-ನಿಕ್ಲೊಂದಿಗೆ
*ಅಶ್ರಫ್ ವಾಲ್ಪಾಡಿ
‘ಗೆಜ್ಜೆನಾದ’ ಸಿನೆಮಾದಲ್ಲೊಂದು ಹಾಡಿದೆ.
‘ಸೋಮಾರ ಸಂತೆಗೆ
ಚುಂಚಾಣ ಕಟ್ಟೆಗೆ
ಬಂದಿದ್ದ ಸಂತೆಗೆ’ ….!
ಈ ಹಾಡು ಕೇಳಿದಾಗ ನಮ್ಮೂರ ಸಂತೆ ನೆನಪಾಗುತ್ತದೆ. ಅತ್ಯಂತ ಪಿರಾಕಿನಿಂದಲೂ ಪ್ರತೀ ಸೋಮವಾರದಂದು ಶಿರ್ತಾಡಿ ಸಂತೆ- ನಮ್ಮೂರ ಸಂತೆ ನಡೆಯುತ್ತಾ ಬಂದಿದೆ.ಇಂದು ಸೋಮವಾರ.ಮಾಡಲು ಬೇತೆ ದಾಲ ಕೆಲಸವಿಲ್ಲ..ಒಂದು ರೌಂಡ್ ಸಂತೆಯ ಬಗ್ಗೆ ನಿಮ್ಮೊಂದಿಗೆ ಹೇಳಿಕೊಳ್ಳೋಣ ಅನಿಸಿತು.
ಸಣ್ಣವರಿರುವಾಗ ಅಪ್ಪ ನಮ್ಮನ್ನು ಇದೇ ಸಂತೆಗೆ ಕರೆದುಕೊಂಡು ಹೋಗಿ ಅಲ್ಲಿ ವ್ಯಾಪಾರಕ್ಕೆ ಬರುತ್ತಿದ್ದ ಭಟ್ರ ಜವುಳಿ ಸೆಂಟರ್ ನಿಂದ ನಮಗೆ ನೀಲಿ-ಬಿಳಿ ಪೀಸ್ ತೆಗೆದುಕೊಡುತ್ತಿದ್ದರು.ಅದನ್ನು ಸಿಕ್ವೇರಾ ಟೈಲರ್ ( ಸಿಕೇರಿ ಪೊರ್ಬುಲು) ಅವರ ಸಣ್ಣದಾದ ಅಂಗಡಿಗೆ ಹೊಲಿಗೆಗೆ ಕೊಡುತ್ತಿದ್ದ ನೆನಪು. ಅವರು ಬೀಡಿ ಸೇದುತ್ತಲೇ ಅಳತೆ ಮಾಡುತ್ತಿದ್ದರು.



ನಾರಾವಿಯ ರಮೇಶಣ್ಣನ ತರಕಾರಿ ಇತ್ತು. ಮನೆಯಲ್ಲಿ ಬಡತನ.ಶಾಲೆಬಿಟ್ಟ ನಂತರ ನಾನು ಅವರ ತರಕಾರಿ ರಾಶಿ ಮುಂದೆ ನಿಂತು ‘ ತೌತೆ,ಮುಂಚಿ,ಬದನೆ’ ಅಂತ ಬೊಬ್ಬೆ ಹೊಡೆಯುತ್ತಿದ್ದೆ.ಮನೆಗೆ ಹೋಗುವಾಗ ಒಂದಿಷ್ಟು ತರಕಾರಿ ಕೊಡುತ್ತಿದ್ದರು.
