*ಅಶ್ರಫ್ ವಾಲ್ಪಾಡಿ
ವಾಲ್ಪಾಡಿ ಅರ್ಬಿ ಸಂಕ. ಒಂದು ಕಾಲದ ಬಹಳ ಫೇಮಸ್ ಆಗಿದ್ದ ಈ ಸೇತುವೆ ಮುರಿದು ಬಿದ್ದು ವರ್ಷಗಳ ಸಂಖ್ಯೆ ಹಲವು ಕಳೆದಿದೆ.ಪ್ರತೀ ವರ್ಷ ಮಳೆಗಾಲ ಬರುವಾಗ ಮಾತ್ರ ಈ ಸಂಕದ ನೆನಪಾಗೋದು.
ಯಾವಾಗ ಈ ಸಂಕ ಸತ್ತು ಹೋಯಿತೋ ….ಅಂದಿನಿಂದ ಈ ಭಾಗದ ಜನರಿಗೆ ಸಂಕಟ ಎದುರಾಗಿದೆ. ಅದ್ಯಾಕೋ ಗೊತ್ತಿಲ್ಲ-ಹೊಸ ಸಂಕದ ಕಾಮಗಾರಿಗೂ ಸಂಕಟ ಎದುರಾಗುತ್ತಿದೆ.

ಆನೆಗುಡ್ಡೆ,ಪೆರಿಬೆಟ್ಟು ಸಂಪರ್ಕ ಕಲ್ಪಿಸುತ್ತಿದ್ದ ಈ ಸೇತುವೆ ತನ್ನ ಅಸ್ತಿತ್ವ ಕಳೆದುಕೊಂಡ ಬಳಿಕ ಆ ಸಂಪರ್ಕವನ್ನೇ ದೂರ ಮಾಡಿದೆ.
ಅರ್ಬಿ ಪರಿಸರದಲ್ಲಿ ಹಲವು ಮನೆಗಳಿವೆ. ಕೃಷಿಕರೇ ಹೆಚ್ಚಾಗಿರುವ ಈ ಪ್ರದೇಶದಿಂದ ಜನರು, ವಿದ್ಯಾರ್ಥಿಗಳು ಇದೇ ಸಂಕ ದಾಟಿ ಈಚೆಗೆ ಬರುತ್ತಿದ್ದರು. ಸಂಕ ಮುರಿದು ಬಿದ್ದ ಬಳಿಕ ಸುತ್ತುಬಂದೇ ಬರಬೇಕಾದ ಅನಿವಾರ್ಯತೆ. ಬಹಳ ಕಷ್ಟ ಎದುರಿಸಬೇಕಾದ ಪರಿಸ್ಥಿತಿ.
ವರ್ಷದ ಹಿಂದೊಮ್ಮೆ ಸುಮಾರು ಐದು ಕೋಟಿ ರೂ.ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಮನಸ್ಸು ಮಾಡಿದ್ದರು. ಕಾರ್ಕಳ ಮೂಲದ ಗುತ್ತಿಗೆದಾರರೊಬ್ಬರಿಗೆ ಗುತ್ತಿಗೆಯನ್ನೂ ನೀಡಲಾಗಿತ್ತು.ಕಾಮಗಾರಿ ಇನ್ನೇನು ಆರಂಭಗೊಳ್ಳುತ್ತದೆ,ಪೊಸಾ ಸಂಕ ಆಪುಂಡು ಎಂದು ಈ ಭಾಗದ ಜನರು ಬಹಳ ಕುಷಿಪಟ್ಟಿದ್ದರು.ಆದರೆ ಆ ಕುಷಿ ಹೆಚ್ಚು ಸಮಯ ಉಳಿಯಲಿಲ್ಲ.ಆ ಯೋಜನೆ ಆರಂಭಿಕ ಹಂತದಲ್ಲೇ ನಿಂತು ಹೋಯಿತು.

ಬಳಿಕ ಅರುಣ್ ಕುಮಾರ್ ಶೆಟ್ಟಿ ಅವರೊಮ್ಮೆ ಮಂತ್ರಿ ಬೆದ್ರಕ್ಕೆ ಬಂದಾಗ ಒಂದು ಕೋಟಿಯ ಪ್ರಸ್ತಾಪದೊಂದಿಗೆ ಅರ್ಜಿ ಕೊಟ್ಟಿದ್ದರು.ಸಚಿವರ ಸೂಚನೆಯಂತೆ ಕೆಲ ಅಧಿಕಾರಿಗಳು ಬಂದು ಫೊಟೊ ಕ್ಲಿಕ್ಕಿಸಿಕೊಂಡು ಹೋದರೇ ವಿನಹ ಸಂಕದ ಕಂಬಗಳು ಮೇಲೇಳಲೇ ಇಲ್ಲ.
ಈಭಾಗದ ಜನರ,ಕೃಷಿಕರ ಕಷ್ಟ ಮಳೆಗಾಲದಲ್ಲಿ ನೋಡಿದರೆ ಅರ್ಥವಾಗುತ್ತದೆ. ಸುತ್ತಲೂ ಗದ್ದೆಗಳಿರುವುದರಿಂದ ಮಳೆಗಾಲದಲ್ಲಿ ಎಲ್ಲಾ ಗದ್ದೆಗಳೂ ಜಲಾವೃತವಾಗುವುದರಿಂದ ಸುಮಾರು ನಲವತ್ತು ಎಕರೆ ಕೃಷಿಭೂಮಿಯಲ್ಲಿ ಯಾವ ಕೃಷಿಯನ್ನೂ ಮಾಡಲಾಗುತ್ತಿಲ್ಲ.

ಅರ್ಜಿ ಕೊಟ್ಟು,ಮನವಿ ಸಲ್ಲಿಸಿ ಈಭಾಗದ ಜನರು ಸೋತುಹೋಗಿದ್ದಾರೆ.ಇನ್ನು ಕೊಡುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ರಾಜಕಾರಣಿಗಳಿಗೂ ಈ ಪರಿಸರದ ಕಷ್ಟ ಅನುಭವಕ್ಕೆ ಬಂದಿರಬಹುದು.ಎಲೆಕ್ಷನ್ ನ ಫೀಲ್ಡ್ ಗೆ ಹೋಗುವಾಗ ಸಂಕ ಇಲ್ಲದೆ ಸುದೆ,ತೋಡುಗಿಳಿದು ಪ್ಯಾಂಟ್, ಲುಂಗಿಯನ್ನು ಮೇಲಕ್ಕೆತ್ತಿಯೇ ಹೋದ ಅನುಭವ ಆಗಿರಲೂಬಹುದು.
ಜನರು ಕಷ್ಟಪಡುತ್ತಿದ್ದಾರೆ. ಕೃಷಿಕರು ಸೋತಿದ್ದಾರೆ.ವಿದ್ಯಾರ್ಥಿಗಳು ಮಳೆಗಾಲದಲ್ಲಿ ಮತ್ತಷ್ಟು ಸಂಕಟ ಎದುರಿಸುತ್ತಾರೆ.
ಈಗ ಇಲ್ಲೊಂದು ಸೇತುವೆಯ ಅಗತ್ಯ ಖಂಡಿತಾ ಇದೆ. ನಾನು ಮಾಡಿದ್ದು- ನೀನು ಮಾಡಿದ್ದು ಎಂಬ ಮೈಲೇಜ್ ಬೇಡ.ಶಾಸಕ ಒಂದು ಪಕ್ಷದಲ್ಲಿದ್ದರೆ ಸರಕಾರ ಇನ್ನೊಂದು ಪಕ್ಷ ಇದೆ.ಇದ್ಯಾವುದೂ ಇಲ್ಲಿನ ಸೇತುವೆ ನಿರ್ಮಾಣಕ್ಕೆ ಅಡ್ಡಿಯಾಗಬಾರದು.ಯಾರು ಮಾಡಿದರೂ ಈ ಭಾಗದ ಜನರಿಗೆ ಕುಷಿ ಇದೆ.