ಮರಣೋತ್ತರ ಪರೀಕ್ಷೆಗೆ ಸ್ಪಂದಿಸದೆ ಮರಣಗೊಂಡವರ ಕುಟುಂಬದವರನ್ನು ಕಾಯಿಸುವ ಬೆಳುವಾಯಿ ವೈದ್ಯಾಧಿಕಾರಿ ಡಾ.ಭರತ್ ಅವರ ವಿರುದ್ಧ ಲೋಕಾಯುಕ್ತ ಅಧಿಕಾರಿಗಳ ಮುಂದೆ ದೂರು ನೀಡಲಾಗಿದೆ.
ಸಾಮಾಜಿಕ ಕಾರ್ಯಕರ್ತರಾದ ರಾಜೇಶ್ ಕಡಲಕೆರೆ,ಹನೀಫ್ ರಹ್ಮಾನಿಯಾ ಹಾಗೂ ಸತೀಶ್ ಕೋಟ್ಯಾನ್ ಅವರು ಲೋಕಾಯುಕ್ತ ಅಧಿಕಾರಿಗಳಲ್ಲಿ ಬಡ ಜನರಿಗಾಗುತ್ತಿರುವ ಅನ್ಯಾಯದ ವಿರುದ್ಧ ದೂರು ನೀಡಿದ್ದಾರೆ.
ಡಾ.ಭರತ್ ಅವರು ಅವರ ಕಾರ್ಯವ್ಯಾಪ್ತಿಯಲ್ಲಿ ಅಥವಾ ತಾಲೂಕಿನ ಇತರ ಕಡೆಗಳಲ್ಲಿ ಅಪಘಾತಗಳು ಸಂಭವಿಸಿದಾಗ ಅಥವಾ ಮರಣೋತ್ತರ ಪರೀಕ್ಷೆ ಮಾಡಲೇಬೇಕಾದಂತಹ ಸಾವುಗಳು ಸಂಭವಿಸಿದಾಗ ಎಷ್ಟು ಕರೆ ಮಾಡಿದರೂ ಸ್ಪಂದಿಸುವುದಿಲ್ಲ, ಊರಲ್ಲಿದ್ದರೂ ಬೇರೆ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಾರೆ, ತಡವಾಗಿ ಬರುತ್ತಾರೆ, ಇದರಿಂದಾಗಿ ಶವವನ್ನು ಬೆಳಿಗ್ಗೆಯಿಂದ ರಾತ್ರಿವರೆಗೆ ಶವಾಗಾರದಲ್ಲಿ ಇಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರುದಾರರು ದೂರು ನೀಡಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಗಾನಾ ಕುಮಾರಿ,ಇನ್ಸ್ಪೆಕ್ಟರ್ ಅಮಾನುಲ್ಲಾ ಹಾಗೂ ಚಂದ್ರಶೇಖರ್ ಅವರ ಮುಂದೆ ದೂರು ನೀಡಲಾಗಿದೆ.
ಇಂದು ಮೂಡುಬಿದಿರೆಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಲು ಬಂದಿದ್ದ ಲೋಕಾಯುಕ್ತ ಅಧಿಕಾರಿಗಳು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು.
