ಏಕೋ ನಮ್ಮೂರ ಗಣೇಶೋತ್ಸವದ ಬಗ್ಗೆ ಹೆಚ್ಚು ಕಡಿಮೆ 45-50
ವರ್ಷಗಳ ಕಾಲದ ಬೆಸುಗೆಯ ಚಿತ್ರಣ ನೀಡಬೇಕೆನಿಸಿದೆ.
ಆಗೆಲ್ಲ
ಈಗಿನಂತೆ
ಪಾಶ್ ಕಾಗದ ಇರಲಿಲ್ಲ.
ದೇವರ ಪ್ರೆಸ್ (ಪುರುಷೋತ್ತಮ ಶೆಣೈ ಅವರನ್ನು ಹಾಗಂತ ಕರೀತಿದ್ರು… ಅರುಣಾ ಪ್ರಿಂಟರ್ಸ್ ಅಂತ ಆ ಪ್ರೆಸ್ಸಿನ ಹೆಸರು – ಅರುಣಾ
ಅವರ ಮಗಳು
ಮೈನ್ ಶಾಲೇಲಿ ನನ್ನ ಸತೀರ್ಥೆ)
ಆಗ ಡಾ|| ಪದ್ಮನಾಭ ಉಡುಪ, ಅರಮನೆ ರಾಜೇಂದ್ರ ಮೊದಲಾಹಿರಿತನ ಅಂತ ನೆನಪು
ಸೊಸೈಟಿ ಸೆಕ್ರೆಟರಿ ಕಾಳಿಂಗ ಪೈ ಅವರೇ ಕಾರ್ಯದರ್ಶಿ
ಆಗೆಲ್ಲ ಮೂರುದಿನಗಳು ಉತ್ಸವ
ಜನತಾ ಹಾಲ್ ನಲ್ಲಿ
ಎರಡನೇ ದಿನ ಮೈನ್ ಹಾಲ್ ನಲ್ಲಿ ಇಡಿ ರಾತ್ರಿ ತಾಳಮದ್ದಳೆ
ಪುಂಡಲೀಕ ಶೆಣೈ ಅವರದೇ ಭಾಗವತಿಕೆ
ನನ್ನ ಗುರುಗಳಾಗಿದ್ದ ವಿದ್ವಾನ್ ಕಾಂತ ರೈಗಳು ಕಾರ್ಕಳದ ವಾಮನ ಪ್ರಭು , ಪೆರ್ಲ ಕೃಷ್ಣಭಟ್ಟರು, ಮಾರೂರು ಮಂಜುನಾಥ ಭಂಡಾರಿ, ಪ್ರಭಾಕರ ಜೋಶಿ (ಆಗಿನ್ನೂ ಡಾಕ್ಟರೇಟ್ ಆಗಿರಲಿಲ್ಲ) ಅಪರೂಪಕ್ಕೆ ಶೇಣಿ , ತೆಕ್ಕಟ್ಟೆ ಮೊದಲಾದ ಕಲಾವಿದರ ಕೂಟಗಳಾಗುತ್ತಿದ್ದವು.
…. ಮತ್ತೆ
ಆಗ ಗಣಪತಿ ವಿಗ್ರಹ ರೂಪಿಸುತ್ತಾ ಇದ್ದವರು
ಮಹಮ್ಮಾಯಿ ದೇವಸ್ಥಾನದ ಎಂ.
ವೈಕುಂಠ ಭಟ್ರು (ಪ್ರೊ.ಎಂ.ರಮೇಶ ಭಟ್ರ ತಂದೆ) ಅವರು 21 ವರ್ಷ ಮೂಡುಬಿದಿರೆ ಗಣಪತಿ ಮೂರ್ತಿ ಮಾಡಿದ್ದರು. ಆಗ ಅವರು ಕೆಲವೇ ಆಯ್ದ ಕಡೆಗಳಿಗೆ ಮೂರ್ತಿ ಮಾಡಿಕೊಡುತ್ತಿದ್ದರೆ
ಅವರ ತಮ್ಮ ಎಂ. ವೇದವ್ಯಾಸ ಭಟ್ರು
30-40 ರಷ್ಟು ಚಿಕ್ಕ ದೊಡ್ಡ ಮೂರ್ತಿ ಮಾಡುತ್ತಿದ್ದರು.
