ಪುರಸಭಾ ಆಡಳಿತದ ಐದು ವರ್ಷದ ಅವಧಿ ನವೆಂಬರ್ 7 ಕ್ಕೆ ಮುಕ್ತಾಯಗೊಳ್ಳಲಿದೆ. ಆದರೆ ಅದರ ನಡುವಿನಲ್ಲಾದ ಹದಿನಾರು ತಿಂಗಳ ಗ್ಯಾಪ್ ಸರಿತೂಗಿಸಲು ಅದೇ ಹದಿನಾರು ತಿಂಗಳ ಅವಧಿಗೆ ಆಡಳಿತ ಮುಂದುವರಿಸಲು ಅನುಮತಿ ನೀಡಬೇಕೆಂದು ಕೋರಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆಂದು ತಿಳಿದು ಬಂದಿದೆ.
ಪುರಸಭಾ ಚುನಾವಣೆ ನಡೆದು ಮೊದಲ ಅರ್ಧಾವಧಿಯ ಆಡಳಿತಕ್ಕೆ ಯಾವ ಸಮಸ್ಯೆಯೂ ಆಗಿರಲಿಲ್ಲ. ಆದರೆ ಎರಡನೇ ಅವಧಿಯ ಸಂದರ್ಭದಲ್ಲಿ ಕೆಲವೊಂದು ಸಮಸ್ಯೆಗಳಿಂದಾಗಿ ಮೀಸಲಾತಿ ಪ್ರಕಟಗೊಳ್ಳದೆ ಸುಮಾರು ಹದಿನಾರು ತಿಂಗಳು ವಿಳಂಬವಾಗಿತ್ತು.ಈ ಸಂದರ್ಭದಲ್ಲಿ ಆಡಳಿತ ಇಲ್ಲದೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿತ್ತು.
ಇದರಿಂದಾಗಿ ಎರಡನೇ ಅವಧಿಯವರಿಗೆ ಮತ್ತು ಪುರಸಭಾ ಸದಸ್ಯರಿಗೂ ಪೂರ್ಣಾವಕಾಶ ಸಿಕ್ಕಿಲ್ಲ. ಎರಡನೇ ಅವಧಿಯಲ್ಲಿ ಆಡಳಿತ ನಡೆಸಲು ಅವಕಾಶ ಸಿಕ್ಕಿದ್ದು ಕೇವಲ 14 ತಿಂಗಳು ಮಾತ್ರ.ಹಾಗಾಗಿ ಅಂದು ನಷ್ಟಗೊಂಡಿದ್ದ ಹದಿನಾರು ತಿಂಗಳ ಆಡಳಿತಾವಧಿಯನ್ನು ಮುಂದುವರಿಸಿ ಪೂರ್ಣ ಆಡಳಿತ ನಡೆಸಲು ಅವಕಾಶ ನೀಡಬೇಕೆಂದು ಕೋರಿ ಮೂಡುಬಿದಿರೆ ಮಾತ್ರವಲ್ಲದೆ ರಾಜ್ಯದ ಹೆಚ್ಚಿನ ಪುರಸಭೆ,ನಗರಸಭೆಗಳ ಸದಸ್ಯರು ನ್ಯಾಯಾಲಯಕ್ಕೆ ಹೋಗಿರುವುದಾಗಿ ತಿಳಿದು ಬಂದಿದೆ.
ಒಂದುವೇಳೆ ನ್ಯಾಯಾಲಯವು ಸಮ್ಮತಿಸಿದ್ದಲ್ಲಿ ಪುರಸಭಾಡಳಿತ ಮುಂದುವರಿಯಲಿದೆ, ಇಲ್ಲವಾದಲ್ಲಿ ನವೆಂಬರ್ 7 ಕ್ಕೆ ಲಾಸ್ಟ್.





