ಆ ಮೂರು ತಿಂಗಳ ಹಸುಗೂಸಿಗೆ ಗೊತ್ತಿಲ್ಲ..ಬಿಸಿಯಪ್ಪುಗೆಯ ಮಮತೆಯ ಮಡಿಲು ತನ್ನ ಸ್ವಂತ ತಾಯಿಯದ್ದಲ್ಲವೆಂದು, ಆ ತಾಯಿಗೂ ಆ ಸಂದರ್ಭದಲ್ಲಿ ಗೊತ್ತಾಗಲಿಲ್ಲ- ಇದು ತನ್ನ ಸ್ವಂತ ಮಗುವಲ್ಲವೆಂದು. ಅಲ್ಲಿ ಕಂಡುಬಂದದ್ದು ಹೆಣ್ಣೋರ್ವಳ ತಾಯ್ತನದ ಪ್ರೀತಿ ಮತ್ತು ಮನುಕುಲದ ಪಾಠ.


ಮಗು ಯಾರದ್ದಾದರೇನು ? ಯಾವ ಧರ್ಮದವರದ್ದಾದರೂ ಏನು ? ಮಗುವಿಗೆ ಧರ್ಮ ಗೊತ್ತಾಗಲ್ಲ,ಜಾತಿ ಗೊತ್ತಾಗಲ್ಲ..ಅದಕ್ಕೆ ಬೇಕಿರುವುದು ಅಮ್ಮ ಮತ್ತು ಅಮ್ಮನ ಬಿಸಿಯಪ್ಪುಗೆಯ ಎದೆಹಾಲೆನ್ನುವ ಅಮೃತ.
ಇಲ್ಲಿ ಚಂದ್ರಪ್ರಭಾ ಎಂಬ ತಾಯಿ ಅದನ್ನೇ ಮಾಡಿದ್ದಾಳೆ, ಹೆಣ್ಣೋರ್ವಳು ಮಾಡಬೇಕಾದ ಕೆಲಸವನ್ನು ಮಾಡಿ ಮಾದರಿಯಾಗಿದ್ದಾಳೆ,ಮನುಕುಲದ ಪಾಠ ಹೇಳಿಕೊಟ್ಟು ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ಧಿಯಾಗಿದ್ದಾಳೆ. ಆಕೆ ಮಾಡಿದ್ದು ತಾಯಿ ಮತ್ತು ತಾಯ್ತನದ ಕೆಲಸವೇ ಹೊರತು ಇಷ್ಟೊಂದು ಸುದ್ಧಿಯಾಗಬೇಕೆಂಬ ಯೋಚನೆಯಿಂದಲ್ಲ.
ಪುತ್ತೂರು ಸಮೀಪ ಅಪಘಾತವೊಂದು ಸಂಭವಿಸಿ ಮಹಿಳೆಯರಿಗೆ, ಗಂಡಸರಿಗೆ ಎಂದು ಗಾಯಗಳಾಗಿ ಆಸ್ಪತ್ರೆ ಸೇರಿದ್ದರು. ಅಪಘಾತಗೊಂಡ ವಾಹನದಲ್ಲಿ ಈ ಮೂರು ತಿಂಗಳ ಹಸುಗೂಸೂ ಇತ್ತು.ಅದಕ್ಕೂ ಸಣ್ಣಮಟ್ಟಿನ ಗಾಯಗಳಾಗಿ ಕಿರುಚಾಡುತ್ತಿತ್ತು.ಅದೇ ಸಂದರ್ಭದಲ್ಲಿ ಆ ದಾರಿಯಾಗಿ ಹೋಗುತ್ತಿದ್ದ ಚಂದ್ರಪ್ರಭಾ ಎಂಬ ತಾಯಿ ಈ ಮಗುವನ್ನು ಕಂಡು ಮಗುವಿಗೆ ಆ ಸಂದರ್ಭದಲ್ಲಿ ಬೇಕಾದದ್ದೇನೆಂದು ಗೊತ್ತಾಗಿದೆ.ಗಂಡಸರ ಕೈಯಲ್ಲಿ ಯಾಕೋ ಇರಲು ಕೇಳದೆ ಅಳುತ್ತಿದ್ದ ಮಗವಿನ ಬಯಕೆ ಈ ತಾಯಿಗೆ ಅರ್ಥವಾಗಿದೆ.
ಮಗುವನ್ನು ಎತ್ತಿಕೊಂಡು ತನ್ನೆದೆಗಪ್ಪಿಕೊಂಡಾಗ ಮಗು ಅಳು ನಿಲ್ಲಿಸಿದೆ.ಅದು ತನ್ನ ತಾಯಿಯೆಂದೇ ತಿಳಿದುಕೊಂಡಿದೆ.
ಮತ್ತೆ ಅದೇ ಚಂದ್ರಪ್ರಭಾ ಮಗುವನ್ನು ಅಂಬುಲೆನ್ಸಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.ಚಿಕಿತ್ಸೆಗಾಗಿ ಮಗುವನ್ನೆತ್ತಿಕೊಂಡು ಓಡಾಡಿದ್ದಾರೆ.ಮಗುವಿಗೆ ಬೇಕಾದ ಹಾಲುಣಿಸುವ ಕೆಲಸ ಮಾಡಿ ತಾಯ್ತನ ಮೆರೆದಿದ್ದಾರೆ.
ಮಗು ಆರೋಗ್ಯವಾಗಿದೆ ಎಂದು ನಿಟ್ಟುಸಿರುಬಿಟ್ಟು ಮಗುವನ್ನು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅದರ ತಾಯ ಕೈಗಿಟ್ಟಾಗಲೇ ಇತರರಿಗೆ ಗೊತ್ತಾದದ್ದು ಆ ಮಗು ಚಂದ್ರಪ್ರಭಾ ಅವರದ್ದಲ್ಲವೆಂದು.
ಒಂದು ಸಾರ್ಥಕ ಕ್ಷಣದ ಸಂತಸದಲ್ಲಿ ಹೆಜ್ಜೆಯಿಟ್ಟಾಗ ಮಗುವಿನ ಹೆತ್ತವರ ಕಣ್ಣಲ್ಲಿ ಕಣ್ಣೀರು. ಅದರಲ್ಲಿ ಫಾತಿಮಾ,ಅದೆಲ್ಲಿಯ ಚಂದ್ರಪ್ರಭಾ….!
ಜಾತಿ, ಧರ್ಮ ಎಂಬ ವಿಷಬೀಜ ಬಿತ್ತುವ ಜನರ ನಡುವೆ ಇಂತಹ ಮಾನವೀಯ ಕೆಲಸಗಳು ಈ ಸರ್ವಜನಾಂಗದ ತೋಟದಲ್ಲಿ ನಡೆಯುತ್ತಲೇ ಇರುತ್ತದೆ.ಇಲ್ಲಿ ಮಾನವೀಯತೆ ಗೆಲ್ಲುವುದೇ ಹೊರತು ಜಾತೀಯತೆ ಅಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಆ ಚಂದ್ರಪ್ರಭಾ ಎಂಬ ಅಮ್ಮನಿಗೆ ನಮ್ಮದೊಂದು ಸಲಾಂ.