ಮೊದಲ ದಿನ ನಮ್ಮ ಮನೆಯಲ್ಲೇ ಚೌತಿ ಇದ್ದ ಕಾರಣ ನಾನು ಮರುದಿನವೇ ಸಮಾಜ ಮಂದಿರಕ್ಕೆ ಭೇಟಿ.
(ನಮ್ಮ ಮನೆಯ ಚೌತಿಗೆ
ಆಗ ಗಣಪತಿ ಮೂರ್ತಿಯನ್ನು ನಮ್ಮ ಮನೆಯಲ್ಲೇ ತಯಾರು ಮಾಡ್ತಾ ಇದ್ದರು
ಹಿರಿಯರು. ನಮಗೆ ಆಗ
ಆವೆ ಮಣ್ಣನ್ನು ಗುದ್ದಿ ಹದ ಮಾಡುವ ಕೆಲಸವೂ ಇತ್ತು…ಅದರ ಗಮ್ಮತ್ತಿನ ಕಥೆ ಬೇರೆಯೇ ಉಂಟು.)
ತಾಳಮದ್ದಳೆ ಹೇಳಿದೆನಲ್ಲ
ಆಗ ರಾತ್ರಿ ನಾನು ಕೆಲವು ವರ್ಷ ಹಾರ್ಮೋನಿಯಂ ಶ್ರುತಿಗೆ ಕೂತ್ಕೊಳ್ಳುತ್ತ ಇದ್ದೆ.
ನಿದ್ರೆ ಮಾಡಲಾಗದು. ನಿದ್ರೆ ಮಾಡಿದ್ರೆ ಭಾಗವತರು ಪದ್ಯ ಎತ್ತುವಾಗ ಶ್ರುತಿಯವನ ಕಡೆಗೆ ನೋಡ್ತಾ ಇದ್ರು ಮೆಲ್ಲ ಟಕಟಕ ಕೋಲಿನಿಂದ ಹಾರ್ಮೋನಿಯಂ ಪೆಟ್ಟಿಗೆಗೆ ಬಡಿದೆಚ್ಚರಿಸುತ್ತಾ ಇದ್ದರೆನ್ನಿ
ಮೂರನೇ ದಿನ ಮೆರವಣಿಗೆ
ಆಗೆಲ್ಲ ಟ್ಯಾಬ್ಲೊ
ಎಲ್ಲ ಇರಲಿಲ್ಲ.
ಮುಖ್ಯವಾಗಿ ಭಜನೆ
ಓಂ ಗಣೇಶ್
ಶ್ರೀಗಣೇಶ್
ಎಂಬುದೆಷ್ಟು ಪರಿಣಾಮಕಾರಿಯಾಗಿ ಮೊಳಗುತ್ತಿತ್ತೆಂದರೆ
ವೃತ್ತಾಕಾರದಲ್ಲಿ ದೊಡ್ಡ ತಾಳಗಳನ್ನು ಬಡಿಯುತ್ತ ಸಾಗುವಾಗ
ತಾಳಗಳ ಠಣ್ ಠಣ್
ಸದ್ದಿನಲ್ಲಿ
ಗಣೇಶದ
ಣೇ
ಕಾರ ಬೆರೆತು ಹೋಗುವಂತಿತ್ತು. ಜಿ ಎಸ್ ಬಿ ಭಜನಾ ತಂಡದ ಪ್ರಸ್ತುತಿ
ಜೋರಾಗಿತ್ತು.
ಮಂಗಲ ವಾದ್ಯ .ಕೆಲವೇ ಕೆಲವು ಬಗೆಯ ವೇಷಗಳು
ಗ್ಯಾಸ್ ಲೈಟು
ನೆಲದ ಮೇಲೇ ನಡೆದುಕೊಂಡು ಹೋಗುವ ಯಕ್ಷಗಾನದ ವೇಷಗಳು.
ನಾನೂ ವೇಷ ಹಾಕಿದ್ದೆ :
ಯಕ್ಷಗಾನದ ವೇಷಗಳಿಗೆ
ಬೊಕ್ಕಸ ಜಗನ್ನಾಥರಾಯರ ಡ್ರೆಸ್ಸು.
ರಾಜಾರಾಮರ ತಂದೆ ಶ್ರೀನಿವಾಸದಾಸರು
ನನ್ನ ಯಕ್ಷಗುರುಗಳಲ್ಲಿ ಓರ್ವರಾದ ಲಾಡಿ ಕೃಷ್ಣ ಮಾಸ್ಟ್ರು ಎಲ್ಲ ಮೇಕಪ್ಪಿಗೆ
ಬರ್ತಾ ಇದ್ರು
ಚೆಂಡೆಗೆ ಯಾರೂಂತ ನೆನಪಿಲ್ಲ.
ಭಾಗವತರ ತಾಳಕ್ಕೆ ಆಗ
ಈಗಿನ ಪುತ್ತಿಗೆ ಚಿಕ್ಕ ಮೇಳದ ಸಂಪಿಗೆ ಸುರೇಂದ್ರ ಶೆಣೈೆ
(ಆಗ ಅವರು ಸೊಸೈಟೀಲಿ
ತಾತ್ಕಾಲಿಕ ಸಿಬಂದಿ ಆಗಿದ್ರು)
ಗ್ಯಾಸ್ ಲೈಟಿನವರು ಸರೀ ಹಿಡ್ಕೊಂಡ್ರೆ
ನಮ್ಮ ವೇಷ ಕಾಣುತ್ತಿತ್ತು.
ನಮ್ಮಜತೆ ಕಲಾವಿದ ಕ್ರಿಶ್ಚಿಯನ್ ಬಾಬುರವರ ಮಗ
ಕ್ರಿಶ್ಚಿಯನ್ ಗಣೇಶ, ಲಾಡಿ ಕೃಷ್ಣ ಮಾಸ್ಟ್ರ ಮಗ, ಕೊಡ್ಯಡ್ಕ ಸತೀಶ ಬಿ. ಆಚಾರ್ಯ ಮತ್ತಿನ್ಯಾರೋ ಇದ್ದರು
ಸರೀ ನೆನಪಾಗ್ತಾ ಇಲ್ಲ.
ಎರಡು ವರ್ಷ ನಾನು ಹಾಗೆ ವೇಷ ಹಾಕಿದಂತಿದೆ.
ಆಗಿನ ಸಮಿತಿಯಲ್ಲಿ ಸ್ಥಾಪಕ ಸದಸ್ಯರಾಗಿ ನನ್ನ ಚಿಕ್ಕಪ್ಪ ಗೋಪಾಲ ಆಚಾರ್ಯ, ಕೆ.ಜಿ ಪಣಿಕ್ಕರ್, ಗಣೇಶ ನಾಯಕ್, ಕುಲ್ಯಾಡಿ ಕೇಶವ ಪೈ ಎಲ್ಲ ಇದ್ದರೂಂತ ನೆನಪು.
ಆಗ ಭಗವಾಧ್ವಜಾರೋಹಣ ವಂದೇ ಮಾತರಂ ದೇಶಭಕ್ತಿಗೀತೆ ಇದ್ದುದು
ಆ ಪರಂಪರೆ
ಈಗಲೂ ಮುಂದುವರಿದಿದೆ.
