ಬೈಕ್ ನಲ್ಲಿ ಬಂದು ದಾರಿ ಕೇಳುವ ನೆಪದಲ್ಲಿ ಮಾತನಾಡಿ ಮಹಿಳೆಯೋರ್ವರ ಕುತ್ತಿಗೆಯಿಂದ ಕರಿಮಣಿ ಎಗರಿಸಿದ ಘಟನೆ ಸೋಮವಾರ ಬೆಳುವಾಯಿ ಸಮೀಪ ನಡೆದಿದೆ.
ಬೆಳುವಾಯಿ ಗ್ರಾಮದ ಕಾಯಿದೆ ಮನೆಯ ಶ್ರೀಮತಿ ಇಂದಿರಾ ( 70) ಅವರು ಸೋಮವಾರದಂದು ತನ್ನ ಅಳಿಯ ಭಾಸ್ಕರ ಅವರ ಗೃಹಪ್ರವೇಶ ಮುಗಿಸಿಕೊಂಡು ಬೆಳುವಾಯಿ- ಕರಿಯಣಂಗಡಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರು.
ಈ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತ ಯುವಕನೊಬ್ಬ ‘ಬೆಳುವಾಯಿಗೆ ದಾರಿ ಯಾವುದು ‘ ಎಂದು ಮಾತನಾಡಿದ್ದಾನೆ.ಮಾತನಾಡುತ್ತಲೇ ಆಕೆಯ ಕುತ್ತಿಗೆಗೆ ಕೈ ಹಾಕಿ ಕರಿಮಣಿ ಎಳೆದಿದ್ದಾನೆ, ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಯನ್ನು ದೂಡಿಹಾಕಿ ಕರಿಮಣಿ ಎಗರಿಸಿಕೊಂಡು ಹೋಗಿದ್ದಾನೆ.
ನೆಲಕ್ಕೆ ಬಿದ್ದ ಇಂದಿರಾ ಅವರಿಗೆ ಗಾಯಗಳಾಗಿದ್ದು ಕಾರ್ಕಳ ಸ್ಪಂದನಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಯುವಕ ಚಡ್ಡಿ ಮತ್ತು ಹಸಿರು ಬಣ್ಣದ ಶರ್ಟ್ ಹಾಕಿದ್ದನೆನ್ನಲಾಗಿದೆ. ಈ ಬಗ್ಗೆ ಇಂದಿರಾ ಅವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದು ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ತನಿಖೆ ನಡೆಸುತ್ತಿದ್ದಾರೆ. ಕರಿಮಣಿ 3-4 ಪವನಿನದ್ದೆಂದು ಹೇಳಲಾಗಿದೆ.
‘ ಬೆಳುವಾಯಿಗೆ ದಾರಿ ಯಾವುದು’ ಎಂದು ಕೇಳಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಎಗರಿಸಿ ಪರಾರಿಯಾದ ‘ಚಡ್ಡಿದಾರಿ’ ಕಳ್ಳನಿಗೆ ‘ ಜೈಲಿಗೆ ‘ ದಾರಿ ತೋರಿಸಲು ಮೂಡುಬಿದಿರೆ ಪೊಲೀಸರು ಶ್ರಮಿಸುತ್ತಿದ್ದಾರೆ.
