ಬಜ್ಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಗೆ ಇದೇ ಮೊದಲ ಬಾರಿಗೆ ಇದೇ ಭಾನುವಾರ ಚುನಾವಣೆ ನಡೆಯಲಿದೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್, ಎಸ್.ಡಿ.ಪಿ.ಐ ಅಂತ ಭರ್ಜರಿ ಮತಬೇಟೆ ನಡೆಯುತ್ತಿದೆ.
ಇದು ಕಾಂಗ್ರೆಸ್- ಬಿಜೆಪಿಗಿಂತಲೂ ಮಿಥುನ್ ರೈ ಮತ್ತು ಶಾಸಕ ಉಮಾನಾಥ ಕೋಟ್ಯಾನ್ ನಡುವಿನ ಸ್ಪರ್ಧೆ ಎಂದೇ ಹೇಳಲಾಗುತ್ತಿದೆ.ಯಾಕೆಂದರೆ ಇಲ್ಲಿನ ರಿಸಲ್ಟ್ ಮುಂದಿನ ಎಲ್ಲಾ ಚುನಾವಣೆಗಳ ಮೇಲೂ ಪರಿಣಾಮ ಬೀರುತ್ತದೆ. ಮಂದಿನ ದಿನಗಳಲ್ಲಿ ನಡೆಯಲಿರುವ ಮೂಡುಬಿದಿರೆ ಪುರಸಭಾ ಚುನಾವಣೆಗೂ ಇಲ್ಲಿನ ರಿಸಲ್ಟ್ ಖಂಡಿತಾ ಎಫೆಕ್ಟ್ ನೀಡಲಿರುವುದರಿಂದ ಮಿಥುನ್ ರೈ ಮತ್ತು ಕೋಟ್ಯಾನ್ ಅವರಿಗಿದು ಪ್ರತಿಷ್ಠೆಯ ಚುನಾವಣೆಯಾಗಿದೆ. ತಮ್ಮ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಈ ಇಬ್ಬರು ನಾಯಕರಿಗೂ ಇದು ನಿರ್ಣಾಯಕವಾದ ಚುನಾವಣೆಯಾಗಿದ್ದು ಹಾಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ದಂಡು ಈ ಎರಡೂ ಕಡೆಗಳಲ್ಲೂ ದಿನಂಪ್ರತಿ ಫೀಲ್ಡ್ ವರ್ಕ್ ನಡೆಸುತ್ತಿದೆ.
ಬಜ್ಪೆ ಮತ್ತು ಕಿನ್ನಿಗೋಳಿ ಪಂಚಾಯತ್ ಗಳನ್ನು ಪಟ್ಟಣ ಪಂಚಾಯತ್ ಗಳಾಗಿ ಮೇಲ್ದರ್ಜೆಗೇರಿಸಿದ ಬಳಿಕ ನಡೆಯುವ ಮೊದಲ ಚುನಾವಣೆಯಿದು.ಕೆಲವು ಸ್ಥಳೀಯ ಪಂಚಾಯತ್ ಗಳೂ ಸೇರ್ಪಡೆಗೊಂಡಿದೆ.
ಬಜ್ಪೆ ಪಟ್ಟಣ ಪಂಚಾಯತ್ ನ 19 ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ 18 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಎರಡೂ ಪಕ್ಷಗಳಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.ಅಲ್ಲದೆ ಎಸ್.ಡಿ.ಪಿ.ಐ ಬಜ್ಪೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಕಾಂಗ್ರೆಸ್ ಗೆ ಕೊಂಚ ಹಿನ್ನಡೆಯಾಗಲಿದೆ ಎನ್ನಲಾಗುತ್ತಿದೆ.ಅಲ್ಲದೆ ಅಲ್ಲಿ ಎಸ್.ಡಿ.ಪಿ.ಐ. ಮೂರರಿಂದ ನಾಲ್ಕು ಸ್ಥಾನಗಳನ್ನು ಗಳಿಸುವುದಾಗಿಯೂ ಹೇಳಲಾಗುತ್ತಿದೆ.
ಕಾಂಗ್ರೆಸ್ ಮುಖಂಡನಾಗಿದ್ದು, ಸಾಮಾಜಿಕ ಹೋರಾಟಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಸಿರಾಜ್ ಅವರಿಗೆ ಟಿಕೆಟ್ ನಿರಾಕರಿಸಿ ಬೇರೆಯವರಿಗೆ ಅವಕಾಶ ನೀಡಿರುವುದು ಕೂಡಾ ಅಲ್ಲಿ ಕಾಂಗ್ರೆಸ್ ಗೆ ನಷ್ಟವಾಗಲಿದೆ.ಸಿರಾಜ್ ಅವರ ಬಳಗ ಪಕ್ಷೇತರರಾಗಿ ಕಣಕ್ಕಿಳಿದಿರುವುದರಿಂದ ಹೋರಾಟ ಇನ್ನೂ ಜೋರಾಗಿದೆ.ಅಂತೂ 19 ರ ಪೈಕಿ ದೊಡ್ಡ ಸಂಖ್ಯೆ ಬಿಜೆಪಿ ಪಾಲಾಗಲಿದೆ ಎನ್ನುವ ಮುನ್ಸೂಚನೆ ಸಿಗುತ್ತಿದೆ.
ಕಿನ್ನಿಗೋಳಿಯಲ್ಲಿ ಎರಡೂ ಪಕ್ಷಗಳಿಗೂ ಸಮಾನ ಅವಕಾಶವಿದೆಯೆನ್ನಲಾಗುತ್ತಿದೆ.
ಈ ಎರಡೂ ಕಡೆಯ ಚುನಾವಣಾ ಫಲಿತಾಂಶವು ಮುಂಬರುವ ಮೂಡುಬಿದಿರೆ ಪುರಸಭಾ ಚುನಾವಣೆ ಹಾಗೂ ಇತರ ಚುನಾವಣೆಗಳಲ್ಲಿ ಪರಿಣಾಮ ಬೀರುವುದು ಸ್ಪಷ್ಟವಾಗಿದ್ದು ಮೂಡುಬಿದಿರೆಯ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಪ್ರತಿನಿತ್ಯ ಅತ್ತ ಹೋಗಿ ಮತಬೇಟೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಎರಡೂ ಪಕ್ಷಗಳಲ್ಲೂ ಸಣ್ಣಪುಟ್ಟ ಅಸಮಾಧಾನಗಳಿದ್ದು ಅವೆಲ್ಲವನ್ನೂ ಬದಿಗಿಟ್ಟು ಫಲಿತಾಂಶಕ್ಕಾಗಿ ಶ್ರಮಿಸುತ್ತಿದ್ದಾರೆ.
ಒಟ್ಟಿನಲ್ಲಿ ಮಿಥುನ್ ರೈ ಮತ್ತು ಉಮಾನಾಥ ಕೋಟ್ಯಾನ್ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಈ ಚುನಾವಣೆಯಲ್ಲಿ ಪಾಸಾಗಲೇಬೇಕೆಂಬ ವಾತಾವರಣ ಸೃಷ್ಟಿಯಾಗಿದೆ.