ನಾನು ಮನೆಯಲ್ಲೇ ಮೂರ್ತಿ ಮಾಡುವ ಪುತ್ತಿಗೆ ಮನೆ ಪರಂಪರೆಯವನು ಅಂತ ಹೇಳಿದೆನಲ್ಲ….ಅದರ ಸಹಕಾರಿಯಾಗಿದ್ದ ಕೊಂಚ ಅನುಭವಕ್ಕೆ ವಿಸ್ತೃತ ಅವಕಾಶ ಲಭಿಸಿದ್ದೂ
ಮೂಡುಬಿದಿರೆ ಗಣೇಶೋತ್ಸವದ ಮೂಲಕ.
ಚಿಕ್ಕಪ್ಪ ಸ್ಥಾಪಕ ಸದಸ್ಯರಾಗಿರುವಂತೆಯೇ
ಅಮರನಾಥ ಶೆಟ್ಟಿ ಅಧ್ಯಕ್ಷರಾದರು. ಮುಂದೆ
ದಯಾನಂದ ಪೈ ಅವರು ಪದಾಧಿಕಾರಿಯಾಗಿದ್ದಾಗ ನಾನೂ ಸದಸ್ಯನಾಗಿ
ನಮೂದಿಸಲ್ಪಟ್ಟೆ. ಸಾಂಸ್ಕೃತಿಕ ಸ್ಪರ್ಧೆಗಳ ಸಂಯೋಜನೆಯಲ್ಲಿ ಅವರ ಜತೆ ಕೆಲಸ ಮಾಡಿದ್ದೆ.
(ಮರುವರ್ಷ ಸಮಿತಿ ಸದಸ್ಯರ ಪಟ್ಟಿಯಲ್ಲಿ ನಾನು ಮಾಯವಾಗಿದ್ದೆ)
ವೈಕುಂಠ ಭಟ್ಟರ ಬಳಿಕ 4 ವರ್ಷ ಗಣಪತಿ ವಿಗ್ರಹ ಮಾಡುತ್ತಿದ್ದ ಮಹಮ್ಮಾಯಿ ದೇವಳದ ವೇದಭಟ್ರು ನಿಧನ ಹೊಂದಿ ಮುಂದೆ ಯಾರು ಮಾಡುವುದು ಎಂಬ ಪ್ರಶ್ನೆ ಮೂಡಿತು.
ನಮ್ಮ ಮನೆಯಲ್ಲಿ ವಿಗ್ರಹ ತಯಾರಿ ನಿಲ್ಲಿಸಿದ ಬಳಿಕ ಮಹಮ್ಮಾಯಿ ದೇವಳದ ವೇದವ್ಯಾಸ ಭಟ್ರಿಗೆ ಒಪ್ಪಿಸಿ ಆಗಿತ್ತು.
ಅವರ ನಿಧನಾನಂತರ ನಮಗೆ ಒದಗಿ ಬಂದವರು ಎಡಪದವು ಹೈಸ್ಕೂಲಿನ ಡ್ರಾಯಿಂಗ್ ಮಾಸ್ಟರ ಆಗಿದ್ದ ಪುರುಷೋತ್ತಮ ಆಚಾರ್ಯರು.
ಅವರಿಗೇ ಮೂಡುಬಿದಿರೆ ಗಣಪತಿ ವಿಗ್ರಹ ಮಾಡುವ ಕೆಲಸವನ್ನು ವಹಿಸಿಕೊಟ್ಟರೆ ಹೇಗೆ ಎಂಬ ಯೋಚನೆ ಬಂದಿತು. ಅಧ್ಯಕ್ಷ ಅಮರನಾಥರೂ ಒಪ್ಪಿದರು.
ಅದುವರೆಗೆ
ಪುರುಷೋತ್ತಮ ಆಚಾರ್ಯರು
ಅಡ್ಡೂರು, ಕೈಕಂಬ ಮೊದಲಾದ ಕಡೆಗಳ ಗಣಪತಿ ಮೂರ್ತಿ ಮಾಡಿಕೊಡುತ್ತಿದ್ದರು
ಅವುಗಳಿಗಿಂತ ಸ್ವಲ್ಪ ದೊಡ್ಡದೇ ಆದ
ಮೂಡುಬಿದಿರೆ ಗಣಪತಿ ಮಾಡಿಕೊಡುವ ಮೊದಲು ಅವರು
ಗಂಜಿಮಠದ ಭಟ್ರ ಮನೆಯ ಕಾರಣಿಕದ ಗಣಪತಿ ದೇವರಿಗೆ ನಮಿಸಿ ಬಂದರಂತೆ.
