ಸರ್ವೇ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಕೆ.ರಾಜು ವಿರುದ್ಧ ಈ ಹಿಂದೆ ಹಲವು ದೂರುಗಳಿತ್ತು. ಫೈಲ್ ಮೂ ಮಾಡಬೇಕಾದರೆ ಬಡ ಜನರನ್ನು ಸತಾಯಿಸುವುದು,ಲಂಚಕ್ಕೆ ಬೇಡಿಕೆ ಇಡುವುದು..ಹೀಗೆ. ಈತ ಒಮ್ಮೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬೀಳಬೇಕೆಂದು ಜನ ಕಾಯುತ್ತಿದ್ದರು.ಅದೆಷ್ಟು ಸಲ ಆತನಿಗೆ ಎಚ್ಚರಿಕೆ ನೀಡಿದ್ದರೂ ತನ್ನ ‘ಬುದ್ಧಿ ಬುಡಯೆ’ ಎನ್ನುವುದನ್ನು ಮುಂದುವರಿಸಲು ಹೋಗಿ ಕೊನೆಗೂ ಕೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಇದೇ ರಾಜು ವಿರುದ್ಧ ಮೂಡುಬಿದಿರೆಯ ರಾಜೇಶ್ ಕಡಲಕೆರೆ ಅವರು ಕಂದಾಯ ಸಚಿವರಿಗೂ ದೂರು ನೀಡಿದ್ದರು.
ಉಳ್ಳಾಲ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೆಯರ್ ಕೃಷ್ಣಮೂರ್ತಿ, ಮಂಗಳೂರು ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಬಿ.ಕೆ.ರಾಜು ಹಾಗೂ ಸುಪರ್ ವೈಸರ್ ಧನಶೇಖರ್ ಅವರು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಹೊರಗುತ್ತಿಗೆದಾರರೊಬ್ಬರ ಬಾಕಿ ಇರುವ ಸಂಬಳದ ಬಿಲ್ ಮಾಡಿಕೊಡಲು ಮತ್ತು ಅವರನ್ನು ಕರ್ತವ್ಯದಲ್ಲಿ ಮುಂದುವರಿಸಲು ನೇಮಕಾತಿ ಆದೇಶವನ್ನು ಮಾಡಿಕೊಡಲು ಕೃಷ್ಣಮೂರ್ತಿ 50,000, ಬಿ.ಕೆ.ರಾಜು 10,000 ಹಾಗೂ ಧನಶೇಖರ್ 10,000 ರೂ.ಗೆ ಬೇಡಿಕೆ ಇಟ್ಟಿದ್ದರು.
ಈಬಗ್ಗೆ ಆ ಹೊರಗುತ್ತಿಗೆದಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲಂಚ ಸ್ವೀಕರಿಸುವಾಗಲೇ ಈ ಮೂವರು ಲಂಚಾಧಿಕಾರಿಗಳು ಸಿಕ್ಕಿ ಬಿದ್ದಿದ್ದಾರೆ.
ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಅವರ ಮಾರ್ಗದರ್ಶನದಂತೆ ಉಪಾಧೀಕ್ಷಕರಾದ ಡಾ.ಗಾನ ಪಿ.ಕುಮಾರ್, ಸುರೇಶ್ ಕುಮಾರ್,ನಿರೀಕ್ಷಕರಾದ ಭಾರತಿ, ಚಂದ್ರಶೇಖರ್ ಕೆ.ಎನ್,ರವಿ ಪವಾರ್, ರಾಜೇಂದ್ರ ನಾಯ್ಡ್ ಎಂ.ಎನ್.ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.






