ಸುಮಾರು ಹದಿಮೂರು ಶತಮಾನಗಳ ಇತಿಹಾಸ ಹೊಂದಿರುವ ಮೂಡುಬಿದಿರೆ ಸಮೀಪದ ಲಾಡಿಯ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವವು ಫೆ.12 ರಿಂದ 16 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅನಂತಕೃಷ್ಣ ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹಿಂದೆ ನಾಡೂರು ಎಂದು ಕರೆಯಲ್ಪಡುತ್ತಿದ್ದ ,ಈಗ ಲಾಡಿ ಎಂದು ಕರೆಯಲ್ಪಡುವ ಕ್ಷೇತ್ರದ ಶ್ರೀ ಚತುರ್ಮುಖ ದೇವಸ್ಥಾನವು ಇದೀಗ ಸಂಪೂರ್ಣ ಶಿಲಾಮಯವಾಗಿ ನವೀಕರಣಗೊಂಡಿದ್ದು ನೂತನ ಶಿಲಾಮಯ ದೇವಳದ ಅನಾವರಣ,ಶ್ರೀ ಚತುರ್ಮುಖ ಬ್ರಹ್ಮ ದೇವರ ಪುನರ್ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಫೆ.12 ರಿಂದ 16 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದವರು ಮಾಹಿತಿ ನೀಡಿದರು.
ವೈಶಿಷ್ಟ್ಯತೆಯ ಕ್ಷೇತ್ರ: ನಾಡಿನ ಮಾತ್ರವಲ್ಲ ದೇಶದ ಅಪರೂಪದ ಬ್ರಹ್ಮ ದೇವರ ಸಾನಿಧ್ಯ ಎನ್ನಲಾದ
ಶ್ರೀ ಬ್ರಹ್ಮ ದೇವರ ಸನ್ನಿಧಿಯ ಶಿಲಾಮೂರ್ತಿ ಹಂಸವಾಹನ, ಜಪಮಾಲೆ, ಅಮೃತಕಲಶ, ವೇದ ಪುಸ್ತಕಧಾರಿಯಾಗಿ ಅಭಯ ಹಸ್ತ ಹೊಂದಿದ್ದು ಧನ್ನಂತರಿಯ ಸ್ವರೂಪದ ಅಪೂರ್ವ ಬ್ರಹ್ಮಶಿಲ್ಲವೆಂದು a) ಕಜ್ಜರ ಅಂಬೋಣ. ದೇವಳದ ಮುಂಭಾಗದಲ್ಲಿ ಚಿತ್ರಕೂಟ ನಾಗಬನವು ವಿಶಿಷ್ಟನಾಗಶಿಲ್ಪಗಳಿಂದ ಕೂಡಿದೆ. ಕಾರಣಿಕದ ಕ್ಷೇತ್ರವಾಗಿ ಕಂಕಣ ಭಾಗ್ಯ, ಸಂತಾನ ಭಾಗ್ಯ, ಹಾಗೂ ಚರ್ಮವ್ಯಾಧಿಗ್ರಸ್ತರಿಗೆ ‘ಆರೋಗ್ಯಭಾಗ್ಯ ಸಿದ್ಧಿಯ ಕ್ಷೇತ್ರವಾಗಿಯೂ ಲಾಡಿ ಪ್ರಸಿದ್ಧ. ಅಪರೂಪದ ಚತುರ್ಮುಖ ಬ್ರಹ್ಮನ ದೇವಸ್ಥಾನ, ಪುರಾತನ ನಾಗ ಬ್ರಹ್ಮ ಬನ, ದೈವ ಬ್ರಹ್ಮ ಬಲಾಂಡಿಯ ಉಗಮ ಸ್ಥಾನ. ಈ ಪವಿತ್ರ ತಾಣದ ಪೂರ್ವ ಭಾಗದ ಅಂಗಜಾಲ ಬರ್ಕೆಯಲ್ಲಿ ಉಗಮ ಸ್ಥಾನ ಹೊಂದಿರುವ ಶಾಂಭವಿ ನದಿ ಈ ಲಾಡಿ ದೇವಸ್ಥಾನದ ಪರಿಸರದ ವಿಶೇಷ.
ದೋಣಿಂಜೆಗುತ್ತಿನ ಮಂತ್ರಿ ಸತ್ಯ ಬನ್ನಾಯ -ಲಕ್ಷ್ಮೀ ದಂಪತಿ ಈ ಚತುರ್ಮುಖ ಬ್ರಹ್ಮ ದೇವರಿಗೆ ಹರಕೆ ಹೊತ್ತು ಜನಿಸಿದ ಮಗು ನಾಡು. ಹೆತ್ತವರನ್ನು ಕಳೆದುಕೊಂಡ ನೋವಿನಿಂದ ನಾಸ್ತಿಕನಾದ ನಾಡು ಮುಂದೆ ಇದೇ ಕ್ಷೇತ್ರದಲ್ಲಿ ದೇವರ ಕೋಪಕ್ಕೆ ತುತ್ತಾಗಿ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ನೀರಿನ ಗುಂಡಿಯಲ್ಲಿ ಕುದುರೆಯೊಂದಿಗೆ ಶಿಲೆಯಾದ ಇತಿಹಾಸವಿದೆ. ಮುಂದೆ ಪೆರಾರದಲ್ಲಿ ಬಲಾಂಡಿ ದೈವವಾಗಿ ಅವತರಿಸಿರುವುದು ಇದೇ ನಾಡು.
