ಅಲಂಗಾರುಅಲಂಗಾರು ಹೋಲಿ ರೋಜರಿ ಚರ್ಚ್ ನ ಬಾಲಯೇಸುವಿನ ವಾರ್ಷಿಕ ಹಬ್ಬವು ಜ.12 ರಂದು ನಡೆಯಲಿದೆ ಎಂದು ಚರ್ಚ್ ನ ಧರ್ಮಗುರುಗಳಾದ ವಂ.ಸ್ವಾಮಿ.ಮೆಲ್ವಿನ್ ನೊರೊನ್ಹ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
2009 ರಲ್ಲಿ ವಂ.ಗುರುಗಳಾದ ವಿನ್ಸೆಂಟ್ ಡಿಸೋಜರವರು ಈ ಚರ್ಚ್ ನಲ್ಲಿ ಬಾಲಯೇಸುವಿನ ಭಕ್ತಿಯನ್ನು ಪ್ರಾರಂಭಿಸಿದ್ದು ಕಳೆದ 16 ವರ್ಷಗಳಿಂದ ಅನೇಕ ಭಕ್ತರಿಗೆ ಈ ಪುಣ್ಯಕ್ಷೇತ್ರವು ಪವಾಡಗಳ ಕ್ಷೇತ್ರವಾಗಿದೆ, ಅನೇಕ ಭಕ್ತರು ದೂರದೂರದಿಂದ ಬಂದು ಬಾಲಯೇಸುವಿನ ಆಶೀರ್ವಾದ ಪಡೆಯುತ್ತಿದ್ದಾರೆ ಎಂದ ಅವರು ಪ್ರತೀ ವರ್ಷ ಜನವರಿಯಲ್ಲಿ ವಾರ್ಷಿಕ ಹಬ್ಬವನ್ನು ನಡೆಸುತ್ತಾ ಬಂದಿದ್ದು ಈ ವರ್ಷ 12 ನೇ ತಾರೀಕಿನಂದು ನಡೆಯಲಿದೆ ಎಂದರು.
ಈ ಹಬ್ಬಕ್ಕೆ ತಯಾರಿಯಾಗಿ ಒಂಭತ್ತು ದಿನಗಳ ನವೀನ ಪ್ರಾರ್ಥನೆ ಜನವರಿ 3 ರಿಂದ ಆರಂಭಗೊಂಡಿದ್ದು ಪ್ರತಿದಿನ ವಿವಿಧ ಪೂಜೆಗಳು,ಅನ್ನಸಂತರ್ಪಣೆ ನಡೆಯುತ್ತಿದೆ, 11 ನೇ ತಾರೀಕಿನಂದು ಸಂಜೆ 4 ಗಂಟೆಗೆ ಅಲಂಗಾರು ಕಟ್ಟೆಯಿಂದ ಚರ್ಚ್ ವರೆಗೆ ಮೆರವಣಿಗೆ ಮೂಲಕ ಹೊರೆಕಾಣಿಕೆ ತರಲಾಗುವುದು,ಸಂಜೆ 5 ಗಂಟೆಗೆ ದಿವ್ಯ ಬಲಿಪೂಜೆ,ನವೀನ ಪ್ರಾರ್ಥನೆ ಮತ್ತು ಬಾಲಯೇಸುವಿನ ಬೃಹತ್ ಮೆರವಣಿಗೆಯು ಅಲಂಗಾರು ಕಟ್ಟೆಯವರೆಗೆ ಸಾಗಿ ಅಲ್ಲಿ ಬಾಲಯೇಸುವಿನ ಸಂದೇಶವನ್ನು ಸಾರಿ,ಮುಂಬತ್ತಿಯೊಂದಿಗೆ ಈ ಮೆರವಣಿಗೆಯು ಮತ್ತೆ ಚರ್ಚ್ ವರೆಗೆ ಸಾಗಲಿದೆ ಎಂದು ಮಾಹಿತಿ ನೀಡಿದರು.
12 ನೇ ತಾರೀಕಿನಂದು ಹಬ್ಬದ ಸಂಭ್ರಮ.ಬೆಳಿಗ್ಗೆ 10 ಗಂಟೆಗೆ ವಿವಿಧ ರಾಜ್ಯಗಳಿಂದ ಬಂದು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯಲ್ಲಿ ದಿವ್ಯಬಲಿಪೂಜೆ,ಸಂಜೆ 5 ಗಂಟೆಗೆ ಹಬ್ಬದ ಸಂಭ್ರಮದ ಬಲಿಪೂಜೆಯು ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಹೆನ್ರಿ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಮತ್ತು ಅನೇಕ ಧರ್ಮಗುರುಗಳ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದವರು ತಿಳಿಸಿದರು.
1929 ರಲ್ಲಿ ಸ್ಥಾಪನೆಯಾದ ಅಲಂಗಾರು ಹೋಲಿ ರೋಜರಿ ಚರ್ಚ್ ಮತ್ತು ಇದರ ಅಧೀನದಲ್ಲಿರುವ ವಿದ್ಯಾಸಂಸ್ಥೆಗಳ ಪ್ರಗತಿಯ ಬಗ್ಗೆ ಅವರು ಮಾಹಿತಿ ನೀಡಿದರು.
ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಎಡ್ವರ್ಡ್ ಸೆರಾವೊ,ಕಾರ್ಯದರ್ಶಿ ಲಾರೆನ್ಸ್ ಡಿಕುನ್ಹ ಹಾಗೂ 21 ಆಯೋಗಗಳ ಸಂಯೋಜಕರಾದ ರಾಜೇಶ್ ಕಡಲಕೆರೆ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
