ಅಕ್ರಮ ಸಕ್ರಮ ಸಮಿತಿಯ ವಿಚಾರದಲ್ಲಿ ಹಿರಿಯರಾದ ವಾಸುದೇವ ನಾಯಕ್ ಅವರು ಪತ್ರಿಕಾಗೋಷ್ಠಿ ನಡೆಸಿ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ,ನಾನು ಈ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡಿಲ್ಲ,ವಾಸುದೇವ ನಾಯಕರೂ ರಾಜಕೀಯ ಮಾಡುವುದು ಬೇಡ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.
ಇತ್ತೀಚೆಗೆ ಮಿತ್ತಬೈಲು ವಾಸುದೇವ ನಾಯಕ್ ಅವರು ಪತ್ರಿಕಾಗೋಷ್ಠಿ ನಡೆಸಿ ‘ ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷರಾಗಿರುವ ಶಾಸಕರು ಈ ಸಮಿತಿ ಮತ್ತು ಇತರ ಸಮಿತಿಗಳ ಮೀಟಿಂಗ್ ಮಾಡದೆ ಬಡ ಜನರಿಗೆ ಅನ್ಯಾಯವೆಸಗುತ್ತಿದ್ದಾರೆ’ ಎಂದು ಆರೋಪಿಸಿದ್ದರು.
ಈಬಗ್ಗೆ ಅದಕ್ಕೆ ಸ್ಪಷ್ಟೀಕರಣ ನೀಡಲು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ‘ ಕಂದಾಯ ಸಚಿವರಾಗಿರುವ ಕೃಷ್ಣ ಭೈರೇಗೌಡ ಅವರು ಅಕ್ರಮ ಸಕ್ರಮಕ್ಕೆ ಕೆಲವೊಂದು ಕಠಿಣ ಕಾನೂನು ತಂದಿರುವುದರಿಂದ ಅರ್ಜಿದಾರರ ವಿವರಗಳೆಲ್ಲಾ ಆಪ್ ಮೂಲಕವೇ ದಾಖಲಾಗಬೇಕಿದೆ, ಹಾಗಾಗಿ ಅರ್ಜಿ ವಿಲೇವಾರಿ ವಿಳಂಬವಾಗುತ್ತಿದೆ, ಈಗ ಹತ್ತು ಫೈಲುಗಳು ರೆಡಿಯಾಗಿದ್ದು ಅದನ್ನು ಶೀಘ್ರದಲ್ಲೇ ನೀಡುವ ವ್ಯವಸ್ಥೆ ಮಾಡುತ್ತೇವೆ, ಉಳಿದಂತೆ ಹಂತಹಂತವಾಗಿ ನೀಡಿತ್ತೇವೆ ‘ ಎಂದು ಸ್ಪಷ್ಟಪಡಿಸಿದರು.
ನಾನು ಕಳೆದ ಅವಧಿಯಲ್ಲಿ ಅಕ್ರಮಸಕ್ರಮ ಸಮಿತಿಯಲ್ಲಿ ಸಾಕಷ್ಟು ಜನರಿಗೆ ಹಕ್ಕುಪತ್ರ ನೀಡಿದ್ದೇನೆ,ನನ್ನ ಕಚೇರಿಗೆ ಬಂದ ಯಾರಿಗೂ ಆ ಪಕ್ಷದವನು,ಈ ಪಕ್ಷದವನು ಎಂದು ತಾರತಮ್ಯ ಮಾಡಿಲ್ಲ, ಸಾಕಷ್ಟು ಅನುಭವಿಯಾಗಿರುವ ವಾಸುದೇವ ನಾಯಕರು ಜನರಿಗೇಕೆ ತಪ್ಪು ಮಾಹಿತಿ ನೀಡಿದ್ದಾರೆನ್ನುವುದೇ ಅರ್ಥವಾಗುತ್ತಿಲ್ಲವೆಂದರು.
ಬಿಜೆಪಿ ಮುಖಂಡರಾದ ಶಾಂತಿಪ್ರಸಾದ್ ಹೆಗ್ಡೆ, ಬಾಹುಬಲಿ ಪ್ರಸಾದ್,ರಂಜಿತ್ ಪೂಜಾರಿ, ಜಯಶ್ರೀ ಕೇಶವ್, ನಾಗರಾಜ್ ಪೂಜಾರಿ, ಸುಕೇಶ್ ಶೆಟ್ಟಿ, ಗೋಪಾಲ ಶೆಟ್ಟಿಗಾರ್, ಲಕ್ಷ್ಮಣ ಪೂಜಾರಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.