ಅಲ್ಲೇ ಪಕ್ಕದಲ್ಲಿ ಎಕ್ಸ್ ಉಗ್ರಾಣಿ ಅವರು ತಾರಾಯಿ ಮಾರುತ್ತಿದ್ದರು.ಚಿನ್ನಯಣ್ಣನ ಶರ್ಬತ್, ರಾಮಣ್ಣನ ಚಕ್ಕುಳಿ ಅಲ್ಲೂ ಇತ್ತು. ಮೀನು ಮಾರುವವರ ಬೊಬ್ಬೆಯೇ ಬೇರೆ.ಮೀನನ್ನು ತೊಟ್ಟೆಗೆ ದಿಂಜಿಸಿ ಕೊಡುವಾಗ ಅವರು ರಾಗವಾಗಿ ಲೆಕ್ಕ ಮಾಡುತ್ತಿದ್ದದ್ದು ,ಮತ್ತು ‘ರಡ್ಡ್’ ಜಾಸ್ತಿ ಪಾಡಿಯೆ ಅಂತ ಹೇಳುತ್ತಿದ್ದದ್ದು ನೆನಪಿದೆ.ಸಂತೆಗೆ ಎಂಟ್ರಿ ಆಗುವಾಗಲೇ ತೊಟ್ಟೆ ಮಾರುತ್ತಿದ್ದರು-ಗಂಗಸರದ್ದಲ್ಲ, ಪ್ಲಾಸ್ಡಿಕ್ ನದ್ದು.ಅದು ಒಳಗೆ ಹೋಗಿ ಎಲ್ಲಾ ಸಾಮಾನುಗಳನ್ನು ಹಿಡ್ಕೊಂಡು ಬರಲಿ ಎಂಬುದಕ್ಕಾಗಿ.ಮತ್ತೊಬ್ಬರು ಆ ಪುಚ್ಚಮೊಗರುವಿನ ಸಾಯ್ಬರು ಅಲ್ಲಿ ಜೀರಿಗೆ, ಮೆಂತೆ,ಕೊತ್ತಂಬರಿ…. ಹೀಗೆ ಎಲ್ಲ ಐಟಮ್ ಗಳನ್ನು ಸಣ್ಣ ಪ್ಯಾಕೆಟ್ನಲ್ಲಿ ಮಾರುತ್ತಿದ್ದರು.ಕೆಲವು ಸಲ ನಾನೂ ಅವರಿಗೆ ಸಹಾಯ ಮಾಡಿದ್ದೆ- ಏನಾದರೂ ಪೊಡಿಚಿಲ್ಲರೆ ಕೊಡಲಿ ಎನ್ನುವ ಉದ್ದೇಶದಿಂದ !
ವಿಶೇಷವಾಗಿ ನಮ್ಮೂರ ಸಂತೆಗೆ ದೂರದ ಪಣಪಿಲ ಕಡೆಯಿಂದ ಕುಂಬಾರರು ತಾವು ತಯಾರಿಸಿದ ಮಣ್ಣಿನ ಮಡಕೆಗಳನ್ನು ಹೊತ್ತುಕೊಂಡೇ ಬರುತ್ತಿದ್ದರು. ಒಂದು ಬಲವಾದ ಕೋಲಿಗೆ ಕಟ್ಟಿ ಅದನ್ನು ಹೊತ್ತುತರುವುದನ್ನು ನೋಡುವುದೇ ಕುಷಿಯಾಗುತ್ತಿತ್ತು.


ನಮ್ಮಲ್ಲಿ ಗುರ್ಕೆ ಇದ್ದದ್ದು ಅವರದ್ದೇ ತಯಾರಿ.ಮಣ್ಣಿನ ಗುರ್ಕೆಯಲ್ಲಿ ನೀರು ಬಿಸಿ ಮಾಡಿ ಜಳಕ ಮಾಡುತ್ತಿದ್ದ ಕುಷಿ ಈಗ ಅಲಕ್ಕ ಇಲ್ಲದಾಗಿದೆ.ಊಟ ತಿಂಡಿಯ ರುಚಿಯೂ ಹಾಗೆ- ಆವತ್ತಿನ ಮಣ್ಣಿನ ಪಾತ್ರೆಯಲ್ಲಿ ತಯಾರಾಗುತ್ತಿದ್ದ ಪದಾರ್ಥ,ಊಟದ ರುಚಿಯನ್ನು ಈಗಿನ ಯಾವ ಗ್ಯಾಸ್ದಂಡೆಯೂ ಕೊಡಲು ಸಾಧ್ಯನೇ ಇಲ್ಲ.