ಅಭಿವೃದ್ಧಿ: ಅರುವತ್ತರ ದಶಕದಲ್ಲಿ ಸ್ಥಳೀಯ ಹೊಟೆಲ್ ಉದ್ಯಮಿ ಬಾಬು ಭಟ್ ಯಾನೆ ಶ್ರೀನಿವಾಸ ಭಟ್ಟರ ಹಿರಿತನದಲ್ಲಿ ಈ ಸ್ಥಳವನ್ನು ಅಭಿವೃದ್ಧಿಪಡಿಸಿ 1964 ರಲ್ಲಿ ಕಲ್ಲು ಹಂಚಿನ ದೇವಾಲಯ ನಿರ್ಮಾಣದ ಅಭಿವೃದ್ಧಿ ನಡೆದಿತ್ತು. ಮುಂದೆ 2000 ದಲ್ಲಿ ಮತ್ತೆ ದೇವಳ ಅಭಿವೃದ್ಧಿಪಡಿಸಿ ಬ್ರಹ್ಮಕಶಲ ನಡೆದಿದೆ. ತಂತ್ರಿಗಳ ದಾಖಲೆಯ ಹಿನ್ನೆಲೆಯಲ್ಲಿ 225 ವರ್ಷಗಳ ಇತಿಹಾಸದ ಹಿನ್ನೆಲೆ ಮೇಲ್ನೋಟಕ್ಕೆ ಕಾಣಸಿಗುತ್ತದೆ. ಆದರೆ ಐತಿಹಾಸಿಕವಾಗಿ ಹದಿಮೂರು ಶತಮಾನಗಳ ಇತಿಹಾಸ ಕ್ಷೇತ್ರಕ್ಕೆ ಇದೆ ಎನ್ನುವ ಕುರುಹುಗಳು ಇವೆ.
ಸಮಗ್ರ ಜೀರ್ಣೋದ್ಧಾರ: ಸಂಪೂರ್ಣ ಶಿಲಾಮಯ ಗರ್ಭಗುಡಿ, ತೀರ್ಥ ಮಂಟಪ, ಸುತ್ತು ಪೌಳಿ,
ಪರಿವಾರ ದೇವರು, ನಾಗ ಬನದ ಜೀರ್ಣೋದ್ದಾರ. ಗಣಪತಿ, ನಾಡು, ದೈವದ ಗುಡಿಗಳ ಸಹಿತ ಕೆರೆ, ಬಾವಿ, ಗೋಪುರ, ಆವರಣ ಹೀಗೆ ఒట్టు 5 ಕೋಟಿ ಅಂದಾಜು ವೆಚ್ಚದ ಕಾಮಗಾರಿಗಳು ಭಜಕರು ಮತ್ತು ದಾನಿಗಳ ನೆರವಿನಿಂದ ನಡೆದಿವೆ. ವಾಸ್ತು ತಜ್ಞ ಪ್ರಸಾದ್ ಮುನಿಯಂಗಳ ನೇತೃತ್ವದಲ್ಲಿ ಪದ್ಮನಾಭ ಶಿಲ್ಪಿ ಬಳಗವು ಇಲ್ಲಿನ ಒಟ್ಟು 5 ಸಾವಿರ ಅಡಿ ವಿಸ್ತಾರದಲ್ಲಿನ ಸಂಪೂರ್ಣ ಶಿಲಾಮಯ ಛಾವಣಿಯ ವಿಶಿಷ್ಠ ಗುಡಿ ಗೋಪುರಗಳನ್ನು ರೂಪಿಸಿದೆ.
