ಮೂಡುಬಿದಿರೆ ಪುರಸಭಾ ವ್ಯಾಪ್ತಿಯೊಳಗಿನ ಅಂದರೆ ಮುಖ್ಯ ರಸ್ತೆಗಳಲ್ಲೇ ಕಾಣುವ ಕೆಲವೊಂದು ಅಪಾಯಕಾರಿ ಹೊಂಡ ಗುಂಡಿಗಳು ನೃತ್ಯ ಬರುತ್ತಿರುವ ಮಳೆಯಿಂದಾಗಿ ಮತ್ತಷ್ಟು ಅಪಾಯಕಾರಿಯಾಗಿದೆ.
ಇಲ್ಲಿ ರಸ್ತೆಯಲ್ಲಿ ಗುಂಡಿ ಇದೆಯೋ, ಗುಂಡಿಮೇಲೆನೇ ರಸ್ತೆ ಇದೆಯೋ ಗೊತ್ತಾಗುತ್ತಿಲ್ಲ.ಈ ತಿಂಗಳಾಂತ್ಯದೊಳಗೆ ಈ ರಸ್ತೆಗಳನ್ನು ಸರಿಪಡಿಸಿ ಜನ ಸಂಚಾರಕ್ಕೆ ಅನುಕೂಲ ಮಾಡಿ ಕೊಡದಿದ್ದಲ್ಲಿ ಬಸ್ ಸಿಬ್ಬಂದಿಗಳ ಸಹಿತ ಸಾರ್ವಜನಿಕರು ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದೇವೆ ಎಂದು ಸಾಮಾಜಿಕ ಕಾರ್ಯಕರ್ತ, ಬಸ್ ಏಜೆಂಟ್ ಸಂತೋಷ್ ಶೆಟ್ಟಿ ಕೊಡಂಗಲ್ ಅವರು ಎಚ್ಚರಿಸಿದ್ದಾರೆ.


ಬೆದ್ರ ಪೇಟೆಯ ಸುತ್ತಮುತ್ತಲಿನ ಕೆಲವು ರಸ್ತೆಗಳ ಪರಿಸ್ಥಿತಿ ಹಾಗೇ ಇದೆ. ಹೊರಗಿನಿಂದ ಬಂದವರು ಇಲ್ಲಿನ ಪುರಸಭಾಡಳಿತಕ್ಕೆ ಬಯ್ಯುತ್ತಾ ಹೋಗುತ್ತಾರೆಯೇ ವಿನಹ ಶಬ್ಬಾಸ್ ಅಂತ ಹೇಳುವುದಿಲ್ಲ.
ಉದಾಹರಣೆಗೆ ಬಸ್ ಸ್ಟಾಂಡಿನಿಂದ ಇಳಿದು ಇರುವೈಲು ರಸ್ತೆಗೆ ಹೋಗುವಾಗ ಜೋಯ್ ಹೋಟೆಲ್ ಎದುರು ಇರುವ ದೊಡ್ಡ ಗುಂಡಿಯೊಂದೇ ಸಾಕು ಇಲ್ಲಿನ ಡೆವಲಪ್ಮೆಂಟ್ ಗೆ ಸಾಕ್ಷಿ ನುಡಿಯಲು.!
ಇದೇ ಗುಂಡಿಗೆ ದ್ವಿಚಕ್ರ ವಾಹನದವರು ಬಿದ್ದು ಸಣ್ಣಪುಟ್ಟ ಗಾಯ ಮಾಡಿಕೊಂಡು ಎದ್ದು ಹಿಂಭಾಗವನ್ನು ಒರೆಸಿಕೊಂಡು ಹೋದ ಅನೇಕ ಉದಾಹರಣೆಗಳಿದೆ. ವಾಹನ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ.ವಿಶೇಷವೆಂದರೆ ಪಕ್ಕದಲ್ಲೇ ಪುರಸಭಾ ಕಚೇರಿ ಇದ್ದು ಅಲ್ಲಿಗೆ ಹೋಗುವ ಸಿಬ್ಬಂದಿಗಳಿಗೆ ಈ ರಸ್ತೆಯ ಪರಿಚಯವಿದ್ದರೂ ನೋಡದಂತೆ ಹೋಗುತ್ತಾರೆ.


ಇನ್ನು ಪೇಟೆಯ ಸುತ್ತಮುತ್ತ ಕೆಲವು ರಸ್ತೆಗಳಲ್ಲೂ ದೊಡ್ಡ ಸೈಜಿನ, ಸಣ್ಣ ಸೈಜಿನ ಹೊಂಡ ಗುಂಡಿಗಳಿವೆ.ಅವೆಲ್ಲಾ ಯಾರು ಸಿಗುತ್ತಾರೆಂದು ಬಾಯ್ತೆರೆದೇ ಇದೆ.

ಪೇಟೆ ಹೊರಗೆ ಅಂದರೆ ಪುರಸಭಾ ವ್ಯಾಪ್ತಿಯ ರಸ್ತೆಗಳ ಗುಂಡಿಗಳನ್ನು ಲೆಕ್ಕ ಮಾಡುತ್ತಾ ಹೋದರೆ ನೂರು ಪುಟದ ಒಂದು ಗೆರೆ ಪುಸ್ತಕ ಬೇಕಾಗಬಹುದು.ಎಲ್ಲವೂ ಅಪಾಯಕಾರಿ ರಸ್ತೆಗಳೇ.
ಈಗ ಡಾಮಾರು ಹಾಕಿದರೆ ಉಳಿಯುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು.ಆದರೆ ಗುಂಡಿಗಳನ್ನು ಸಮತಟ್ಟುಗೊಳಿಸಿ ಜನ, ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬಹುದಲ್ಲವೇ ಎನ್ನುವುದು ಪ್ರಶ್ನೆ.
ಇದೇ ರಸ್ತೆಗಳ ಹೊಂಡಗುಂಡಿಗಳ ಬಗ್ಗೆ ಪುರಸಭೆಯಲ್ಲಿ ಚರ್ಚೆ ನಡೆದು ಆ ಸಭೆಗೆ ಬಂದಿದ್ದ ಉಮಾನಾಥ ಕೋಟ್ಯಾನ್ ಅವರು ಕೂಡಲೇ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದ್ದರು.ಅಂದು ಉಪಸ್ಥಿತರಿದ್ದ ಇಂಜಿನಿಯರ್ ತಲೆಯಾಡಿಸಿ ಹೋಗಿದ್ದರೇ ವಿನಹ ಮತ್ತೆ ಇತ್ತ ತಲೆಹಾಕಿಲ್ಲ.
ಸಾರ್ವಜನಿಕ ಸಂಚಾರಕ್ಕೆ ಅಯೋಗ್ಯವಾಗಿರುವ ಈ ರಸ್ತೆಗಳನ್ನು ಈ ತಿಂಗಳ ಅಂತ್ಯದೊಳಗೆ ಸರಿಪಡಿಸದಿದ್ದಲ್ಲಿ ಒಂದು ದೊಡ್ಡ ಪ್ರತಿಭಟನೆ ಆಗುವುದಂತೂ ನಿಗಂಟ್ !










