Latest News

ಫೆ.25 ರಿಂದ ನಡ್ಯೋಡಿ ದೈವಸ್ಥಾನದ ಬ್ರಹ್ಮಕಲಶೋತ್ಸವ

Picture of Namma Bedra

Namma Bedra

Bureau Report

ಶತಮಾನದ ಇತಿಹಾಸವಿರುವ ಮಾರ್ಪಾಡಿ-ಕಲ್ಲಬೆಟ್ಟು ಗ್ರಾಮದ ನಡ್ಯೋಡಿ ದೈವಸ್ಥಾನದ ನಾಲ್ಜನೇ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ನೇಮೋತ್ಸವವು ಫೆ.25 ರಿಂದ ಮಾರ್ಚ್ 3 ರವರೆಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
‌ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಸುಮಾರು ಒಂದೂವರೆ ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆದಿದ್ದು ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಮಾಯಂದಲೆ ದೇವಿಯ ಮೂರ್ತಿ ಪುನರ್ ಪ್ರತಿಷ್ಠೆ,ನೂತನ ಮುಖಮಂಟಪ ಮತ್ತು ರಾಜಗೋಪುರ ಲೋಕಾರ್ಪಣೆಗೊಳ್ಳಲಿದೆ ಎಂದವರು ಮಾಹಿತಿ ನೀಡಿದರು.
ಮಾಯಂದಲೆ ದೇವಿಯ ಮೂರ್ತಿ ಪುನರ್ ಪ್ರತಿಷ್ಠೆ, ಮುಖಮಂಟಪ,ರಾಜಗೋಪುರ, ದೇವಸ್ಥಾನದ ಮೇಲ್ಛಾವಣಿ ದುರಸ್ತಿ, ಶೌಚಾಲಯ,ಇಂಟರ್ಲಾಕ್,ಅಂಗಡಿ ಕೋಣೆಗಳು ಹೀಗೆ 12 ಅಭಿವೃದ್ಧಿ ಕೆಲಸಗಳು ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ನಡೆದಿದೆ ಎಂದವರು ವಿವರಿಸಿದರು.
ಫೆ.25 ರಂದು ಸಂಜೆ 4 ಗಂಟೆಗೆ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಿಂದ ನಡ್ಯೋಡಿ ದೈವಸ್ಥಾನದವರೆಗೆ ನಡೆಯಲಿರುವ ವೈಭವದ ಹೊರಕಾಣಿಕೆ ಮೆರವಣಿಗೆಗೆ ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್ ಅವರು ಚಾಲನೆ ನೀಡಲಿದ್ದು ಸಂಜೆ 6-30ಕ್ಕೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾರೂರು ಖಂಡಿಗ ರಾಮದಾಸ ಅಸ್ರಣ್ಣ ಅವರು ಉದ್ಘಾಟಿಸಲಿದ್ದಾರೆ. ಬಳಿಕ ಎಂ.ಜೆ.ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ ಅವರಿಂದ ನೃತ್ಯ ವೈವಿಧ್ಯ, ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.
ಫೆ.26 ರಂದು ರಾತ್ರಿ 7 ಕ್ಕೆ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ, ಬಳಿಕ ನಡ್ಯೋಡಿ ಮಹಿಳಾ ಮಂಡಲ ಹಾಗೂ ಸ್ಥಳೀಯ ಕಲಾವಿದೆಯರ ಕೂಡುವಿಕೆಯಿಂದ ‘ ನನ ಏಪಲ ಇಂಚನೆ ‘ ತುಳು ನಾಟಕ ಪ್ರದರ್ಶನಗೊಳ್ಳಲಿದ್ದು ಫೆ.27 ಕ್ಕೆ ರಾತ್ರಿ 7 ರಿಂದ ನಡ್ಯೋಡಿ ದೈವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ದಾನಿಗಳಿಗೆ ಸನ್ಮಾನ ನಡೆಯಲಿದೆ. ಬಳಿಕ ಸ್ಥಳೀಯ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ ಪರಕೆದ ತೊಟ್ಟಿಲ್ ‘ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಫೆ.28 ರಂದು ಬೆಳಿಗ್ಗೆ 7 ಕ್ಕೆ ಮಾಯಂದಲೆ ದೇವಿಯ ಮೂರ್ತಿ ಪ್ರತಿಷ್ಠೆ, 7-30ರಿಂದ ಬ್ರಹ್ಮ ಕಲಶಾಭಿಷೇಕ, ಸಂಜೆ 5ಕ್ಕೆ ದೈವದ ಗಗ್ಗರ ಸೇವೆ,6-30ಕ್ಕೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಂದ ನೂತನ ರಾಜಗೋಪುರ ಲೋಕಾರ್ಪಣೆ,ಬಳಿಕ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಶ್ಮಿತಾ ಯುವರಾಜ್ ಜೈನ್,ಸತೀಶ್ಚಂದ್ರ ಪಾಣಿಲ ಹಾಗೂ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವೈ.ಶಶಿಕಾಂತ ಜೈನ್ ಹಾಗೂ ದಾನಿಗಳಿಗೆ ಸನ್ಮಾನ ನಡೆಯಲಿದೆ , ಬಳಿಕ ಉಡುಪಿ ಕೃಷ್ಣ ಕಲಾವಿದರಿಂದ ‘ಆನಿದ ಮನದಾನಿ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ದಿ.ಕಿಞ್ಞಣ್ಣ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮೊದಲ ಬ್ರಹ್ಮ ಕಲಶೋತ್ಸವ ನಡೆದಿದ್ದು ಬಳಿಕ ಎರಡು ಅವಧಿಗಳಲ್ಲಿ ಪುರುಷೋತ್ತಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬ್ರಹ್ಮಕಲಶೋತ್ಸವ ನಡೆದಿದ್ದು ಈವರ್ಷ ನಾಲ್ಕನೇ ಬ್ರಹ್ಮಕಲಶೋತ್ಸವ ನಡಯಲಿದೆ.ಮಾರ್ಚ್ 1 ಮತ್ತು 2 ರಂದು ರಾತ್ರಿ ವಾರ್ಷಿಕ ನೇಮೋತ್ಸವ ನಡೆಯಲಿದೆ ಎಂದವರು ಮಾಹಿತಿ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕಾರ್ಯದರ್ಶಿ ಪ್ರಸನ್ನ ಹೆಗ್ಡೆ, ನಡ್ಯೋಡಿ ದೈವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಪ್ರದೀಪ್ ಕುಮಾರ್ ರೈ,ಕಾರ್ಯದರ್ಶಿ ಯತೀಶ್ ಕೋಟ್ಯಾನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು