ಅತ್ಯಂತ ಪ್ರಾಚೀನ ದೇವಾಲಯವಾಗಿರುವ ದರೆಗುಡ್ಡೆಯ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಎ.23 ರಿಂದ ಮೇ.2 ರವರೆಗೆ ಹಾಗೂ ಮೇ.2 ರಿಂದ 7 ರವರೆಗೆ ವರ್ಷಾವಧಿ ಜಾತ್ರೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಸುಕೇಶ್ ಶೆಟ್ಟಿ ಎದಮೇರು ಅವರು ತಿಳಿಸಿದ್ದಾರೆ.
ಬುಧವಾರ ದೇವಸ್ಥಾನದ ವಠಾರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ ಕೆಲಸಗಳು, ಮುಂದೆ ನಡೆಯಬೇಕಾಗಿರುವ ಕೆಲಸಗಳ ಕುರಿತು ಮಾಹಿತಿ ನೀಡಿದರು.
ತ್ರಿಕೂಟ ( ಮೂಜಿಮಲೆ) ಬೆಟ್ಟದ ತಪ್ಪಲಿನಲ್ಲಿ ಪ್ರಕೃತಿ ರಮಣೀಯ ಪ್ರದೇಶದಲ್ಲಿ ನೆಲೆನಿಂತ ಪರಮೇಶ್ವರ ಕ್ಷೇತ್ರ ಇದಾಗಿದ್ದು, ಪರಶುರಾಮ ಮಹರ್ಷಿಯವರ ಶಿಷ್ಯೋತ್ತಮರಾಗಿದ್ದ ಅಂಬರೀಷ ಋಷಿಗಳಿಂದ ಸ್ಥಾಪಿಸಲ್ಪಟ್ಟ ಶಿವಲಿಂಗವೇ ಇಟಲ ಶ್ರೀ ಸೋಮನಾಥೇಶ್ವರ ಎಂಬ ಪ್ರತೀತಿ ಇದೆ.ಅಂಬರೀಷ ಋಷಿಗಳು ಕಾಶಿಯಿಂದ ಕಾಂತಾವರ ಕ್ಷೇತ್ರಕ್ಕೆಂದು ಶಿವಲಿಂಗವನ್ನು ಕೊಂಡೊಯ್ಯುವಾಗ ದಾರಿಮಧ್ಯೆ ವಿಶ್ರಾಂತಿಗೆಂದು ಈ ಜಾಗದಲ್ಲಿ ತಂಗಿದ್ದು ಹಾಗೆ ವಿಶ್ರಮಿಸುವಾಗ ಈಶ್ವರ ದೇವರ ಲಿಂಗವನ್ನು ಒಂದು ಇಟ್ಟೆಲ ಗಿಡದ ಎಲೆಯ ಮೇಲಿಟ್ಟಿರುತ್ತಾರೆ.ಹಾಗೆ ಇರಿಸಿದ ಶಿವಲಿಂಗವನ್ನು ಮತ್ತೆ ಅಲ್ಲಿಂದ ಅಲುಗಾಡಿಸಲಾಗದೆ ಅಲ್ಲಿಯೇ ನೆಲೆನಿಂತ ಕಾರಣದಿಂದ ಈ ಪ್ರದೇಶಕ್ಕೆ ಇಟಲ ಎಂಬ ಹೆಸರು ಬಂತು.
ಈ ದೇವಾಲಯದ ಗರ್ಭಗುಡಿಯ ಸುತ್ತಲೂ ವರ್ಷಪೂರ್ತಿ ನೀರಿನ ಹರಿವು ಇರುವುದು ವಿಶೇಷವಾಗಿದೆ. ಮೂಜಿಮಲೆ ಬೆಟ್ಟದಿಂದ ನೈಸರ್ಗಿಕವಾಗಿ ಹರಿಯುವ ನೀರಿನ ಝರಿಯಿಂದ ವರ್ಷಪೂರ್ತಿ ಜಲಾಭಿಷೇಕ ಹೊಂದುವ ಅಗ್ನಿಗಣಪತಿಯ ಪರಮಸಾನಿಧ್ಯವಿದೆ.ಬಂಡೆಗಳ ನಡುವೆ ಸ್ಥಾಪಿತನಾದ ಈ ಅಗ್ನಿಗಣಪತಿಗೆ ನಿತ್ಯ ನಿರಂತರ ಜಲಾಭಿಷೇಕವಾಗುತ್ತಿದೆ. ಜಲ ಗಣೇಶ ಎಂದೂ ಕರೆಯಲಾಗುತ್ತಿದೆ.
