ಮದುವೆಯ ಮುನ್ನಾ ದಿನ ಅಥವಾ ಒಂದೆರಡು ದಿನ ಮುನ್ನ ನಡೆಯುವ ಮೆಹಂದಿ ಕಾರ್ಯಕ್ರಮವೆಂದರೆ ಅಲ್ಲಿ ಗಮ್ಮತ್ತೇ ಗಮ್ಮತ್ತ್. ತುಂಡು-ಗುಂಡು,ಡ್ಯಾನ್ಸ್,ಡಿ.ಜೆ ಹೀಗೆ ಎಲ್ಲವೂ ಇರುತ್ತದೆ.ಈಗ ಕೆಲವೆಡೆ ಬದಲಾವಣೆ ಮಾಡಲಾಗಿದೆ. ಆದರೆ ಇಲ್ಲೊಂದು ವಿಭಿನ್ನ ಕಾರ್ಯಕ್ರಮ ನಡೆದಿದೆ.ಅದು ಗುರುನಮನ ಕಾರ್ಯಕ್ರಮ.
ಅದು ಮೂಡುಬಿದಿರೆ ಸಂಪಿಗೆಯ ‘ನವಸುಮ’ ಮನೆ.ಅಬಕಾರಿ ಇಲಾಖೆಯ ಉಪನಿರೀಕ್ಷಕರಾದ (ಪ್ರಸ್ತುತ ಬಂಟ್ವಾಳದಲ್ಲವರು ಉಪನಿರೀಕ್ಷಕರಾಗಿದ್ದಾರೆ) ರಾಜಾನಾಯ್ಕ್ ಅವರು ಈ ಮನೆಯ ದೊಡ್ಡಣ್ಣ. ಆ ಮನೆಯ ಎಲ್ಲ ಸಹೋದರರು ಕೂಡಾ ನನ್ನ ಆತ್ಮೀಯರು.ಕಳೆದ ಹಲವು ವರ್ಷಗಳಿಂದ ನಾನವರೆಲ್ಲರನ್ನೂ ಬಲ್ಲವನಾಗಿರುವುದರಿಂದ ಎಲ್ಲರಲ್ಲೂ ಆತ್ಮೀಯತೆ.ರಾಜಣ್ಣ ಅವರಲ್ಲಿ ಸ್ವಲ್ಪ ಹೆಚ್ಚು.ನನ್ನ ಕಷ್ಟಕಾಲದಲ್ಲಿ ಧೈರ್ಯತುಂಬಿ ಸಹಕಾರ ಕೊಟ್ಟವರು.
ಅವರ ಸಹೋದರ ಶ್ರೀಕಾಂತ್ ಅವರ ಮೆಹಂದಿ ಕಾರ್ಯಕ್ರಮವಿತ್ತು.ಊರವರು,ಕುಟುಂಬವರ್ಗ ,ಬಂಧು ಮಿತ್ರರು ಅಂತ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು.
ಅದೇ ಕಾರ್ಯಕ್ರಮದಲ್ಲೊಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ರಾಜಣ್ಣ-ಜಯಲಕ್ಷ್ಮಿ ದಂಪತಿಯ ಪುತ್ರಿ ಸಾನ್ವಿ ಆರ್.ನಾಯ್ಕ್ ಬಹುಮುಖ ಪ್ರತಿಭೆ. ಕರಾಟೆ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಸುಮಾರು 59 ಪದಕಗಳನ್ನು ಗಳಿಸಿರುವ ಪ್ರತಿಭಾನ್ವಿತೆ. ಆಕೆಗೆ ತನಗೆ ಶಿಕ್ಷಣ ನೀಡಿದ ಶಿಕ್ಷಕರಿಗೊಂದು ಗೌರವ ಸಲ್ಲಿಸಬೇಕೆಂಬ ಹಂಬಲವಿತ್ತು.ಅದು ಶಾಶ್ವತ ನೆನಪಿನಲ್ಲುಳಿಯಬೇಕೆಂಬ ಆಸೆಯೂ ಇತ್ತು.ಅದಕ್ಕಾಗಿ ತನ್ನ ಚಿಕ್ಕಪ್ಪನ ಮೆಹಂದಿ ಕಾರ್ಯಕ್ರಮದಲ್ಲೇ ‘ಗುರು ನಮನ’ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಗಮನಸೆಳೆದಿದ್ದಾಳೆ.
