ಮಕ್ಕಿ ಇಸ್ಮಾಯಿಲ್ ‘ಸ್ನೇಕ್ ಮಾಸ್ಟರ್’ ಆದ ಕಥೆ ! *ಯಾವ ಸಂದರ್ಭದಲ್ಲೂ ಧಾವಿಸುವ ಆಪತ್ಬಾಂಧವ

Picture of Namma Bedra

Namma Bedra

Bureau Report

ಇಸ್ಮಾಯಿಲ್. ಹಾಗಂತ ತುಂಬಾ ಮಂದಿ ಇದ್ದಾರೆ. ಸ್ನೇಕ್ ಮಾಸ್ಟರ್ ಅಂದರೆ ಥಟ್ಟನೆ ಗಡ್ಡದಾರಿ ಯುವಕನೋರ್ವನ ಮುಖ ಕಣ್ಣಮುಂದೆ ಬರುತ್ತದೆ.
ಈತ ಸ್ನೇಕ್ ಮಾಸ್ಟರ್, ಆಪತ್ಬಾಂಧವ,ಸಮಾಜ ಸೇವಕ..ಜೊತೆಗೆ ಕಠಿಣ ಪರಿಶ್ರಮಿ- ಹೀಗೆ ಎಲ್ಲವೂ ಹೌದು.
ಈತನ ಬಗ್ಗೆ ನನಗೆ ಈತನ ಬಾಲ್ಯದಿಂದಲೇ ಗೊತ್ತು. ಬಾಲ್ಯದಲ್ಲಿ ಒಂದಿಷ್ಟು ಪೋಕರಿ ಹುಡುಗ.ಅದು ಸರ್ವೇ ಸಾಮಾನ್ಯ.ಆದರೆ ಅದೆಷ್ಟು ಪೋಕರಿತನ ಇದ್ದರೂ,ಅದೆಷ್ಟು ದೊಡ್ಡ ಕ್ರಿಕೆಟ್ ಆಟವಿದ್ದರೂ ಮಧ್ಯಾಹ್ನದವರೆಗೆ ಯಾವುದಾದರೂ ಒಂದು ಕೆಲಸಮಾಡಿಕೊಂಡು ಒಂದಿಷ್ಟು ಸಂಪಾದನೆ ಮಾಡುತ್ತಿದ್ದ ಕಠಿಣ ಪರಿಶ್ರಮಿ.ಆಟ- ಕೂಟ ಅದೆಲ್ಲಾ ಏನಿದ್ದರೂ ತನ್ನ ಕೆಲಸ ಆದ ನಂತರವೇ.ನನಗೆ ಈತನ ವ್ಯಕ್ತಿತ್ವ ಇಷ್ಟ ಆದದ್ದೇ ಇದೇ ಕಾರಣಕ್ಕೆ.


ಮೂಲತಃ ಶಿರ್ತಾಡಿ ಸಮೀಪದ ಮಕ್ಕಿಯ ನಿವಾಸಿಯಾಗಿರುವ ಇಸ್ಮಾಯಿಲ್ ದಿ.ಅಬ್ದುಲ್ಲಾ- ಝುಬೈದಾ ದಂಪತಿಯ ಪುತ್ರ. ಪ್ರಸ್ತುತ ಅಡ್ಡೂರು ನಿವಾಸಿ.
ಕೆಲಸ, ವ್ಯಾಪಾರ, ವ್ಯವಹಾರ ಹೀಗೆಲ್ಲಾ ಬೆಳೆಯುತ್ತಲೇ ಹೋದ ಹುಡುಗ ಇದೀಗ ಇಡೀ ಜಿಲ್ಲೆಯಲ್ಲಿ ಆಪತ್ಬಾಂಧವನೆಂದು ಗಮನಸೆಳೆಯುತ್ತಿರುವುದು ನಮ್ಮೂರ ಹೆಮ್ಮೆ.
ಈತನ ಬಗ್ಗೆ ಅದ್ಯಾರು,ಅದೇನು ಹೇಳಿದರೂ ನಾನು ಕ್ಯಾರ್ ಮಾಡುವವನಲ್ಲ.ಯಾಕೆಂದರೆ ನನಗೆ ಈತನ ಬಗ್ಗೆ ಗೊತ್ತಿದೆ,ಈತನ ಸಾಹಸ,ಶ್ರಮದ ಬಗ್ಗೆ ಅರಿವಿದೆ.
ಈವರೆಗೆ ಸುಮಾರು 330 ರಷ್ಟು ವಿಷಕಾರಿ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವ ಮೂಲಕ ಜನರಿಗೆ ಉಪಕಾರ ಮಾಡಿರುವುದು ಸಣ್ಣ ಸಂಗತಿಯಲ್ಲ.
ಹಾವುಗಳನ್ನು ಕಂಡರೆ ದೂರ ಓಡುವ ಜನರಿದ್ದಾರೆ.ಅದರಲ್ಲೂ ನಾಗರಹಾವುಗಳನ್ನು ಕಂಡರೆ ಇನ್ನೂ ದೂರ ಸರಿಯುವವರೇ ಹೆಚ್ಚು. ಅಂತಹ ಸಂದರ್ಭಗಳಲ್ಲಿ ಪಕ್ಕನೇ ನೆನಪಾಗೋದೇ ಈ ಇಸ್ಮಾಯಿಲ್.