ನಮ್ಮನೆಯ ಹೊರಗೊಂದು ಮಣ್ಣಿನ ಗುರ್ಕೆ ಇತ್ತು.ತುಂಬಾ ಚಂದ ಇತ್ತು ಮತ್ತು ತುಂಬಾ ವರ್ಷ ಬಾಳಿಕೆ ಬಂದಿತ್ತು.ಅದ್ಯಾವುದೋ ನಾಯಿಗೆಂದು ಬಿಸಾಡಿದ ಒಂದು ಸಣ್ಣ ಕಲ್ಲು ಆ ಗುರ್ಕೆಯ ಚಂದವನ್ನೇ ಕೆಡಿಸಿ ಬಹುಕಾಲ ಚಪ್ಪೆನೀರಲ್ಲೇ ಸ್ನಾನ ಮಾಡುವಂತೆ ಮಾಡಿತ್ತು.ಬಳಿಕ ಬಂದದ್ದು ಅಲ್ಯೂಮಿನಿಯಂ ನದ್ದು. ಈಗಂತೂ ಹೆಚ್ಚಿನವರ ಮನೆಗಳಲ್ಲಿ ಗುರ್ಕೆಗಳೇ ಇಲ್ಲ- ಗೂರ್ಕಾಗಳಿದ್ದಾರೆ !
ಆ ಸುಂದರ ಕಾಯದ ಕುಂಬಾರಣ್ಣರನ್ನು ನೋಡದೆ, ಮಣ್ಣಿನ ಪಾತ್ರೆಗಳನ್ನು ನೋಡದೆ ಅದೆಷ್ಟೋ ಕಾಲ ಕಳೆದಿದೆ.
ಶಿರ್ತಾಡಿ ಸಂತೆಗೆ ಹಲವಾರು ವರ್ಷಗಳ ಇತಿಹಾಸವಿದೆ.ಹೆಚ್ಚಾಗಿ ಯಕ್ಷಗಾನ, ನಾಟಕ ನಡೆಯುತ್ತಿದ್ದದ್ದು ಕೂಡ ಸೋಮವಾರದಂದೇ.ಅಂದರೆ ಆದಿನ ಜನರಲ್ಲಿ ಸ್ವಲ್ಪ ಪೊಡಿಗಾಸು ಒಟ್ಟು ಮಾಡಿರ್ತಾರೆ ಎಂಬ ನಂಬಿಕೆ.
ಸಂತೆ ಎಂದರೆ ಜನರಿಗೊಂದು ಹಬ್ಬದ ವಾತಾವರಣ.ಎಲ್ಲಾ ವಸ್ತುಗಳೂ ಅಲ್ಲಿ ಸಿಗುತ್ತಿತ್ತು. ಒಂದು ಸೀರೆ- ಲಂಗ,ಒಂದು ಅಂಗಿ-ಚಡ್ಡಿ , ಒಂದುವಾರಕ್ಕೆ ಬೇಕಾಗುವಷ್ಟು ತರಕಾರಿ, ಮನೆಗೆ ಬೇಕಾಗುವ ಇತರ ಸಾಮಾಗ್ರಿಗಳನ್ನು ತೆಗೆದುಕೊಳ್ಳಲು ಜನರು ಸಂತೆಗೇ ಹೋಗುತ್ತಿದ್ದರು.
