ಮೂಡುಬಿದಿರೆ ಸಮಾಜಮಂದಿರದಲ್ಲಿ ಇಂದು ನಡೆದ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಶಾಸಕ ಉಮಾನಾಥ ಕೋಟ್ಯಾನ್ ಭಾಗವಹಿಸಿ ಹಕ್ಕುಪತ್ರ ವಿತರಿಸಿದ್ದಾರೆ.
ಸರಕಾರಿ ಕಾರ್ಯಕ್ರಮವಾಗಿರುವುದರಿಂದ ಶಿಷ್ಟಾಚಾರದಂತೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಭಾಗವಹಿಸಿ ಅಧ್ಯಕ್ಷತೆ ವಹಿಸಿದರು.
ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು ‘ ಹಕ್ಕುಪತ್ರ ನೀಡಲು ನಾನು ದಿನ ನಿಗದಿಪಡಿಸಿದ್ದೆ,ನನ್ನ ಕೈಯಿಂದಲೇ ನೀಡಬೇಕೆಂದಿದ್ದೆ,ಆದರೆ ಕಾಂಗ್ರೆಸಿಗರು ಉಸ್ತುವಾರಿ ಸಚಿವರನ್ನು ಕರೆಸಿ ಅವರ ಕೈಯಿಂದಲೇ ಕೊಡಿಸುವ ನಿರ್ಧಾರ ಮಾಡಿ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿದ್ದಾರೆ,ನನಗೆ ಆದಿನ ಭಾಗವಹಿಸಲು ಸಾಧ್ಯವಿಲ್ಲ’ ಎಂದಿದ್ದರು.ಆದರೆ ಸಭೆ ಆರಂಭವಾಗಿ ಸಚಿವರು ಮಾತನಾಡುತ್ತಿರುವಾಗಲೇ ಶಾಸಕ ಕೋಟ್ಯಾನ್ ಅವರು ಈ ಸಭೆಗೆ ಭಾಗವಹಿಸಿ ಅಚ್ಚರಿ ಮೂಡಿಸುವ ಜೊತೆಗೆ ಮೆಚ್ಚುಗೆಯನ್ನೂ ಗಳಿಸಿದ್ದಾರೆ.


ಸರಕಾರಿ ಕಾರ್ಯಕ್ರಮವಾಗಿರುವುದರಿಂದ ವೇದಿಕೆಯಲ್ಲಿ ಹಾಕಿದ ಫ್ಲೆಕ್ಸ್ ನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ,ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರ ಭಾವಚಿತ್ರವನ್ನು ಹಾಕಬೇಕಿತ್ತು.ಆದರೆ ಇವರ್ಯಾರ ಫೊಟೊ ಕೂಡಾ ಕಂಡು ಬಂದಿಲ್ಲ.ಸಭೆ ಮುಗಿಯುತ್ತಿದ್ದಂತೇ ಕಾಂಗ್ರೆಸ್ ಮುಖಂಡರು ಈ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡದ್ದು ಕಂಡು ಬಂತು.

ಅಂತೂ ಹಕ್ಕುಪತ್ರ ಸಿಗದ ಫಲಾನುಭವಿಗಳಿಗೆ ಹಕ್ಕುಪತ್ರ ಸಿಕ್ಕಿದೆ.ನಾನು ಮಾಡಿದ್ದು,ನಾನು ಮಾಡಿದ್ದು ಎಂದು ಹೇಳುವುದೇ ರಾಜಕೀಯ. ಅದು ಬಿಟ್ಟು ಯಾವ ಪಕ್ಷ ಅಧಿಕಶರದಲ್ಲಿರಲಿ,ಯಾವ ಪಕ್ಷದ ಶಾಸಕನೇ ಇರಲಿ….ಈ ರೀತಿಯಾಗಿ ಒಟ್ಟಾಗಿ ಕೆಲಸ ಮಾಡಿ ಬಡ ಜನರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಿಗುವಂತೆ ಮಾಡಿದರೆ ಬಡವರಿಗೆ ನಿಜವಾಗಿಯೂ ನ್ಯಾಯ ಸಿಕ್ಕಂತಾಗುತ್ತದೆ.
ಮೂಡುಬಿದಿರೆ ತಾಲೂಕಿನಲ್ಲಿ ಹಕ್ಕುಪತ್ರ ಸಿಗದೆ ಅದೆಷ್ಟೋ ವರ್ಷಗಳಿಂದ ಅಲೆದಾಡುವ ಬಡಕುಟುಂಬಗಳು ಇನ್ನೂ ಇದೆ.ಅವರೆಲ್ಲರಿಗೂ ಮುಂದಿನ ದಿನಗಳಲ್ಲಿ ಹಕ್ಕುಪತ್ರ ಸಿಗಬೇಕು. ‘ ನೆಕ್ಸ್ಟ್’ ಅಂತ ಹೇಳಿಕೊಂಡು ಜಾರಿಕೊಳ್ಳುವ ಬದಲು ಮುಂದಿನ ಸೋಮವಾರದಿಂದಲೇ ಅಂತವರ ಸಮ್ಮುಖದಲ್ಲಿ ಸಭೆ ನಡೆಸಿ ಪರಿಹಾರ ಒದಗಿಸುವ ಕೆಲಸವನ್ನು ಜನಪ್ರತಿನಿಧಿಗಳು,ಜನಪ್ರತಿನಿಧಿಗಳಾಗಲು ಬಯಸುವವರು ಮಾಡಬೇಕಿದೆ.
ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಪುರಸಭಾಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ತಹಶಿಲ್ದಾರ್ ಪ್ರದೀಪ್ ಕುರುಡೇಕರ್,ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್,ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಗ್ಯಾರಂಟಿ ಯೋಜನೆ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಕಂದಾಯ ನಿರೀಕ್ಷಕ ಮಂಜುನಾಥ್, ಉಪ ತಹಶಿಲ್ದಾರ್ ಬಾಲಚಂದ್ರ ಮತ್ತಿತರರು ಉಪಸ್ಥಿತರಿದ್ದರು. ನವೀನ್ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.