ಅದೆಷ್ಟು ರಾತ್ರಿಯಾಗಲಿ,ಹಗಲಾಗಲಿ- ತನ್ನೆಲ್ಲಾ ಕೆಲಸಕಾರ್ಯಗಳನ್ನು ಬದಿಗೊತ್ತಿ ಕೂಡಲೇ ಧಾವಿಸಿಬಂದು ಆಪತ್ಬಾಂಧವನಾಗುವುದು ಇಸ್ಮಾಯಿಲ್ ಅವರ ಗುಣ.
ಯಾರಲ್ಲೂ ದುಡ್ಡಿಗಾಗಿ ಅಪೇಕ್ಷೆಪಟ್ಟವನಲ್ಲ, ಕೊಟ್ಟದ್ದನ್ನು ತಕೊಂಡು ಹೋಗುವ ವ್ಯಕ್ತಿತ್ವ.
ಸುಮಾರು ಎರಡು ದಶಕಗಳಿಂದ ಈ ಕೆಲಸ ಮಾಡುತ್ತಿರುವ ಇಸ್ಮಾಯಿಲ್ ತಾನು ಈವರೆಗೆ ಹಿಡಿದ ಹಾವುಗಳ ಸಂಖ್ಯೆ 330 ರಷ್ಟಾಗಬಹುದೆನ್ನುತ್ತಾರೆ.
ನಿಮಗೆ ಗೊತ್ತಿರಲಿ, ಹಾವು ಹಿಡಿಯಲು ಅಥವಾ ಓಡಿಸಲು ಎಲ್ಲರಿಂದಲೂ ಸಾಧ್ಯವಿಲ್ಲ.ವಿಷಕಾರಿ ಹಾವುಗಳನ್ನು ಹಿಡಿಯೋದೂ ಒಂದು ಕಲೆ.
ತನ್ನ ನೆರೆಮನೆಗೆ ಬಂದಿದ್ದ ಹಾವೊಂದನ್ನು ಹಿಡಿಯುವ ಮೂಲಕ ‘ ಸ್ನೇಕ್ ಮಾಸ್ಟರ್’ ಆದ ಇಸ್ಮಾಯಿಲ್ ಈ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಹಾವು ಹಿಡಿಯುವ ಮೂಲಕ ಗಮನಸೆಳೆದಿದ್ದಾರೆ.


ಜಾವಗಲ್ ಬಾಬಾ ಅವರ ಆಶೀರ್ವಾದ ಇದೆ ಎನ್ನುವ ಇಸ್ಮಾಯಿಲ್ ಅವರು ಹಾವುಗಳು ಯಾರಿಗೂ ತೊಂದರೆ ಮಾಡುವುದಿಲ್ಲ, ಅವುಗಳಿಗೆ ತೊಂದರೆಯಾದಾಗ ಮಾತ್ರ ಅವುಗಳು ತೊಂದರೆ ಮಾಡುತ್ತದೆ,ಅವುಗಳನ್ನು ಚಾಣಾಕ್ಷತನದಿಂದ ಹಿಡಿಯಲೂ ಧೈರ್ಯಬೇಕೆನ್ನುತ್ತಾರೆ.
ಸ್ನೇಕ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸುವ ಜೊತೆಗೇ ಅದೆಷ್ಟೋ ಬಡಜನರಿಗೆ,ಬಡ ರೋಗಿಗಳಿಗೆ ತಮ್ಮ ವಾಟ್ಸಾಪ್ ಗ್ರೂಪ್ ಮೂಲಕ ನೆರವಾಗಿದ್ದಾರೆ. ಯಾವುದೇ ಜಾತಿ ಬೇಧ ಮಾಡದೆ ಸರ್ವರನ್ನೂ ಸಮಾನವಾಗಿ ಕಂಡು ತನ್ನ ಸಾಮಾಜಿಕ ಸೇವೆಯನ್ನು ಮಾಡುತ್ತಲೇ ಬಂದಿದ್ದಾರೆ‌.ಬಹುಷ: ದೇಶದ ಉದ್ದಗಲಕ್ಕೂ ಸಂಚರಿಸಿದ ಅನುಭವಿ.ದೇಶದ ಹೆಚ್ಚಿನ ಮಸೀದಿ, ದರ್ಗಾಗಳನ್ನು ಸಂದರ್ಶಿಸಿದ ಅಪರೂಪದ ವ್ಯಕ್ತಿ.
ಸದಾ ಸಾಮಾಜಿಕ ಕಳಕಳಿಯ ಚಿಂತನೆ ಹೊಂದಿರುವ ಇಸ್ಮಾಯಿಲ್ ಓದಿದ್ದು ಕಡಿಮೆ.ಆದರೆ ಸಣ್ಣ ಪ್ರಾಯದಲ್ಲೇ ಅಪಾರ ಜ್ಞಾನ ಉಳ್ಳವ.ಒಮ್ಮೆಗೆ ಅದ್ಯಾವ ರಾಷ್ಟ್ರದ ಪ್ರಧಾನಿ ಬಂದರೂ ಅವಕಾಶ ಸಿಕ್ಕರೆ ಮಾತನಾಡಬಲ್ಲ ತಾಕತ್ತಿನ ಮನುಷ್ಯನೀತ.
ನಮ್ಮ ಸಮಾಜ, ಆಡಳಿತದವರು ಇಂತಹ ಸಮಾಜಸೇವಕರನ್ನು ಗುರುತಿಸಿ ಪ್ರೋತ್ಸಾಹಿಸಬೇಕೇ ಹೊರತಾಗಿ ಅರ್ಜಿ ಹಾಕಿದವರನ್ನಲ್ಲ.
ಸ್ನೇಹಿತ ಇಸ್ಮಾಯಿಲ್ ಅವರ ಸಾಮಾಜಿಕ ಸೇವೆ ಮುಂದುವರಿಯಲಿ, ಆತನಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ.
– ಅಶ್ರಫ್ ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top