ತನಗೆ ಪ್ರಾಥಮಿಕ ಶಿಕ್ಷಣ ನೀಡಿದ ಅಮಿತಾ ಟೀಚರ್,ಕರಾಟೆ ಶಿಕ್ಷಣ ನೀಡಿದ ನದೀಮ್, ಸಂಗೀತ ಕಲಿಸಿಕೊಟ್ಟ ಪೂರ್ಣಿಮಾ ಶೆಟ್ಟಿ ಹಾಗೂ ಈಜು ಕಲಿಸಿಕೊಟ್ಟ ಮಧುಕರ್ ಅವರನ್ನು ಆ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಜತೆಗೆ ಆಕೆಯ ಬಗ್ಗೆ ಪತ್ರಿಕಾ ಪ್ರಚಾರ ಕೊಟ್ಟಿದ್ದೇನೆ ಎಂಬ ಕಾರಣಕ್ಕೆ ನನ್ನನ್ನೂ ಸನ್ಮಾನಿಸಿದರು.ಪತ್ರಿಕಾ ಪ್ರಚಾರದ ಮೂಲಕ ಪ್ರತಿಭೆಗಳಿಗೆ ಪ್ರೋತ್ಸಾಹಿಸುವುದು ಪ್ರತಿಯೊಬ್ಬ ಪತ್ರಕರ್ತನ ಕರ್ತವ್ಯ. ಅದನ್ನು ನಾನು ಮಾಡಿದ್ದೇನಷ್ಟೆ. ‘ಮಾಡು ಏರಿದ ಮೇಲೆ ಏಣಿಯನ್ನು ಮರೆತುಬಿಡುವವರೇ ಹೆಚ್ಚು’ ಎಂಬ ಮಾತಿಗೆ ವಿರುದ್ಧ ಎಂಬಂತೆ ಸಾನ್ವಿ ನಾಯ್ಕ್ ಇಲ್ಲಿ ಎಲ್ಲರನ್ನೂ ನೆನಪಿಟ್ಟು ಗೌರವಿಸಿದ್ದಾಳೆ. ಅಂತಹ ಪಾಠವನ್ನು ಆಕೆಯ ಹೆತ್ತವರು ಹೇಳಿಕೊಟ್ಟಿರುವುದರಿಂದಾಗಿ ಈ ಸ್ಮರಣೆಯನ್ನು ಮಾಡಿದ್ದಾಳೆ. ಅವರೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ರಾಜೇಶ್ ಕಡಲಕೆರೆ ಎಂಬ ಮತ್ತೊಂದು ಪ್ರತಿಭೆಯ ಚಂದವಾದ ಕಾರ್ಯಕ್ರಮ ನಿರೂಪಣೆ ಇತ್ತು.
ಸ್ಥಳೀಯರಾದ ದೇವರಾಜ ಭಟ್, ಉತ್ತಮ್ ಕೋಲ್ಡ್ ಡ್ರಿಂಕ್ಸ್ ಮಾಲಕ ಬಾಲಕೃಷ್ಣ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.
ನನಗೆ ಈ ಕಾರ್ಯಕ್ರಮ ಮೆಹಂದಿ ಕಾರ್ಯಕ್ರಮದಂತೆ ಕಂಡಿಲ್ಲ. ಒಂದು ‘ಸರ್ವಧರ್ಮ ಸಮ್ಮಿಲನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನುಭವವಾಯಿತು.
ಅದೇನೇ ಇರಲಿ, ಸಾನ್ವಿ ಮತ್ತಾಕೆಯ ಹೆತ್ತವರು ಹಮ್ಮಿಕೊಂಡ ಈ ‘ಗುರುನಮನ’ ಕಾರ್ಯಕ್ರಮ ಇತರ ಪ್ರತಿಭೆಗಳಿಗೂ ಮಾದರಿಯಾಗಲಿ. ಸಾನ್ವಿ,ರಾಜಣ್ಣ ಮತ್ತವರ ಕುಟುಂಬದವರಿಗೆ ಯಶಸ್ಸನ್ನು ಹಾರೈಸುತ್ತೇನೆ.
-ಅಶ್ರಫ್ ವಾಲ್ಪಾಡಿ
