ತೋಡಾರು ಬಂಗಬೆಟ್ಟು ಶಾಲೆಯ ಆಟದ ಮೈದಾನದಲ್ಲಿ ಪದವಿ ಪೂರ್ವ ಕಾಲೇಜಿನ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವ ಶಿಕ್ಷಣ ಇಲಾಖೆಯ ಕ್ರಮಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದು ಕಾಲೇಜಿನ ಪ್ರಾಂಶುಪಾಲರನ್ನು ಭೇಟಿಯಾದ ಹಳೆವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ಸ್ಥಳೀಯ ಮುಖಂಡರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಂಗಬೆಟ್ಟು ಶಾಲೆಯ ಸುಮಾರು ಎರಡೂವರೆ ಎಕರೆ ಜಾಗದಲ್ಲಿ ಹೈಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜಿನ ಕಟ್ಟಡಕ್ಕೆ ಬೇಕಾಗಿ 90 ಸೆನ್ಸ್ ಜಾಗವನ್ನು ಬಿಟ್ಟುಕೊಡಲಾಗಿತ್ತು. ಆ ಜಾಗದಲ್ಲಿ ಹೈಸ್ಕೂಲ್ ಕಟ್ಟಡ ನಿರ್ಮಾಣವಾಗಿ ಕೆಲವು ವರ್ಷಗಳು ಕಳೆದಿದೆ. ಮಧ್ಯದಲ್ಲಿ ಒಂದು ಎಕರೆ ವಿಸ್ತೀರ್ಣದ ವಿಶಾಲವಾದ ಮೈದಾನವಿದ್ದು ಈ ಮೈದಾನಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ.

ಬಂಗಬೆಟ್ಟು ಗ್ರೌಂಡ್ ಎಂದೇ ಹೆಸರು ಪಡೆದಿರುವ ಈ ಮೈದಾನದಲ್ಲಿ ಶಾಲಾ,ಪ್ರೌಢಶಾಲಾ ಆಟೋಟಗಳು, ಸ್ಥಳೀಯ ಯುವಕರ,ಹಳೆವಿದ್ಯಾರ್ಥಿಗಳ ಕ್ರಿಕೆಟ್ ಪಂದ್ಯಾಕೂಟಗಳು ನಡೆದಿದೆ. ಹೊನಲು ಬೆಳಕಿನ ಕ್ರಿಕೆಟ್ ಪಂದ್ಯ ನಡೆದಿರುವುದೂ ಇದೇ ಮೈದಾನದಲ್ಲಿ.
ಹೀಗಿರುವಾಗ ಈ ಮೈದಾನವನ್ನು ಮುಟ್ಟದೆ ಹಾಗೇ ಮುಂದುವರಿಸಬೇಕು, ಹೊಸ ಕಟ್ಟಡವನ್ನು ಹೈಸ್ಕೂಲ್ ಕಟ್ಟಡದ ಪಕ್ಕದಲ್ಲಿ ನಿರ್ಮಿಸಿ ಎನ್ನುವುದು ಗ್ರಾಮಸ್ಥರ ವಾದವಾಗಿದೆ.
ಹೊಸ ಕಟ್ಟಡಕ್ಕೆ ನಮ್ಮ ವಿರೋಧವಿಲ್ಲ, ಆದರೆ ಆಟದ ಮೈದಾನದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ನಮ್ಮ ವಿರೋಧವಿದೆಯೆಂದು ಗ್ರಾಮಸ್ಥರು ಹೇಳಿದ್ದಾರೆ.
ನಿನ್ನೆಯ ದಿನ ಗ್ರಾಮಸ್ಥರ ಗಮನಕ್ಕೆ ತಾರದೆ , ಸಂಬಂಧಪಟ್ಟ ಪಂಚಾಯತ್ ಅಧ್ಯಕ್ಷರನ್ನು ಬಿಟ್ಟು ಪಕ್ಕದ ಮತ್ತೊಂದು ಪಂಚಾಯತ್ ಅಧ್ಯಕ್ಷರನ್ನು ಆಹ್ವಾನಿಸಿ ಗುದ್ದಲಿಪೂಜೆ ನಡೆಸಿರುವುದು ಕೂಡಾ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ಕಾಲೇಜಿನ ಪ್ರಾಂಶುಪಾಲರನ್ನು ಭೇಟಿಯಾಗಿ ತಮ್ಮ ವಿರೋಧವನ್ನು ಗ್ರಾಮಸ್ಥರು ಹೇಳಿದ್ದಾರೆ.
ಪಂಚಾಯತ್ ಸದಸ್ಯರಾದ ಎಂ.ಎ.ರಝಾಕ್, ಎಂ.ಎ.ಅಶ್ರಫ್, ಹರಿಪ್ರಸಾದ್ ಶೆಟ್ಟಿ, ಮುಖಂಡರಾದ ದಿವಾಕರ ಶೆಟ್ಟಿ,ಡಿ.ಎ.ಉಸ್ಮಾನ್,ಎಂ.ಜಿ.ಮುಹಮ್ಮದ್, ಝುಬೈರ್ ತೋಡಾರ್, ದಯಾನಂದ ಶೆಟ್ಟಿ, ಹಫೀಝ್ ತೋಡಾರ್, ಹಕೀಮ್ ತೋಡಾರ್, ರಿಝ್ವಾನ್ ತೋಡಾರ್ ಮತ್ತಿತರರು ಉಪಸ್ಥಿತರಿದ್ದರು.





