ರಾಜ್ಯ ಸರಕಾರದ ಪಂಚಗ್ಯಾರಂಟಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ಲಭಿಸುತ್ತಿದೆಯಾ? ಸಿಗದಿರುತ್ತಿದ್ದರೆ ಅದಕ್ಕೆ ಕಾರಣವೇನು ಮತ್ತು ಪರಿಹಾರ ಹೇಗೆ ? ತಿರಸ್ಕೃತ ಅರ್ಜಿಗಳ ವಿಲೇವಾರಿಗಾಗಿ ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಇಂದು ಮೂಡುಬಿದಿರೆ ಸಮಾಜಮಂದಿರದಲ್ಲಿ ವಿಲೇವಾರಿ ಕ್ಯಾಂಪನ್ನು ಹಮ್ಮಿಕೊಂಡಿತ್ತು.
ಬೇರೆ ಬೇರೆ ಕಾರಣಗಳಿಂದಾಗಿ ಪಂಚಗ್ಯಾರಂಟಿ ಯೋಜನೆಗಳಿಂದ ವಂಚಿತರಾದವರಿಗೆ ಸರಿಪಡಿಸಿ ಪರಿಹಾರ ಒದಗಿಸಲು ಇದೊಂದು ಉತ್ತಮ ಅವಕಾಶವಾಗಿತ್ತು.


ತಾಲೂಕಿನ ವಿವಿಧ ಕಡೆಗಳಿಂದ ಜನರು ತಮ್ಮ ಸಮಸ್ಯೆಗಳೊಂದಿಗೆ ಈ ವಿಲೇವಾರಿ ಶಿಬಿರಕ್ಕೆ ಬಂದಿದ್ದರು.ಸಮಾಜ ಮಂದಿರ ಹೌಸ್ ಫುಲ್ ಆಗಿತ್ತು.
ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪಂಚಗ್ಯಾರಂಟಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ಸಿಗುವಂತಾಗಲು ಸಂಬಂಧಪಟ್ಟ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ವಿಲೇವಾರಿ ಮಾಡಿಕೊಡಲಾಯಿತು.


ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಅವರು ಶಿಬಿರವನ್ನು ಉದ್ಘಾಟಿಸಿ ‘ ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಶೆಟ್ಟಿ ಮತ್ತು ಸರ್ವ ಸದಸ್ಯರ ಶ್ರಮದಿಂದಾಗಿ ತಾಲೂಕಿನ ಜನರಿಗೆ ಗ್ಯಾರಂಟಿ ಯೋಜನೆಗಳ ಪ್ರಯೋಜನ ಸಿಗುತ್ತಿದೆ,ನಿರಂತರ ಜನ ಸಂಪರ್ಕದಲ್ಲಿದ್ದು ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ,ಕೆಲವೇ ಕೆಲವು ಜನರಿಗೆ ಸಮಸ್ಯೆಯಾಗಿರಬಹುದು,ಅದು ಮುಂದಿನ ದಿನಗಳಲ್ಲಿ ಸರಿಯಾಗಲಿದೆ’ ಎಂದರು.
ಮಾಜಿ ಸಚಿವ ಕೆ.ಅಭಯಚಂದ್ರ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಭಾಗವಹಿಸಿ ಶುಭ ಹಾರೈಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಕರ್ ಅವರು ಸ್ವಾಗತಿಸಿ, ಗ್ಯಾರಂಟಿ ಯೋಜನಾ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಶಿವಾನಂದ ಪಾಂಡ್ರು ನಿರೂಪಿಸಿ ವಂದಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶುಭಾ,ಕೆಎಸ್ಸಾರ್ಟಿಸಿ, ಮೆಸ್ಕಾಂ ಅಧಿಕಾರಿಗಳು, ಗ್ಯಾರಂಟಿ ಯೋಜನಾ ಸಮಿತಿ ಸದಸ್ಯರಾದ ಹರೀಶ್ ಆಚಾರ್ಯ, ರಜನಿ,ಶಕುಂತಲಾ ದೇವಾಡಿಗ,ರೆಕ್ಸನ್ ಪಿಂಟೊ, ಗಣೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.