ನಾಗದೇವರ ಸಾನಿಧ್ಯ,ಮಾಗಣೆ ದೈವ ಕುಕ್ಕಿನಂತಾಯ,ಜುಮಾದಿ,ಪಂಜುರ್ಲಿ,ಲೆಕ್ಕೇಸಿರಿ ಮೈಸಂದಾಯ ಹಾಗೂ ಕಲ್ಕುಡ ದೈವಗಳ ಸಾನಿಧ್ಯವಿದೆ.

ಶ್ರೀ ಕ್ಷೇತ್ರವು ಕೊನ್ನಾರ ಮಾಗಣೆಯ ಪಣಪಿಲ, ದರೆಗುಡ್ಡೆ, ಕೆಲ್ಲಪುತ್ತಿಗೆ,ವಾಲ್ಪಾಡಿ, ಮಾಂಟ್ರಾಡಿ, ಶಿರ್ತಾಡಿ, ನೆಲ್ಲಿಕಾರು, ಮೂಡುಕೊಣಾಜೆ ಹಾಗೂ ಪಡುಕೊಣಾಜೆ ಹೀಗೆ ಒಂಭತ್ತು ಗ್ರಾಮಗಳನ್ನೊಳಗೊಂಡಿದೆ.ಅತ್ಯಂತ ಪುರಾತನವಾಗಿರುವ ಈ ದೇವಸ್ಥಾನದಲ್ಲಿ ಮಾಗಣೆಯ ಎಲ್ಲ ಗ್ರಾಮಗಳ ಗ್ರಾಮಸ್ಥರು ಮತ್ತು ಭಕ್ತರ ಒಗ್ಗೂಡುವಿಕೆಯಿಂದ ಜೀರ್ಣೋದ್ಧಾರ ಕೆಲಸಗಳು ಅತ್ಯಂತ ಭರದಿಂದ ನಡೆಯುತ್ತಿದ್ದು ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗುತ್ತಿದೆ ಎಂದವರು ಹೇಳಿದರು.
ಸುಮಾರು ಐದು ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ,ಬ್ರಹ್ಮಕಲಶೋತ್ಸವ ನಡೆಯಲಿದ್ದು ಈಗಾಗಲೇ ಕೆಲವೊಂದು ಕೆಲಸಗಳು ನಡೆದಿದ್ದು ಉಳಿದ ಕೆಲಸಗಳು ನಡೆಯುತ್ತಿದೆ ಎಂದರಲ್ಲದೆ ಬ್ರಹ್ಮಕಲಶೋತ್ಸವ ಸಂಭ್ರಮವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ, ಸುಮಾರು ಐವತ್ತು ಲಕ್ಷ ರೂ.ವೆಚ್ಚದಲ್ಲಿ ಶಾಸಕರ ನಿಧಿಯಿಂದ ರಸ್ತೆ ನಿರ್ಮಾಣವಾಗಲಿದೆ, ಎ.27 ರಂದು ಅಳಿಯೂರಿನಿಂದ ಕ್ಷೇತ್ರದವರೆಗೆ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರೆ ಯ ಲೋಗೋವನ್ನು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಕೆ.ತಿಮ್ಮಯ್ಯ ಶೆಟ್ಟಿ ಹಾಗೂ ಕಾರ್ಯಾಧ್ಯಕ್ಷರಾದ ಸಂತೋಷ್ ಕೆ.ಪೂಜಾರಿ ಅಳಿಯೂರು ಅವರು ಬಿಡುಗಡೆಗೊಳಿಸಿದರು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ವಿಮಲ್ ಕುಮಾರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಆರಿಗ,ಜತೆ ಕಾರ್ಯದರ್ಶಿ ವಿಶ್ವನಾಥ ಕೋಟ್ಯಾನ್, ಅಶ್ವಥ್ ಪಣಪಿಲ,ಮುನಿರಾಜ್ ಹೆಗ್ಡೆ, ದೀಕ್ಷಿತ್ ಪಣಪಿಲ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.