ಪೀಠವನ್ನು ಸಣ್ಣ ಟೆಂಪೋ ದಲ್ಲಿ ಒಯ್ದು ಜೀವಂಧರ ಕುಮಾರರ ಮನೆ ಎದುರಿನ ಕಟ್ಟಡದ ಮಾಳಿಗೆಗೆ ತಲುಪಿಸಿ ಬಂದ ಬಳಿಕ
ನಾನೂ ಡ್ರಾಯಿಂಗ್ ಮಾಸ್ಟರರಿಗೆ ಹೆಲ್ಪರ್ ಆಗಿ ಆಗಾಗ ಹೋಗ್ತಾ ಇದ್ದೆ
ಹಗಲು ಕ್ಲಾಸು ಮುಗಿಸಿ ಬಂದ ಬಳಿಕ ಮಾಸ್ಟ್ರ ಕೆಲಸ ಶುರು.
ಆಗಲೆ ನನಗೆ ಟೊಳ್ಳಾದ
ಮೂರ್ತಿ ಮಾಡುವುದು ಹೇಗೆ ಅಂತ ಗೊತ್ತಾದದ್ದು.
(ನಮ್ಮ ಮನೆಯಲ್ಲಿ ಗಟ್ಟಿ ಗಣಪ ಮಾಡುತ್ತಿದ್ದದ್ದು
ಅದು ಹೇಗೆಂದ್ರೆ ಪೀಠದ ಗೂಟಕ್ಕೆ ಬೈಹುಲ್ಲಿನಲ್ಲಿ ಗಣಪತಿಯ ಕರಡು ಸ್ವರೂಪದ ವಿಗ್ರಹ ರೂಪಿಸಿ ಅದರ ಮೇಲೆ ಆವೆ ಮಣ್ಣನ್ನು ಹಂತಹಂತವಾಗಿ ಮೆತ್ತುತ್ತ ಬರುವುದು)
ಡ್ರಾಯಿಂಗ್ ಮಾಸ್ಟ್ರು ದೊಡ್ಡ ಗಾತ್ರದ ಗಣಪತಿಗೆ ಕಚ್ಚೆ ಹಾಕುವುದು ಹೇಗೆ ಅಂತ ಕಲಿಸಿ ಕೊಟ್ರು. ಅದು ಹೇಗೆ ಅಂದರೆ
ಗೋಣಿಯನ್ನು ದಪ್ಪನೆ ಪಾಯಸದಂತೆ ಕಲಸಿದ ಆ ವೆ ಮಣ್ಣಲ್ಲಿ ಮುಳುಗಿಸಿ ಅದನ್ನು ಫ್ಯಾನ್ ಹಾಕಿ ಹದವಾಗಿ ಒಣಗಿಸಿ ಮತ್ತೆ ಗಣಪತಿಗೆ ಉಡಿಸಿ ಶೇಪ್ ಕೊಡುವುದು.
ಬಹಳ ನಾಜೂಕಿನದೂ ಕುತೂಹಲಕಾರಿಯೂ ಆದ ಕೌಶಲವಿದು.
ಆಗೆಲ್ಲ ಜೋರು ಜೋರು ಮಳೆ . ವಿಗ್ರಹ ಒಣಗಲು ಸಮಸ್ಯೆ. ಆಗ ತೆಂಗಿನ ಸಿಪ್ಪೆ ಸುಟ್ಟು ಹೊಗೆ ಹಾಕಿ, ಎರಡೆರಡು ಫ್ಯಾನ್ ಹಾಕಿ ಒಣಗಿಸಲು ಶತಪ್ರಯತ್ನ.