ಸಂಜೆಯಾದಂತೆ ಮತ್ತಷ್ಟು ಅಗ್ಗ.ಮೀನಂತೂ ತೊಟ್ಟೆ ಮತ್ತು ಹೊಟ್ಟೆತುಂಬಾ ಸಿಗುತ್ತಿತ್ತು.ತರಕಾರಿ ಒಮ್ಮೆ ಖಾಲಿಯಾಗಲಿ ಎಂದು ತುಂಬಾನೇ ಕೊಡುತ್ತಿದ್ದರು.ಈಗ ಅಂತಹ ದೃಶ್ಯ ಕಾಣುತ್ತಿಲ್ಲ. ಸಂತೆಯ ವ್ಯಾಪಾರಿಗಳಿಗೆ ಬೀಡಿ ಕಟ್ಟಿದವರ ಮಜೂರಿಯ ಹಣ ಮತ್ತು ಕೂಲಿ ಕೆಲಸಮಾಡಿ ಸಿಗುತ್ತಿದ್ದ ಸಂಬಳದ ಹಣವೇ ಪ್ರಧಾನವಾಗಿತ್ತು.ಈಗ ತರುಭೂತಾಯಿಗೂ,ಕ್ಯಾಬೇಜಿಗೂ ಗೂಗಲ್ ಪೇ ವ್ಯವಸ್ಥೆ ಬಂದಿದೆ.ಮನೆಗೇ ಮುಟ್ಟಿಸುವ ವ್ಯವಸ್ಥೆಯೂ ಇದೆ.
‘ ಸಂತೆ ತಿರ್ಗರೆ ಪೋಯಿನಿ ‘ ಎನ್ನುವ ಮಾತು ಅಂದಿನ ದಿನಗಳಲ್ಲಿ ಕೇಳುತ್ತಿತ್ತು.ಈಗ ಹಾಗೆ ಹೇಳಿದರೆ ‘ ಈ ವಾ ಸಂತೆ ಮಾರಯಾ ‘ ಅನ್ನುವವರೇ ಹೆಚ್ಚು.
ನಮ್ಮೂರ ಸಂತೆಗೆ ಹಿಂದಿನವರೆಲ್ಲಾ ಬಾರದಿರಬಹುದು.ಆದರೆ ಬೇರೆ ಬೇರೆ ಜನರ ಬೇರೆ ಬೇರೆ ವ್ಯಾಪಾರಗಳು ಈಗಿನವರ ಅನುಕೂಲಕ್ಕೆ ತಕ್ಕಂತೆ ಈಗಲೂ ನಡೆಯುತ್ತಿರುವುದು ಹೆಮ್ಮೆಯ ಸಂಗತಿ.
ಶಿರ್ತಾಡಿ ಸಂತೆಯ ಪಕ್ಕದಲ್ಲೇ ನನ್ನ ಮಾವನ ಹೊಟೆಲ್ ಇದ್ದ ಕಾರಣ ಕೆಲವೊರ ಸಜ್ಜಿಗೆ ಬಜಿಲ್,ಗೋಳಿಬಜೆ,ಬನ್ಸ್ ಗೆ ಸಮಸ್ಯೆ ಇರುತ್ತಿರಲಿಲ್ಲ. ಕಿಸೆಯಲ್ಲಿರದಿದ್ರೂ ಬಂಜಿಗೆ ತೊಂದರೆ ಇರಲಿಲ್ಲ.
ಸಂತೆಯೆಲ್ಲಾ ಮುಗಿದ ನಂತರ ಒಂದಿಷ್ಟು ಚಿಲ್ಲರೆ ಗಿರಾಕಿಗಳ ಸಣ್ಣ ಮಟ್ಟಿನ ‘ ಪಿಡ್ಕ್’ ಗಲಾಟೆ ನಡೆಯುತ್ತಿದ್ದದ್ದು ಮತ್ತು ಅದು ಮನೆಸೇರುವ ಮುನ್ನ ರಾಜಿ ಆಗುತ್ತಿದ್ದದ್ದೂ ನೆನಪಿದೆ.
ಪುರುಸೊತ್ತಾದರೆ ಒಂದು ರೌಂಡ್ ಸಂತೆಗೆ ಹೋಗಿ ಬರೋಣ,ಬನ್ನಿ!
ಚಿತ್ರ ಕೃಪೆ: ರಶೀದ್ ವಾಲ್ಪಾಡಿ.