ಬ್ರಹ್ಮಕಲಶೋತ್ಸವ ಸಂಭ್ರಮ: ಫೆ 12 ರಿಂದ 14ರವರೆಗೆ ದೇವಳ ಪುನಃ ಪ್ರತಿಷ್ಠೆ,ಬ್ರಹ್ಮಕಲಶೋತ್ಸವ
ಸಂಭ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು, ಹವನಾದಿ ಪೂಜೆ, ದಿನವಿಡೀ ಸಾಂಸ್ಕೃತಿಕ ಕಲಾಪಗಳು ಜರಗಲಿವೆ.ಪ್ರತೀ ದಿನಪೂರ್ತಿ ವಿವಿಧ ಸಾಂಸ್ಕೃತಿಕ ಕಲಾಪಗಳು, ಅನ್ನಸಂತರ್ಪಣೆ ಜರಗಲಿದೆ. ಫೆ 15ರಂದು ಶನಿವಾರ ಕುಂಭ ಲಗ್ನ ಸುಮೂಹೂರ್ತದಲ್ಲಿ ಪರಮಪೂಜ್ಯ ಎಡನೀರು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಶಿಖರ ಪ್ರತಿಷ್ಠೆ, ನೂತನ ಶಿಲಾಮಯ ದೇವಳದ ಅನಾವರಣ,ಚತುರ್ಮುಖ ಬ್ರಹ್ಮ- ಬಲಮುರಿ ಗಣಪತಿ, ನಾಡು ಸಹಿತ ಕುಂಭಕಂಠಿಣಿ, ರಕೇಶ್ವರಿ ದೈವಗಳ ಬಿಂಬ ಪ್ರತಿಷ್ಠೆ ತನ್ನ ಹೋಮ, ತತ್ವಕಲಶಾಭಿಷೇಕ ಜರಗಲಿದೆ. ಸಂಜೆ ಮಂಡಲ ಪೂಜೆ,ಸಹಸ್ರ (1001) ಕಲಶ ಬ್ರಹ್ಮ ದೇವರಿಗೆ 108 ಕಲಶ, ಗಣಪತಿ ದೇವರಿಗೆ 48 ಕಲಶ ನಾಡುವಿಗೆ 48 ಕಲಶ, ಪರಿವಾರ ದೈವಗಳಿಗೆ ದ್ರವ್ಯ ಸಹಿತ ಬ್ರಹ್ಮಕಲಶ ಪ್ರತಿಷ್ಠೆ, ಅಧಿವಾಸ ಹೋಮಗಳು ನಡೆಯಲಿವೆ.
ಧಾರ್ಮಿಕ ಸಭೆ: ಫೆ 15ರಂದು ಸಂಜೆ 4.30ರಿಂದ ಜರಗುವ ಧಾರ್ಮಿಕ ಸಭೆಯನ್ನು ಶ್ರೀಕ್ಷೇತ್ರ
ಧರ್ಮಸ್ಥಳದ ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಉಡುಪಿ ಅಧೋಕ್ಷಜ ಮಠ ಪೇಜಾವರದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅನಂತಕೃಷ್ಣ ರಾವ್ ಅಧ್ಯಕ್ಷತೆಯಲ್ಲಿ ಸಂಸದ ಕ್ಯಾ, ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಪುರಸಭಾಧ್ಯಕ್ಷೆ ಶ್ರೀಮತಿ ಜಯಶ್ರೀ ಕೇಶವ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಹೊಸಂಗಡಿ ಅರಮನೆಯ ಸುಕುಮಾರ್ ಶೆಟ್ಟಿ, ವಾಸ್ತು ತಜ್ಞ ಪ್ರಸಾದ್ ಮುನಿಯಂಗಳ, ಪುರಸಭಾ ಸದಸ್ಯ ಸುರೇಶ್ ಪ್ರಭು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಫೆ 16ರಂದು ಅಪರಾಹ್ನ 12.10ರ ವೃಷಭ ಲಗ್ನ ಸುಮೂಹೂರ್ತದಲ್ಲಿ ಶ್ರೀ ಪೇಜಾವರ ಮಠಾಧೀಶರಿಂದ ಬ್ರಹ್ಮಕಲಶಾಭಿಷೇಕ,ಮಹಾಪೂಜೆಯ ಬಳಕಿ ಮಹಾ ಅನ್ನಸಂತರ್ಪಣೆ ಜರಗಲಿದೆ. ಸಂಜೆ ರಂಗಪೂಜೆ, ಬಲಿ ಮಹೋತ್ಸವ, ಹಾಗೂ ಪರಿವಾರ ಧರ್ಮದೈವಗಳಿಗೆ ನೇಮೋತ್ಸವಫೆ 17ರಂದು ಮಂಗಲ ಗಣಯಾಗ, ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ ನಡೆಯಲಿದೆ ಎಂದರು.
ಸಮಿತಿಯ ಪದಾಧಿಕಾರಿಗಳಾದ ಗಣೇಶ್ ರಾವ್,ರವಿಪ್ರಸಾದ್ ಶೆಟ್ಟಿ, ಸದಾನಂದ ಪೂಜಾರಿ, ರಾಘವೇಂದ್ರ ರಾವ್,ಸುರೇಶ್ ಪ್ರಭು,ಪುಂಡಿಕಾಯಿ ಗಣಪಯ್ಯ ಭಟ್,ಪ್ರಶಾಂತ್, ಪೂರ್ಣಿಮಾ ಬಂಗೇರ,ಮಾಧವ ಶೆಟ್ಟಿ,ಶ್ರೀಮತಿ ಇಂದಿರಾ, ಅರ್ಚಕರಾದ ಸುಧಾಕರ ಭಟ್,ಶಿಲ್ಪಿ ಪದ್ಮನಾಭ,ಪ್ರಸಾದ್ ಕುಮಾರ್, ಗಿರೀಶ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
