ಆಗಸ್ಟ್ 18 ರಂದು ತಾಕೊಡೆ ಹೋಲಿ ಕ್ರಾಸ್ ಚರ್ಚ್ ನ ಆರ್ಥಿಕ ಸಮಿತಿಯ ಸದಸ್ಯೆ ಶ್ರೀಮತಿ ಐವಿ ಕ್ರಾಸ್ತಾ ಅವರು ಮೂಡುಬಿದಿರೆ ಪೊಲೀಸ್ ಠಾಣೆಗೊಂದು ಕಂಪ್ಲೇಂಟ್ ಕೊಡ್ತಾರೆ.
ಆ ಕಂಪ್ಲೇಂಟ್ ಪ್ರಕಾರ ತನಿಖೆ ಕೈಗೆತ್ತಿಕೊಂಡ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರಿಗೆ ಅಲ್ಲೊಂದು ಮೋಸ,ವಂಚನೆ ನಡೆದಿರುವುದು ಗೊತ್ತಾಗುತ್ತದೆ. ಆ ಹಿನ್ನೆಲೆಯಲ್ಲಿ ಪ್ರಕರಣದ ಆರೋಪಿ ತಾಕೊಡೆಯ ವಿನೋದ್ ವಾಲ್ಟರ್ ಪಿಂಟೊನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಮಾರು ಹತ್ತು ಲಕ್ಷ ರೂ.ವಂಚನೆಯಾಗಿರುವುದು ಬೆಳಕಿಗೆ ಬರುತ್ತದೆ.
ಅಷ್ಟಕ್ಕೂ ನಡೆದಿರುವುದೇನು?:
ತಾಕೊಡೆ ಚರ್ಚ್ ವ್ಯಾಪ್ತಿಯ ಸುರ್ಲಾಯ್ ನಲ್ಲಿ ವಾಸವಿರುವ ಹೆನ್ರಿ ನೊರೊನ್ಹ ಅವರ ಮಗ ಮರ್ವಿನ್ ನೊರೊನ್ಹ ಎಂಬವರು ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಅದಕ್ಕಾಗಿ ಹಣದ ಅವಶ್ಯಕತೆಯಿತ್ತು.ಈ ವಿಚಾರವಾಗಿ ತಾಕೊಡೆ ಚರ್ಚ್ ಧರ್ಮಗುರುಗಳಾದ ರೆ.ಫಾ.ರೋಹನ್ ಲೋಬೊ ಅವರು ಚರ್ಚ್ ನ ವಾಟ್ಸಾಪ್ ಗ್ರೂಪ್ ಗೆ ಆರ್ಥಿಕ ನೆರವು ಕೋರಿ ಮನವಿ ಮಾಡಿದ್ದರು.ಅದರಲ್ಲಿ ಮರ್ವಿನ್ ನೊರೊನ್ಹ ಅವರ ಎಕೌಂಟ್ ನಂಬರನ್ನೇ ಹಾಕಿದ್ದರು.
ಆದರೆ ಇದೇ ಮನವಿ ಪತ್ರವನ್ನು ತನ್ನ ‘ಫೋಕಸ್’ ಹೆಸರಿನ ವಾಟ್ಸಾಪ್ ಗ್ರೂಪ್ ನಲ್ಲಿ ಹಾಕಿಕೊಂಡ ವಿನೋದ್ ಪಿಂಟೊ ಅಲ್ಲಿ ತನ್ನ ಅಕೌಂಟ್ ನಂಬರನ್ನು ಹಾಕಿಕೊಂಡಿದ್ದ. ಆರ್ಥಿಕ ಸಹಾಯ ಮಾಡುವವರೆಲ್ಲಾ ಮರ್ವಿನ್ ನೊರೊನ್ಹ ಅವರ ಖಾತೆಗೆ ಬದಲಾಗಿ ವಿನೋದ್ ಪಿಂಟೊ ಅವರ ಖಾತೆಗೆ ಹಾಕಿದ್ದರು.



ಈ ವಿಷಯ ಧರ್ಮಗುರುಗಳಿಗೆ ಗೊತ್ತಾಗಿ ಅವರು ‘ಹಣ ದುರುಪಯೋಗವಾಗುತ್ತಿದೆ, ಜಾಗ್ರತೆ ಮಾಡಿ’ ಎಂದು ಚರ್ಚ್ ಗ್ರೂಪ್ ನಲ್ಲಿ ಎಚ್ಚರಿಸಿದ್ದಾರೆ.
ಆ ಸಂದರ್ಭದಲ್ಲಿ ‘ಫೋಕಸ್’ ಗ್ರೂಪ್ ನಲ್ಲಿ ಒಟ್ಟಾಗಿದ್ದ ಸುಮಾರು ಎರಡೂವರೆ ಲಕ್ಷದಲ್ಲಿ ಕೇವಲ 1,13,000 ನ್ನು ಮಾತ್ರ ಮರ್ವಿನ್ ನೊರೊನ್ಹ ಅವರ ಖಾತೆಗೆ ವಿನೋದ್ ಪಿಂಟೊ ಹಾಕಿದ್ದ.



ಆದರೆ ಇನ್ನೂ ಕೂಡಾ ಫೋಕಸ್ ಗ್ರೂಪ್ ನ ಮುಖಾಂತರ ವಿನೋದ್ ಖಾತೆಗೆ ಹಣ ಬರುತ್ತಿರುತ್ತದೆ. ಈ ನಡುವೆ ಐವಿ ಕ್ರಾಸ್ತಾ ಅವರು ದೂರು ನೀಡುತ್ತಾರೆ.ಆರೋಪಿ ವಿನೋದ್ ಪಿಂಟೋನನ್ನು ಬಂಧಿಸಿ ಆತನ ಖಾತೆಯನ್ನು ಪರಿಶೀಲಿಸಿದಾಗ ಜುಲೈ 30 ರ ವರೆಗೆ ಸುಮಾರು 12,50,000 ಲಕ್ಷ ರೂ.ಸಂಗ್ರಹವಾಗಿರುವುದು ಗೊತ್ತಾಗುತ್ತದೆ.ಅಂದರೆ ಈ ಪ್ರಕರಣದಲ್ಲಿ ಸುಮಾರು ಹತ್ತು ಲಕ್ಷ ಚಿಲ್ಲರೆ ಹಣ ದುರುಪಯೋಗವಾಗಿರುವುದು ತಿಳಿದು ಬಂದಿದ್ದು ಮೋಸ,ವಂಚನೆ ಮಾಡಿರುವ ವಿನೋದ್ ಪಿಂಟೊ ವಿರುದ್ಧ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ಅವರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.