ಮತ್ತೆ ಅಲ್ಲಿಂದ
ಮೂಡುಬಿದಿರೆಗೆ ಸಾಗಿಸುವ ಬಹಳ ಕಷ್ಟದ ಕೆಲಸ.
ಹೀಗೆ ಸುಮಾರು ಆರೇಳು ವರ್ಷ ಕೆಲಸ ಅಲ್ಲಲ್ಲ ಸೇವೆ
ಮಾಡಿದ್ದೆ.
#
2006 ರಲ್ಲಿನ ನನಗೆ ರಾಜ್ಯಮಟ್ಟದ ಹೂಗಾರ್ ಮಾಧ್ಯಮ ಪ್ರಶಸ್ತಿ ಬಂದಾಗ ಗಣೇಶೋತ್ಸವ ಸಮಿತಿಯವರು ನನ್ನನ್ನು
ಸನ್ಮಾನಿಸಿದ್ದಾರೆ.
ಸಾಂಸ್ಕೃತಿಕ ಸ್ಪರ್ಧೆಗಳಲ್ಲೂ ಪಾಲ್ಗೊಂಡಿದ್ದೇನೆ.
. ಎರಡು ಸಲ ಫ್ಯಾನ್ಸಿ ಡ್ರೆಸ್ ನಲ್ಲಿ, ಎರಡು ಸಲ ಸಂಗೀತದಲ್ಲಿ ಬಹುಮಾನ ಗಳಿಸಿದ್ದು ಸವಿನೆನಪು .
ಆಗೆಲ್ಲ
ವೇದಿಕೆ ಏರಿದಾಗ ಆಗಿನ ಪ್ರಧಾನ ಕಾರ್ಯದರ್ಶಿ ಈಗಿನ ಟ್ರಸ್ಟ್ ನ ನೂತನ
ಅಧ್ಯಕ್ಷರಾದ ನಾರಾಯಣ್ ಪಿ .ಎಂ. ಕಣ್ಣರಳಿಸಿ ,
ಹೇ, ನಿಮ್ ಗಾ ಬಹುಮಾನಾ?
ಎಂದರಲ್ಲ
ಆಗ ನಾನು ಮುಖವರಳಿಸಿ ಹೇಳಿದೆ-
“ಹೌದು, ನನಗೆ!”
#
ಪತ್ರಕರ್ತನಾಗಿ ಸಮಿತಿ ಜತೆಗೆ ಸಹಕರಿಸುತ್ತ ಬಂದಿರುವುದು ವೃತ್ತಿಧರ್ಮದ ಒಂದು ಭಾಗವೇ ಆಗಿದೆ.
ನಾರಾಯಣರು ಪ್ರಧಾನ ಕಾರ್ಯದರ್ಶಿಯಾಗಿ ತನ್ನದೇ ಹೊಸ ವಾಹನದಲ್ಲಿ ವಿರಾಜಮಾನ ಗಣಪತಿಯನ್ನು ಸುಕ್ಷೇಮವಾಗಿ ಮಾನಸ ಗಂಗೋತ್ರಿಯತ್ತ ಸಾಗಿಸೋ ಸಾರಥಿಯಾಗಿ 38?
ವರುಷಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ ಬಂದವರು.
ಅದೇ ನಾರಾಯಣ್ ಪಿ.ಎಂ.
ಈಗ ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ನ
ಚುಕ್ಕಾಣಿ ಹಿಡಿದ ಸಾರಥಿ
ಅಂದರೆ
ಅಧ್ಯಕ್ಷ!
(ಇದು 31 – 8-25 ರಂದು
ನೆನಪಿದ್ದಷ್ಟು ಮತ್ತು ತೋಚಿದಷ್ಟು ಸಂಗತಿಗಳು.
ಖಂಡಿತಾ ಅಪೂರ್ಣ)
ಧನಂಜಯ ಮೂಡುಬಿದಿರೆ
moodbidrinews@gmail.com
9448726972





