Latest News

ದನ ಸಾಕದೆ ಅಧ್ಯಕ್ಷರಾದ ‘ಪೈ’ . *ಒಬ್ಬ ನಿರ್ದೇಶಕ ಎನ್ನಲಿಲ್ಲ ಜೈ ! *ಪಡುಮಾರ್ನಾಡಿನಲ್ಲಿ ನಮಿರಾಜ್ ಬಲ್ಲಾಳ್ ವಿಶಿಷ್ಟ ಪ್ರತಿಭಟನೆ.

Picture of Namma Bedra

Namma Bedra

Bureau Report

ಪಡುಮಾರ್ನಾಡು ಹಾಲು ಉತ್ಪಾದಕರ ಸಂಘಕ್ಕೆ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಲ್ಲಿ ಒಂದೇ ಒಂದು ದನ ಸಾಕದೆ ಡೈರಿಗೆ ಹಾಲು ಹಾಕುತ್ತಿರುವ ದಯಾನಂದ ಪೈ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ, ಅವಿರೋಧ ಆಯ್ಕೆಗೆ ಮುಂಚೆ ನಿರ್ದೇಶಕರಿಗೆ ನೋಟೀಸು ನೀಡದೆ ಒಳಗಿಂದೊಳಗೇ ಆಯ್ಕೆ ಮಾಡಲಾಗಿದೆ, ಹಾಗಾದರೆ ಪ್ರಾಮಾಣಿಕವಾಗಿ ದನಗಳನ್ನು ಸಾಕಿ ಡೈರಿಗೆ ಹಾಲು ಹಾಕುವವರಿಗೆ ಅಧ್ಯಕ್ಷರಾಗಲು ಅರ್ಹತೆ ಇಲ್ಲವೇ ಎಂದು ಪ್ರಶ್ನಿಸಿ ಡೈರಿಯ ಮುಂದೆಯೇ ಹಾಲು ಇಟ್ಟು ನಿರ್ದೇಶಕರೋರ್ವರು ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸಿದ್ದಾರೆ.


ಪಡುಮಾರ್ನಾಡು ಹಾಲು ಉತ್ಪಾದಕರ ಸಂಘದ ನಿರ್ದೇಶಕ ನಮಿರಾಜ್ ಬಲ್ಲಾಳ್ ಅವರೇ ಈ ರೀತಿಯ ವಿಶಿಷ್ಟ ಪ್ರತಿಭಟನೆ ನಡೆಸಿದವರು‌.
ಪಡುಮಾರ್ನಾಡು ಹಾಲು ಉತ್ಪಾದಕರ ಸಂಘಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ದಯಾನಂದ ಪೈ ಮತ್ತು ನಮಿರಾಜ್ ಬಲ್ಲಾಳ್ ಸಹಿತ ಇತರರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಮುನ್ನ ಚುನಾವಣಾಧಿಕಾರಿಯವರು ನಿರ್ದೇಶಕರಿಗೆ ನೋಟೀಸು ನೀಡಬೇಕಾಗಿರುವುದು ಕ್ರಮ. ಆದರೆ ಚುನಾವಣಾಧಿಕಾರಿ ವಿಲಾಸ್ ಅವರು ಆ ಜವಾಬ್ದಾರಿಯನ್ನು ಕಾರ್ಯದರ್ಶಿ ಉಮಾನಾಥ ಅವರಿಗೆ ವಹಿಸಿಕೊಟ್ಟಿದ್ದರೆನ್ನಲಾಗಿದೆ. ಉಮಾನಾಥ ಅವರು ನಿರ್ದೇಶಕರಿಗೆ ಪ್ರಮಾಣಪತ್ರ ನೀಡಿ ಕಡತಕ್ಕೆ ಸಹಿ ತೆಗೆದುಕೊಂಡಿದ್ದಾರೆಯೇ ವಿನಹ ಚುನಾವಣೆಯ ಬಗ್ಗೆ ನೋಟೀಸನ್ನಾಗಲೀ, ಹೇಳಿಕೆಯನ್ನಾಗಲೀ ನೀಡಿಲ್ಲ. ಅವರೊಳಗೆನೇ ದಯಾನಂದ ಪೈ ಅವರನ್ನು ಮತ್ತೆ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿಕೊಂಡಿದ್ದಾರೆನ್ನುವುದು ನಮಿರಾಜ್ ಅವರ ಆರೋಪವಾಗಿದೆ.
ಕಳೆದ ಹಲವು ವರ್ಷಗಳಿಂದ ದಯಾನಂದ ಪೈ ಅವರು ಅಧ್ಯಕ್ಷರಾಗುತ್ತಾ ಬಂದಿದ್ದಾರೆ, ಅವರು ಒಂದೇ ಒಂದು ದನ ಸಾಕುವುದಿಲ್ಲ, ಆದರೂ ಡೈರಿಗೆ ಹಾಲು ಹಾಕುತ್ತಾರೆ, ಆ ಹಾಲು ಎಲ್ಲಿಂದ ಎಂದು ಪ್ರಶ್ನಿಸಿರುವ ನಮಿರಾಜ್ ಅವರು ನಿರ್ದೇಶಕರಿಗೆ ನೋಟೀಸು ನೀಡದೆ ಚುನಾವಣೆ ನಡೆಸಿರುವ ಸಿಬ್ಬಂದಿಗಳಿಗೆ ಧಿಕ್ಕಾರ ಹಾಕಿ ಡೈರಿಯ ಮುಂದೆ ಧರಣಿ ಕೂತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ದನ ಸಾಕಿ ಡೈರಿಗೆ ಹಾಲು ಹಾಕುವವರಿಗೆ ಅಧ್ಯಕ್ಷ ಉಪಾಧ್ಯಕ್ಷರಾಗಲು ಅವಕಾಶವೇ ಇಲ್ಲವೇ, ಈ ಅಕ್ರಮ ಆಯ್ಕೆಯಲ್ಲಿ ಚುನಾವಣಾಧಿಕಾರಿ, ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು ಕೂಡಾ ಶಾಮೀಲಾಗಿದ್ದಾರೆಂದು ಆರೋಪಿಸಿರುವ ಅವರು ಸಂಬಂಧಪಟ್ಟ ಮೇಲಾಧಿಕಾರಿಗಳು ಬಂದು ಇತ್ಯರ್ಥಪಡಿಸುವವರೆಗೆ ತಾನು ಧರಣಿಯನ್ನು ಕೈ ಬಿಡುವುದಿಲ್ಲ ಎಂದಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು