ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಶಯಾಸ್ಪದ ಸಾವಿನ ಹಿಂದೆ ಅನುಮಾನ ವ್ಯಕ್ತಪಡಿಸಿರುವ ವಿದ್ಯಾರ್ಥಿನಿಯ ಹೆತ್ತವರು ಆಳ್ವಾಸ್ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕರು ಮತ್ತು ಸಿಬ್ಬಂದಿವರ್ಗದವರ ವಿರುದ್ಧ ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.
ಆಳ್ವಾಸ್ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ, ಚಿತ್ರದುರ್ಗ ಮೂಲದ ಪ್ರಸ್ತುತ ಬೆಂಗಳೂರು ದಾಸರಹಳ್ಳಿ ಭುವನೇಶ್ವರ ನಗರದ ನಿವಾಸಿ ಡಿ.ಬಿ.ಸೂಸನ್ನ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಬಸವರಾಜ್ ಎಂಬವರ ಮಗಳಾಗಿರುವ ಸೂಸನ್ನ ಜ.23 ರ ಮಧ್ಯಾಹ್ನ 2-45 ರ ವೇಳೆಗೆ ತಾನು ವಾಸ್ತವ್ಯವಿದ್ದ ಫಲ್ಗುಣಿ ಹಾಸ್ಡೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈ ಬಗ್ಗೆ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರು ಆಕೆಯ ತಂದೆ ಬಸವರಾಜ್ ಅವರಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ.
ಅವರು ‘ ನಾವು ಬೆಂಗಳೂರಿನಿಂದ ಬರುವವರೆಗೆ ಯಾವುದೇ ಕ್ರಮ ಕೈಗೊಳ್ಳುವುದು ಬೇಡ’ ಎಂದು ತಿಳಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಹಾಸ್ಟೆಲ್ ನ ಕೊಠಡಿಗೆ ಬೀಗ ಹಾಕಲಾಗಿತ್ತು.ಮರುದಿನ ಅಂದರೆ ಜ.24 ರಂದು ಬೆಳಿಗ್ಗೆ 11-15 ರ ವೇಳೆಗೆ ಸೂಸನ್ನಳ ಹೆತ್ತವರು ಬಂದಿದ್ದಾರೆ.ಮೃತಳ ತಂದೆ ಬಸವರಾಜ್ ಅವರು ‘ತನ್ನ ಮಗಳ ಸಾವಿನ ಹಿಂದೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ಸಿಬ್ಬಂದಿವರ್ಗದವರ ಮೇಲೆ ಅನುಮಾನವಿದೆ, ತನಿಖೆ ನಡೆಸಬೇಕೆಂದು’ ದೂರು ನೀಡಿದ್ದಾರೆ. ಅದರಂತೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
