ಲೋಕಸಭೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಂ ಅವರು ಮಂಡಿಸಿದ ಬಜೆಟ್ ದಲಿತ, ಹಿಂದುಳಿದ ಯುವಕರ ಭವಿಷ್ಯದ ಮೇಲೆ ಚೆಲ್ಲಾಟವಾಡಿದೆ,ಮೋದಿ ಸರಕಾರವು ಪದೇಪದೇ ಹಿಂದುತ್ವದ ಹೆಸರಿನಲ್ಲಿ ಯುವಕರ ಮತ ಪಡೆದು ಅಧಿಕಾರ ಪಡೆದ ಮೇಲೆ ಹಿಂದುಳಿದ, ದಲಿತ ಯುವಕರನ್ನು ಹಿಂದಕ್ಕೆ ತಳ್ಳಿ ಶ್ರೀಮಂತ ಉದ್ಯಮಿಗಳ ಮುಂದೆ ಹೋಗುವುದೇ ಕೇಂದ್ರದ ಸಾಧನೆ ಎಂದು ದ.ಕ.ಜಿಲ್ಲಾ ಪರಿಶಿಷ್ಟ ಜಾತಿ ಮಾಧ್ಯಮ ವಕ್ತಾರ ಶಿವಾನಂದ ಪಾಂಡ್ರು ಅವರು ಆರೋಪಿಸಿದ್ದಾರೆ.
ಹಣಕಾಸು ಸಚಿವರು 50,65,345 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದು ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ನಿಗಮಕ್ಕೆ ಮತ್ತು ಸಫಾಯಿ ಕರ್ಮಚಾರಿ ನಿಗಮಕ್ಕೆ ಕೇವಲ 10 ಲಕ್ಷ ರೂ.ನೀಡಿದ್ದಾರೆ ಎಂದು ಆರೋಪಿಸಿರುವ ಅವರು ಪರಿಶಿಷ್ಟ ಜಾತಿಯ ಪಾಲಿನ ಮೀಸಲು ಹಣವನ್ನು ದುರ್ಬಳಕೆ ಮಾಡುವ ಕೆಲಸ ಕೇಂದ್ರದಿಂದ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
258.6 ಕೋಟಿ ರೂ.ನ್ನು ದಲಿತರಿಗೆ ಸಂಬಂಧವಿಲ್ಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಂಕಿಂಗ್ ಗೆ ನೀಡಲಾಗಿದೆ, ಇನ್ನುಳಿದಂತೆ 684.34 ಕೋಟಿ ರೂ. ಐ.ಐ.ಟಿ ಗೆ, ರೂ.60 ಕೋಟಿ ಐ.ಐ.ಎಸ್.ಸಿ.ಗೆ, ರೂ.398.12 ಕೋಟಿ ಎನ್.ಐ.ಐ.ಟಿ ಗೆ , ರೂ.94.83 ಕೋಟಿ ಐ.ಎ.ಎಸ್.ಇ.ಆರ್ ಗೆ,ರೂ.32.19 ಕೋಟಿ ತ್ರಿಬಲ್ ಐ.ಐ.ಟಿ.ಗೆ ಹಾಗೂ ರೂ. 15.44 ಕೋಟಿ ಸಾಲ ಮತ್ತು ಬಡ್ಡಿ ತೀರಿಸಲು ಐ.ಐ.ಎಂ.ಗೆ ನೀಡಿ ಪರಿಶಿಷ್ಟ ಜಾತಿಯವರ ಪಾಲಿನ ಹಣವನ್ನು ಯಥೇಚ್ಛವಾಗಿ ದುರ್ಬಳಕೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಾಮಾಜಿಕ ನ್ಯಾಯ ಬಯಸದ ಮತ್ತು ಭಾರತ ಸಂವಿಧಾನ ಕಲಂ 46 ನ್ನು ಉಲ್ಲಂಘಿಸಿರುವ ಕೇಂದ್ರ ಬಜೆಟ್ ಪರಿಶಿಷ್ಟರಿಗೆ ಬಹಿರಂಗವಾಗಿಯೇ ಮೋಸ ಮಾಡಿದೆ,ಈ ಬಜೆಟನ್ನು ಖಂಡಿಸುವುದಾಗಿ ಹೇಳಿದ ಶಿವಾನಂದ ಪಾಂಡ್ರು ಕೂಡಲೇ ಪರಿಶಿಷ್ಟರಿಗೆ ಕೇಂದ್ರ ಬಜೆಟ್ ನಲ್ಲಿ ನ್ಯಾಯ ಸಿಗಬೇಕೆಂದು ಆಗ್ರಹಿಸಿದ್ದಾರೆ.
