ಕಳೆದ ಶುಕ್ರವಾರ ನಡೆದ ಪುತ್ತಿಗೆ ಕ್ಷೇತ್ರದ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಹೊರೆಕಾಣಿಕೆ ಸಂದರ್ಭದಲ್ಲಿ ಪುತ್ತಿಗೆ ಪರಿಸರದ ಮುಸ್ಲಿಂ ಬಾಂಧವರು ತಂಪು ಪಾನೀಯ, ಸಿಹಿ ತಿಂಡಿ ಹಂಚುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.
ತಮ್ಮದೇ ಊರಿನಲ್ಲಿ ನಡೆಯುತ್ತಿರುವ ಪುತ್ತಿಗೆ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಫ್ಲೆಕ್ಸ್ ಗಳ ಮೂಲಕ ಶುಭಕೋರಿರುವ ಈ ಪರಿಸರದ ಮುಸ್ಲಿಂ ಬಾಂಧವರು ಹೊರೆಕಾಣಿಕೆ ಸಂದರ್ಭದಲ್ಲಿ ಬಿಸಿಲಬೇಗೆಗೆ ಮೆರವಣಿಗೆಯಲ್ಲಿ ಸಾಗಿಬಂದ ಹಿಂದೂ ಸಹೋದರರಿಗೆ ತಂಪಾದ ಪಾನೀಯ, ನೀರು,ಸಿಹಿ ತಿಂಡಿ ಹಂಚುವ ಮೂಲಕ ಗಮನಸೆಳೆದಿದ್ದಾರೆ.

ಭಾರತ್ ಚಿಕನ್ ಸೆಂಟರ್ ನ ಝೈನುದ್ದೀನ್, ವಸೀರ್,ಸಿನಾನ್, ಸರ್ಫ್ರಾಝ್, ಅಸ್ಪರ್,ಶಕೀರ್ ಹುಸೈನ್,ಸುಹೈಲ್,ಇನ್ಝಾಮ್,ಅಸ್ಫಾನ್,ಶಾಹಿನ್,ಖಬೀರ್,ಸಿಯಾನ್, ಮನೋಜ್ ನಾಯ್ಕ್ ಪದ್ರೆಂಗಿ ಸಹಿತ ಹಿರಿಯರು ಸೇರಿದಂತೆ ಎಫ್.ಸಿ.ಟಿ. ಪುತ್ತಿಗೆ ತಂಡದ ಸದಸ್ಯರು ಈ ಸಂದರ್ಭದಲ್ಲಿದ್ದರು.


ಮೂಡುಬಿದಿರೆಯ ಮುಸ್ಲಿಂ ಬಾಂಧವರು, ಹೊಸಬೆಟ್ಟು, ಸಂಪಿಗೆ, ಪಾಲಡ್ಕದ ಕ್ರೈಸ್ತ ಬಾಂಧವರು ಹೊರೆಕಾಣಿಕೆ ಸಲ್ಲಿಸಿ ಸೌಹಾರ್ದತೆಗೆ ಸಾಕ್ಷಿಯಾಗಿದ್ದು ಶ್ರೀ ಕ್ಷೇತ್ರಕ್ಕೆ ಇನ್ನೂ ಹೊರೆಕಾಣಿಕೆ ಬರುತ್ತಲೇ ಇದೆ.
ಫೆ.28 ರಂದು ಪ್ರಾರಂಭಗೊಂಡ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಾವಿರಾರು ಜನರ ಪಾಲ್ಗೊಳ್ಳುವಿಕೆ ಮೂಲಕ ಸಂಭ್ರಮದಿಂದ ನಡೆಯುತ್ತಿದೆ.
ಮೂಡುಬಿದಿರೆ ಬಸ್ ನಿಲ್ದಾಣದಿಂದ ಕೆನರಾ ಬಸ್ ಮಾಲಕರ ಸಂಘದ ವತಿಯಿಂದ ಉಚಿತ ಬಸ್ ಸೇವೆಯನ್ನೂ ಮಾಡಲಾಗಿದೆ.