Latest News

ಭೂ ಸ್ವಾಧೀನಾಧಿಕಾರಿಯಿಂದ ಭದ್ರಾ ಸಾ ಮಿಲ್ ಗೆ ಅನ್ಯಾಯ

Picture of Namma Bedra

Namma Bedra

Bureau Report

ರಾಷ್ಟ್ರೀಯ ಹೆದ್ದಾರಿ 169 ರ ಕಾಮಗಾರಿಗೆ ಸಂಬಂಧಿಸಿ ವಿಶೇಷ ಭೂ ಸ್ವಾಧೀನಾಧಿಕಾರಿ ಮತ್ತು ಸಿಬ್ಬಂದಿಗಳು ಕೆಲ ಭೂಕಳ್ಳರೊಂದಿಗೆ ಸೇರಿಕೊಂಡು ಅಲಂಗಾರಿನ ಭದ್ರಾ ಸಾ ಮಿಲ್ ಗೆ ಅನ್ಯಾಯ ಮಾಡುತ್ತಿದ್ದಾರೆಂದು ಮಿಲ್ ನ ಸಿಬ್ಬಂದಿಗಳು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭದ್ರಾ ಸಾ ಮಿಲ್ ನ ಅಬ್ದುಲ್ ಖಾದರ್ ಅವರು ‘ ಈ ಪರಿಸರದ 204, 206,207 ಹಾಗೂ 240- 2 ಸರ್ವೆ ನಂಬ್ರದ ಜಮೀನುಗಳನ್ನು ರಾಷ್ಟ್ರೀಯ ಹೆದ್ದಾರಿಗೆ ಈಗಾಗಲೇ ಸ್ವಾಧೀನ ಪಡಿಸಿಕೊಳ್ಳಲಾಗಿದೆ,ಆದರೆ ಆ ಜಮೀನುಗಳನ್ನು ರಸ್ತೆಗೆ ಬಳಸದೆ ಭದ್ರಾ ಸಾ ಮಿಲ್ ಇರುವ ಜಾಗದಲ್ಲೇ ರಸ್ತೆ ನಿರ್ಮಾಣಕ್ಕೆ ಯತ್ನಿಸುತ್ತಿದ್ದಾರೆ,ಮಿಲ್ ಗೆ ರಜೆ ಇರುವ ದಿನ ಕಳ್ಳರಂತೆ ಬಂದು ನಮ್ಮ ಗೋಡೆಗೆ ಗುರುತು ಹಾಕುತ್ತಿದ್ದಾರೆ,ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ ‘ ಎಂದು ಆರೋಪಿಸಿದ್ದಾರೆ.
ಪ್ರಸ್ತುತ ಪ್ರದೇಶದಲ್ಲಿ 200 ಮೀಟರ್ ಗಿಂತಲೂ ಅಧಿಕ ಸರಕಾರಿ ಜಮೀನು ಇದೆ, ಇದರ ಸ್ವಾಧೀನ ಪ್ರಕ್ರಿಯೆಯೂ ಆಗಿದೆ,ಅಲ್ಲದೆ ಈ ಜಮೀನನ್ನು ಬಳಸಿದರೆ ನೇರ ರಸ್ತೆ ನಿರ್ಮಾಣ ಮಾಡಲು ಸಾಧ್ಯವಶಗುತ್ತದೆ, ಆದರೆ ಇದೆಲ್ಲವನ್ನೂ ಬಿಟ್ಟು ಪಟ್ಟಾ ಖಾಸಗಿಯವರ ಪಟ್ಟಾ ಜಾಗವನ್ನೇ ರಸ್ತೆಗೆ ಬಳಸಲು ಮುಂದಾಗುತ್ತಿರುವುದೇಕೆ? ಇದರಿಂದ ಅಧಿಕಾರಿಗಳಿಗೇನು ಲಾಭ ? ಎಂದು ಪ್ರಶ್ನಿಸಿರುವ ಅವರು ಸುಮಾರು ನೂರು ಕೋಟಿಯಷ್ಟು ಭ್ರಷ್ಟಾಚಾರವಾಗಿದ್ದು ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಅಗತ್ಯವಿದೆ ಎಂದಿದ್ದಾರೆ.
ಭದ್ರಾ ಸಾ ಮಿಲ್ 1964 ರಲ್ಲಿ ಸ್ಥಾಪನೆಯಾಗಿರುವ ಮೂಡುಬಿದಿರೆಯ ಹಳೆಯ ಮರದ ಕಾರ್ಖಾನೆಯಾಗಿದ್ದು 1977-78 ರಲ್ಲಿ ಇದಕ್ಕೆ ಕೈಗಾರಿಕಾ ಭೂ ಪರಿವರ್ತನೆಯೂ ಆಗಿದೆ, ಆದರೆ ರಾ.ಹೆ.ಭೂಸ್ವಾಧೀನಾಧಿಕಾರಿಗಳು ಈ ಮಿಲ್ ಗೆ ಅನ್ಯಾಯವೆಸಗುತ್ತಾ ಮಾನಸಿಕ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಇದೇ ಪರಿಸರದಲ್ಲಿ ಭೂಸ್ವಾಧೀನವಾದ ಜಾಗಕ್ಕೆ ಪರಿಹಾರ ನೀಡಲಾಗಿದೆ,ಆದರೆ ಅಲ್ಲಿಯ ಜಾಗವನ್ನು ರಸ್ತೆಗೆ ಬಳಸಲಾಗುತ್ತಿಲ್ಲ, ಹಾಗಾದರೆ ಸುಮಾರು ಒಂದೂವರೆ ಕೋಟಿಯಷ್ಟು ಬಿಡುಗಡೆಯಾದ ಪರಿಹಾರ ಮೊತ್ತದ ಲಾಭ ಪಡೆದುಕೊಂಡವರ್ಯಾರು ? ಎಂದು ಪ್ರಶ್ನಿಸಿದ ಅವರು ಕೇವಲ ಎರಡು ಸೆನ್ಸ್ ಜಾಗ ಇರುವ ವಿಶ್ವಮೂರ್ತಿ ಆಚಾರ್ಯ ಎಂಬವರ ಜಾಗವನ್ನೂ ಅಧಿಕಾರಿಗಳು ಬಿಡುತ್ತಿಲ್ಲವೆಂದು ಆಪಾದಿಸಿದ್ದಾರೆ.
ಭೂಸ್ವಾಧೀನದ ಹಿಂದಿನ ನಕ್ಷೆಯಂತೆ ರಸ್ತೆ ಕೆಲಸವಾಗುತ್ತಿಲ್ಲ,ಕೆಲವರ ಜಮೀನುಗಳನ್ನು ಉಳಿಸಲು ಹೋಗಿ ಓರೆಕೋರೆಯಾಗಿ ರಸ್ತೆ ನಿರ್ಮಾಣವಾಗಲಿದೆ ,ರಾಷ್ಟ್ರೀಯ ಹೆದ್ದಾರಿ ಈ ರೀತಿ ಓರೆಕೋರೆಯಾಗಿ ನಿರ್ಮಾಣವಾದರೆ ಅಪಘಾತಗಳ ಅಪಾಯವೂ ಇದೆ ಎಂದರು.
ಭದ್ರಾ ಸಾ ಮಿಲ್ ಗೆ ಭೂ ಸ್ವಾಧೀನಾಧಿಕಾರಿಗಳಿಂದ ಅನ್ಯಾಯವಾಗುತ್ತಿದೆ ,ಇದರಿಂದ ಹಲವು ಉದ್ಯೋಗಿಗಳು , ವ್ಯಾಪಾರಿಗಳು ಉದ್ಯೋಗ ಕಳೆದುಕೊಳ್ಳಲಿದ್ದಾರೆ, ಪ್ರಸ್ತಾಪದಲ್ಲೇ ಇರದ ಭದ್ರಾ ಸಾ ಮಿಲ್ ಇರುವ ಜಾಗವನ್ನು ಬಿಟ್ಟು ಈಗಾಗಲೇ ಸ್ವಾಧೀನಪಡಿಸಿಕೊಂಡ ಜಾಗದಲ್ಲೇ ರಸ್ತೆ ನಿರ್ಮಾಣವಾಗಲಿ ಎಂದು ಅವರು ಹೇಳಿದ್ದಾರೆ.
ಮುಹಮ್ಮದ್ ಹನೀಫ್, ವಿಶ್ವಮೂರ್ತಿ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು