ಕರಾವಳಿ ಜಿಲ್ಲೆಗಳ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಇರುವ ಜಿಲ್ಲೆಯ ಹಿರಿಯ ರಾಜಕಾರಣಿ,ಅಭಿವೃದ್ಧಿ ಚಿಂತನೆಯ ಸಮರ್ಥ ನಾಯಕ ಬೆಳ್ಳಿಪ್ಪಾಡಿ ರಮಾನಾಥ ರೈ ಅವರನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಮಾತುಗಳು ಪ್ರಸ್ತುತ ಚಾಲ್ತಿಯಲ್ಲಿದ್ದು ಶುಕ್ರವಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಭಾಷಣದ ನಂತರವಂತೂ ಈ ಅಭಿಪ್ರಾಯಗಳಿಗೆ ಮತ್ತಷ್ಟು ವೇಗ ಸಿಕ್ಕಿದೆ.
ಸುದೀರ್ಘ ವರ್ಷಗಳ ರಾಜಕೀಯ ಅನುಭವವಿರುವ ರಮಾನಾಥ ರೈ ಅವರು ಬಂಟ್ವಾಳ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದವರು.ಬೇರೆ ಬೇರೆ ಖಾತೆಗಳ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಗಮನಸೆಳೆದು ರಾಜ್ಯಮಟ್ಟದಲ್ಲಿ ಓರ್ವ ಸಜ್ಜನ ರಾಜಕಾರಣಿ ಎಂದು ಗುರುತಿಸಿಕೊಂಡವರು.ಅಧಿಕಾರ ಇದ್ದರೂ ಇಲ್ಲದಿದ್ದರೂ ಅವರಿಗೆ ಅವರದ್ದೇ ಆದ ವರ್ಚಸ್ಸು ಇದೆ. ‘ಬಂಟ್ವಾಳದ ಟೈಗರ್’ ಎಂದೇ ಜನಪ್ರಿಯರಾಗಿರುವ ಅವರಿಗೆ ಬಂಟ್ವಾಳ ಮಾತ್ರವಲ್ಲದೆ ಇಡೀ ಜಿಲ್ಲೆಯಲ್ಲೇ ಅಪಾರ ಅಭಿಮಾನಿಗಳಿದ್ದಾರೆ.ಅದೇ ಕಾರಣಕ್ಕೆ ಅವರ ಮನೆ ಪ್ರತಿದಿನ ಬೆಳಿಗ್ಗೆ ಹೌಸ್ ಫುಲ್ ಆಗೋದು.
ಜಿಲ್ಲೆಯ, ಹೊರ ಜಿಲ್ಲೆಯ ಯಾರು ಹೋದರೂ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಅದಕ್ಕೆ ನ್ಯಾಯ ಒದಗಿಸಿಕೊಡುವ ನಾಯಕತ್ವದ ಗುಣ ಅವರಲ್ಲಿದೆ.
ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದಾರೆ ನಿಜ.ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ ಅವರನ್ನು .ಎಮ್ಮೆಲ್ಸಿ ಮಾಡಿ ಮಂತ್ರಿ ಮಾಡಬೇಕು,ಜಿಲ್ಲಾ ಉಸ್ತುವಾರಿ ನೀಡಬೇಕೆಂಬ ಆಗ್ರಹಗಳು ಕೇಳಿ ಬಂದಿತ್ತು.ಆದರೆ ಇನ್ನು ಅವರಿಗೆ ಈ ಅವಧಿಯಲ್ಲಿ ಮಂತ್ರಿ ಸ್ಥಾನ ಸಿಗೋದು ಡೌಟು.ಈಗಾಗಲೇ ಜಿಲ್ಲೆಯಿಂದ ಐವನ್ ಡಿಸೋಜ ಮತ್ತು ಮಂಜುನಾಥ ಭಂಡಾರಿ ಅವರನ್ನು ಎಮ್ಮೆಲ್ಸಿ ಮಾಡಲಾಗಿದೆ.ಐವನ್ ಡಿಸೋಜ ಅವರು ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.ಮುಖ್ಯಮಂತ್ರಿಯವರ ಆಪ್ತನಾಗಿರುವುದರಿಂದ ಅವರಿಗೆ ಜಿಲ್ಲೆಗೆ ಅನುದಾನ ತರಲು ಗೊತ್ತಿದೆ.ಅದನ್ನೇ ಮಾಡುತ್ತಿದ್ದಾರೆ.
ರಮಾನಾಥ ರೈ ಅವರು ಐದಾರು ಬಾರಿ ಶಾಸಕರಾಗಿ,ಸಚಿವರಾಗಿರುವುದರಿಂದ ಈ ಜಿಲ್ಲೆಯ ಪ್ರತಿ ಮೂಲೆ ಮೂಲೆಯ ಪರಿಚಯ ಅವರಿಗಿದೆ.ಒಂದರ್ಥದಲ್ಲಿ ಇಡೀ ಜಿಲ್ಲೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವ ನಾಯಕ ಅವರು.
ಶುಕ್ರವಾರ ಮಂಗಳೂರಿನಲ್ಲಿ ನಡೆದ ಬಹುಕೋಟಿ ವೆಚ್ಚದ ಪ್ರಜಾ ಸೌಧವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ‘ ಈ ಬಹುಕೋಟಿ ವೆಚ್ಚದ ಅತ್ಯಂತ ಸುಸಜ್ಜಿತ ಮತ್ತು ವಿಶಾಲವಾದ ಸೌಧ ಜಿಲ್ಲೆಯಲ್ಲಿ ನಿರ್ಮಾಣವಾಗಲು ಮೂಲ ಕಾರಣವೇ ರಮಾನಾಥ ರೈ’ ಎಂದು ಓಪನಾಗಿ ಹೇಳಿದ್ದಾರೆ.ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ರಮಾನಾಥ ರೈ ಅವರ ದೂರದೃಷ್ಟಿಯ ಸೌಧ ಶುಕ್ರವಾರ ಉದ್ಘಾಟನೆಗೊಂಡಿದೆ.
ಸದಾ ಕ್ರಿಯಾಶೀಲರಾಗಿ ,ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಚಿಂತನೆ ಹೊಂದಿರುವ ರಮಾನಾಥ ರೈ ಅವರಿಗೆ ಈ ಅವಧಿಯಲ್ಲಿ ದೊಡ್ಡ ಸ್ಥಾನಮಾನ ನೀಡಬೇಕು, ಅವರು ಮತ್ತೆ ಶಾಸಕರಾಗಬೇಕು ಎನ್ನುವ ಹೆಬ್ಬಯಕೆ ಅವರ ದೊಡ್ಡ ಸಂಖ್ಯೆಯ ಅಭಿಮಾನಿಗಳಲ್ಲಿದೆ.
ಮೂರು ಎಮ್ಮೆಲ್ಸಿ ಸ್ಥಾನಗಳು ಖಾಲಿ ಇದ್ದು ಅದಕ್ಕೆ ಈಗಾಗಲೇ ಮೂವರ ಹೆಸರುಗಳೂ ಫೈನಲ್ ಆದಂತಿದೆ.ಹಾಗಾಗಿ ಈ ಅವಧಿಯಲ್ಲಿ ರೈ ಅವರನ್ನು ಮಂತ್ರಿಯನ್ನಾಗಿ ನೋಡುವ ಆಸೆಯನ್ನು ಬಿಟ್ಟುಬಿಡಬೇಕಿದೆ.ಮಂತ್ರಿ ಸ್ಥಾನದಷ್ಟೇ ಪವರ್ ಇರುವ ‘ಕರಾವಳಿ ಅಭಿವೃದ್ಧಿ ಪ್ರಾಧಿಕಾರ’ ದ ಅಧ್ಯಕ್ಷರನ್ನಾಗಿ ಅವರನ್ನು ಆಯ್ಕೆ ಮಾಡಿದ್ದಲ್ಲಿ ಈ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಕಾಣಬಹುದು.













