಗೆ ನಿರ್ಣಯ ಕೈಗೊಂಡು ಆರೋಗ್ಯ ಸಚಿವರು,ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಪೂರ್ಣಕಾಲಿಕ ವೈದ್ಯರ ನೇಮಕಾತಿಗೆ ಆಗ್ರಹಿಸಬೇಕೆಂದು ಪುರಸಭಾ ಸದಸ್ಯರು ಇಂದು ನಡೆದ ಪುರಸಭಾಧಿವೇಶನದಲ್ಲಿ ಆಗ್ರಹಿಸಿದ್ದಾರೆ.
ಪುರಸಭಾ ಸದಸ್ಯ ಕೊರಗಪ್ಪ ಅವರು ಈ ವಿಷಯವನ್ನು ಪ್ರಸ್ತಾಪಿಸಿದಾಗ ಇತರ ಸದಸ್ಯರೂ ಧ್ವನಿಗೂಡಿಸಿದರು.
ಒಂದು ಪೋಸ್ಟ್ ಮಾರ್ಟಮ್ ಮಾಡಬೇಕಾದರೂ ಪಕ್ಕದ ಆಸ್ಪತ್ರೆಗಳ ವೈದ್ಯರನ್ನು ಕಾಯಬೇಕು,ಬೆಳಿಗ್ಗೆ ಶವವನ್ನು ಶವಾಗಾರದಲ್ಲಿಟ್ಟು ರಾತ್ರಿವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪುರಂದರ ದೇವಾಡಿಗ ಅವರು ಹೇಳಿದರೆ,ಹಿಂದೆ ಶಶಿಕಲಾ ಮೇಡಂ ಇರುವಾಗ ಬಡಜನರಿಗೆ ಒಳ್ಳೆಯ ಸೇವೆ ಸಿಗುತ್ತಿತ್ತು, ಆಬಳಿಕ ಯಾವ ಪೂರ್ಣಕಾಲಿಕ ವೈದ್ಯರೂ ಬರಲಿಲ್ಲ, ಬಂದರೂ ಉನ್ನತ ವ್ಯಾಸಂಗಕ್ಕಾಗಿ ಹೋಗಿದ್ದಾರೆ,ಹೀಗಾದರೆ ಬಡರೋಗಿಗಳು ಎಲ್ಲಿಗೆ ಹೋಗಬೇಕು ? ಎಂದು ಸುರೇಶ್ ಕೋಟ್ಯಾನ್ ಪ್ರಶ್ನಿಸಿದರು.


ಸದಸ್ಯರ ಆಗ್ರಹದಂತೆ ಆರೋಗ್ಯ ಸಚಿವರು,ಜಿಲ್ಲಾ ಆರೋಗ್ಯಾಧಿಕಾರಿ,ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯುವುದಾಗಿ ನಿರ್ಣಯಿಸಲಾಯಿತು.
ಈ ಹಿಂದಿನ ಸಭೆಯಲ್ಲಿ ಸ್ವಲ್ಪ ಸದ್ದಾದಂತೆಯೇ ಈ ಸಭೆಯಲ್ಲೂ ಮೆಸ್ಕಾಂ ಬಳಿಯ ಮೀನು ಸ್ಟಾಲ್ ಬಗ್ಗೆ ಚರ್ಚೆಯಾಗಿ ಮತ್ತೊಮ್ಮೆ ಅವರಲ್ಲಿ ದಾಖಲೆ ಪಡೆದುಕೊಳ್ಳುವುದೆಂದು ತೀರ್ಮಾನಿಸಲಾಯಿತು.
ಮಾರ್ಕೆಟ್ ಬಳಿ ಇರುವ ಫಾಸ್ಟ್ ಫುಡ್ ಸ್ಟಾಲ್ ಗಳನ್ನು ಇನ್ನೂ ಸ್ಥಳಾಂತರಗೊಳಿಸಿಲ್ಲವೇಕೆ? ಅವರ ಬಗ್ಗೆ ಅಷ್ಟೊಂದು ಕನಿಕರವೇಕೆ ? ಸಾರ್ವಜನಿಕರಿಗೆ,ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ, ನಿತ್ಯ ಜಗಳವೂ ಆಗುತ್ತಿದೆ ಎಂದು ಹೇಳಿದರೂ ಆ ಸ್ಟಾಲ್ ಗಳನ್ನು ಸ್ಥಳಾಂತರಗೊಳಿಸಿಲ್ಲವೇಕೆ ಎಂದು ಪುರಂದರ ದೇವಾಡಿಗ ಅವರು ಪ್ರಶ್ನಿಸಿದಾಗ ‘ಅವರಿಗೆ ಇಂದಿರಾ ಕ್ಯಾಂಟಿನ್ ಬಳಿ ಜಾಗ ಗುರುತಿಸಲಾಗಿದೆ’ ಎಂದು ಮುಖ್ಯಾಧಿಕಾರಿ ಇಂದು ಎಂ.ಅವರು ಹೇಳಿದರು.
ಬೀದಿ ಬದಿ ವ್ಯಾಪಾರಸ್ಥರೆಂದು ಪುರಸಭಾ ಕೆಲ ಸಿಬ್ಬಂದಿಗಳು ಭಾಗಿಯಾಗಿ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಸದಸ್ಯೆ ಶ್ವೇತಾ ಜೈನ್ ಅವರು ಗಂಭೀರವಾದ ಆರೋಪ ಮಾಡಿದಾಗ ‘ ಅಂತವರ ಬಗ್ಗೆ ಮಾಹಿತಿ ಕೊಡಿ, ಕಾನೂನು ಕ್ರಮ ಕೈಗೊಳ್ಳುವುದಾಗಿ’ ಇಂದು ಎಂ.ಅವರು ಹೇಳಿದರು.
ಪುರಸಭಾಧ್ಯಕ್ಷೆ ಜಯಶ್ರೀ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ನಾಗರಾಜ್ ಪೂಜಾರಿ,ಮಾಜಿ ಅಧ್ಯಕ್ಷರಾದ ಪ್ರಸಾದ್ ಕುಮಾರ್, ರೂಪಾ ಸಂತೋಷ್ ಶೆಟ್ಟಿ, ಸದಸ್ಯರಾದ ಪಿ.ಕೆ.ಥೋಮಸ್, ಸುರೇಶ್ ಪ್ರಭು, ಇಕ್ಬಾಲ್ ಕರೀಮ್, ಜೊಸ್ಸಿ ಮಿನೇಜಸ್, ಮಮತಾ ಆನಂದ್, ಶಕುಂತಲಾ ಹರೀಶ್, ಸೌಮ್ಯ ಸಂದೀಪ್, ದಿವ್ಯ ಜಗದೀಶ್, ಸುಜಾತ,ರಾಜೇಶ್ ನಾಯ್ಕ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು